ADVERTISEMENT

ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಳಂಬಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 4:54 IST
Last Updated 27 ಜುಲೈ 2017, 4:54 IST

ಭದ್ರಾವತಿ: ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಫಲಾನುಭವಿ ಪಟ್ಟಿ ಸಿದ್ಧವಾಗಿದ್ದರೂ ವಿತರಣೆಯಲ್ಲಿ ಆಗಿರುವ ವಿಳಂಬವನ್ನು ಪ್ರಶ್ನಿಸಿ ಸದಸ್ಯರು ಅಸಮಾಧಾನ ಹೊರಹಾಕಿದರು. ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಳಂಬಧೋರಣೆ ಯನ್ನು ಸದಸ್ಯರು ಖಂಡಿಸಿದರು.

ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 2022ರ ವೇಳೆಗೆ ‘ಸರ್ವರಿಗೂ ಸೂರು’ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಲು ಆಯುಕ್ತ ಮನೋಹರ ಮುಂದಾದಾಗ ಸದಸ್ಯ ಚನ್ನಪ್ಪ ಆಶ್ರಯ ಯೋಜನೆ ಪಟ್ಟಿಯ ವಿಚಾರ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ನಗರಸಭೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರಿಗೆ ಸಲ್ಲಿಸಲಾಗಿದೆ. ಸಭೆಯಲ್ಲಿ ಅದರ ಕುರಿತು ಚರ್ಚಿಸಿ, ಒಪ್ಪಿಗೆ ನೀಡಿದ ಕೂಡಲೇ ನಿವೇಶನ ವಿತರಿಸಲು ನಾವು ಸಿದ್ಧರಿದ್ದೇವೆ’ ಎಂದರು.

ADVERTISEMENT

ಸಮಿತಿ ಅಧ್ಯಕ್ಷರು ಸಭೆಯಲ್ಲಿ ಇದ್ದಾರೆ. ಅವರೇ ಉತ್ತರ ನೀಡಲಿ ಎಂದು ಚನ್ನಪ್ಪ ಒತ್ತಾಯಿಸಿದರು. ದನಿ ಗೂಡಿಸಿದ ಸದಸ್ಯ ಟಿಪ್ಪುಸುಲ್ತಾನ್, ಕೂಡಲೇ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಎಂ.ಜೆ.ಅಪ್ಪಾಜಿ ಉತ್ತರಿಸಿ, ‘ನಮ್ಮ ಬಳಿ ಇರುವ 700 ನಿವೇಶನಕ್ಕೆ 16,000 ಅರ್ಜಿಗಳು ಬಂದಿವೆ.

ಇದನ್ನು ಪರಿಶೀಲಿಸಿ ವಿತರಣೆ ಮಾಡಿದರೂ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತವೆ. ಅದಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡುವ ಮುಲಾಜಿಗೆ ಸಿಕ್ಕಿದ್ದೇವೆ’ ಎಂದು  ಚಟಾಕಿ ಹಾರಿಸಿ ವಿಷಯಕ್ಕೆ ತೆರೆ ಎಳೆದರು.

ಗುತ್ತಿಗೆ ಪಡೆದವರ ಕರ್ತವ್ಯ: ಸ್ವಚ್ಛತೆಗಾಗಿ ಗುತ್ತಿಗೆ ಪಡೆದಿರುವ ವ್ಯಕ್ತಿಗಳು ನಿಗದಿ ಸಂಖ್ಯೆಯ ನೌಕರರನ್ನು ಕೆಲಸಕ್ಕೆ ಒದಗಿಸುತ್ತಿಲ್ಲ. ಹೀಗಾಗಿ ತೊಂದರೆ ಉಂಟಾಗಿದೆ ಎಂದು ಸದಸ್ಯ ಶಿವರಾಜ್ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಅನಿಲಕುಮಾರ್, ಟಿಪ್ಪುಸುಲ್ತಾನ್, ಸುಧಾಮಣಿ, ‘80 ಜನ ಸಿಬ್ಬಂದಿ ಒದಗಿಸಬೇಕಾದ ಗುತ್ತಿಗೆದಾರ ಪ್ರತಿದಿನ ಅಷ್ಟು ಸಿಬ್ಬಂದಿಯನ್ನು ಒದಗಿಸುತ್ತಿಲ್ಲ. ಹೀಗಾಗಿ ವಾರ್ಡ್ ಸ್ವಚ್ಛತೆಗೆ ಕೆಲಸಗಾರರ ಕೊರತೆಯಾಗಿದೆ. ಇದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಆಯುಕ್ತ ಮನೋಹರ, ಪರಿಸರ ಎಂಜಿನಿಯರ್ ರುದ್ರೇಗೌಡ ಸಮಜಾಯಿಷಿ ನೀಡಿ, ‘ಕೆಲಸಕ್ಕೆ ಬಾರದ ಸಿಬ್ಬಂದಿಗೆ ಹಣ ಕಡಿತ ಮಾಡಿದ್ದೇವೆ ಎಂದರು. ಸಿಬ್ಬಂದಿ ಒದಗಿಸುವುದು ಗುತ್ತಿಗೆ ಪಡೆದವರ ಕರ್ತವ್ಯ. ಅದರಲ್ಲಿ ಲೋಪ ವಾದರೆ ಟೆಂಡರ್ ರದ್ದು ಮಾಡಿ ಎಂದು ಸದಸ್ಯರು ಸೂಚಿಸಿದರು.

