ADVERTISEMENT

ಬಗರ್‌ಹುಕುಂ ರೈತರಿಗೆ ಪರಿಹಾರ ಕೊಡಿ

ಸುವರ್ಣ ಕಾರಿಡಾರ್ ಯೋಜನೆಗೆ ಭೂಮಿ ನೀಡಿದವರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2017, 4:12 IST
Last Updated 12 ಮೇ 2017, 4:12 IST
ಶಿವಮೊಗ್ಗ: ಕರ್ನಾಟಕ ಸುವರ್ಣ ಕಾರಿಡಾರ್ ಯೋಜನೆಗೆ ಭೂಮಿ ನೀಡಿದ ಬಗರ್‌ಹುಕುಂ ಸಾಗುವಳಿದಾರರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ದೇವಕಾತಿಕೊಪ್ಪ ಮತ್ತು ಸಿದ್ಲಿಪುರ ರೈತ ಒಕ್ಕೂಟದ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
 
ಸುವರ್ಣ ಕಾರಿಡಾರ್ ಯೋಜನೆ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಎಐಎಡಿಬಿಯಿಂದ ಶಿವಮೊಗ್ಗ ತಾಲ್ಲೂಕು ಸಿದ್ಲಿಪುರ ಗ್ರಾಮದ ಸರ್ವೆ ಸಂಖ್ಯೆ 6 ಮತ್ತು 28ರಲ್ಲಿ 8 ಎಕರೆ ಜಮೀನನ್ನು  ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೀಗೆ ವಶಪಡಿಸಿಕೊಂಡ 33 ಸಾಗುವಳಿ ದಾರರಿಗೆ ಪರಿಹಾರ ಬಿಡುಗಡೆ 
ಮಾಡಿಲ್ಲ ಎಂದು ದೂರಿದರು.
 
ಸುಮಾರು 35 ವರ್ಷಗಳಿಂದ ಇಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಬಗರ್‌ಹುಕುಂ ಜಮೀನು ಹೊರತು ಪಡಿಸಿದರೆ, ಬೇರೆ ಯಾವುದೇ ಆಸ್ತಿ ಇಲ್ಲ. ಸಾಗುವಳಿ ಮಾಡುತ್ತಿದ್ದ ರೈತರು ಭೂಮಿ ಕಳೆದುಕೊಂಡ ನಂತರ ಜೀವನಕ್ಕೆ ಯಾವುದೇ ಆದಾಯ ಇಲ್ಲದಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಶಿವಮೊಗ್ಗ ತಾಲ್ಲೂಕಿನ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ ಬಗರ್ ಹುಕುಂ ಸಾಗುವಳಿದಾರರಿಗೆ ಅನುಕಂಪದ ಪರಿಹಾರ ನೀಡಲಾಗಿದೆ. ಅದೇ ಬಗೆಯಲ್ಲಿ 33 ಸಾಗುವಳಿದಾರರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
 
ಸಮಿತಿಯ ಅಧ್ಯಕ್ಷ ಎಸ್.ಎಂ. ಲೋಕೇಶಪ್ಪ, ಕಾರ್ಯದರ್ಶಿ ಧನಂಜಯ, ನಾಗರಾಜ್ ಬೋವಿ, ಉಷಾ, ಮಲ್ಲೇಶಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.