ಖಾತೆ ದಾಖಲು: ಕವಲಗುಂದಿ ಜನತಾ ಕಾಲೊನಿಯಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಹಕ್ಕುಪತ್ರ ಪಡೆದಿರುವ 20 ಮಂದಿ ಫಲಾನುಭವಿಗಳ ಖಾತೆ ದಾಖಲಿಸುವಂತೆ ಹಾಗೂ ನಗರದ ವಿವಿಧೆಡೆ ಹಕ್ಕುಪತ್ರ ಪಡೆದಿರುವ 46 ಮಂದಿಗೆ ಖರೀದಿ ಪತ್ರ ವಿತರಿಸುವ ಪ್ರಸ್ತಾವಕ್ಕೆ ಸಭೆ ಒಪ್ಪಿಗೆ ನೀಡಿತು.

ತಮ್ಮಣ್ಣ ಕಾಲೊನಿ ಜನರಿಗೂ ಖಾತೆ ದಾಖಲು ಮಾಡಿಕೊಡಿ ಎಂದು ಸದಸ್ಯೆ ರೇಣುಕಾ ಒತ್ತಾಯಿಸಿದರು.ಜಲ ಸಂಗ್ರಹಾಗಾರದ ಸ್ವಚ್ಛತೆ ಮಾಡುವ ಪ್ರಸ್ತಾವ ಸೇರಿದಂತೆ ನೀರು, ಚರಂಡಿ, ವಿವಿಧ ಯೋಜನೆ ಫಲಾನುಭವಿಗಳಿಗೆ ವಿವಿಧ ವಸ್ತುಗಳ ವಿತರಣೆ ಸಂಬಂಧ ಪ್ರಸ್ತಾವಗಳಿಗೂ ಸಭೆ  ಒಪ್ಪಿಗೆ ನೀಡಿತು.

ದಸರಾ ಉತ್ಸವಕ್ಕೆ ಹೆಚ್ಚಿನ ಅನುದಾನ ನೀಡುವಂತೆ ರೇಣುಕಾ, ಸುಧಾಮಣಿ, ಲಲಿತಮ್ಮ ಒತ್ತಾಯಿಸಿದರು. ತರೀಕೆರೆ ರಸ್ತೆಯ ಭದ್ರಾನದಿ ಗಣಪತಿ ವಿಗ್ರಹ ವಿಸರ್ಜನಾ ಸ್ಥಳದಲ್ಲಿ ತುರ್ತು ಕಾಮಗಾರಿ ಮಾಡುವಂತೆ ಒತ್ತಾಯಿಸಲಾಯಿತು.

ಗುತ್ತಿಗೆ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುವವರು ಅವರನ್ನು ಕೆಲಸದಿಂದ ತೆಗೆಯುವಾಗ ಸಭೆಯ ಗಮನಕ್ಕೆ ತರಬೇಕು ಎಂಬುದೂ ಸೇರಿ 88 ವಿಷಯಗಳಿಗೆ ಸಭೆ ಅನುಮೋದನೆ ನೀಡಿತು. ವಿವಿಧ ವಿಷಯದ ಮೇಲಿನ ಚರ್ಚೆಯಲ್ಲಿ ಸದಸ್ಯರಾದ ರಾಜು, ಬದರಿ ನಾರಾಯಣ, ಬಾಲಕೃಷ್ಣ, ನಟರಾಜ್, ವಿಶಾಲಾಕ್ಷಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.