ADVERTISEMENT

ಭದ್ರಾವತಿ: ಸ್ವಚ್ಛತೆಯತ್ತ ನಗರಸಭೆ ಚಿತ್ತ

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:12 IST
Last Updated 21 ಮೇ 2017, 5:12 IST

ಭದ್ರಾವತಿ: ಸ್ವಚ್ಛ ನಗರ ಸರ್ವೇಕ್ಷಣಾ ಪಟ್ಟಿಯಲ್ಲಿ ಭದ್ರಾವತಿ ಪ್ರಸ್ತುತ ರಾಜ್ಯಮಟ್ಟದಲ್ಲಿ 11ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಬಾರಿ   ಐದರೊಳಗೆ ಸ್ಥಾನ ಪಡೆಯಲು ನಗರಸಭೆ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ನಗರಸಭೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡುವ ಸಲುವಾಗಿ ಸಮುದಾಯದ ಸಹಭಾಗಿತ್ವವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ.

ಸಲಹೆ ಸೂಚನೆಗೆ ಆಹ್ವಾನ: ನಗರ ವ್ಯಾಪ್ತಿಯಲ್ಲಿರುವ 35 ವಾರ್ಡ್‌ ಗಳಲ್ಲಿರುವ ವಸತಿ ಪ್ರದೇಶದಲ್ಲಿ ಪ್ರತಿದಿನ ಕಸ ಸಂಗ್ರಹಿಸಲು 40ಕ್ಕೂ ಅಧಿಕ ಟಿಪ್ಪರ್ ವಾಹನ ಬಳಕೆಯಾಗುತ್ತಿದೆ. ನಗರ ಸಭೆಯ ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿಯೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಭೆ ನಡೆಸಿ ಸಲಹೆ–ಸೂಚನೆ ಪಡೆಯುತ್ತಿದ್ದಾರೆ.

ADVERTISEMENT

ತಂತ್ರಜ್ಞಾನದ ಬಳಕೆ:  ಕಸ ವಿಂಗಡಣೆಗೆ ಅಗತ್ಯವಿರುವ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆರಂಭಿಸಿದೆ. ಸಂಗ್ರಹಿಸಿದ ಕಸವನ್ನು ಹಿರಿಯೂರಿನಲ್ಲಿ ವಿಂಗಡಿಸುವ ಕಾರ್ಯ ನಡೆದಿದೆ. ಒಣಗಿದ, ಹಸಿ ತ್ಯಾಜ್ಯವನ್ನು ವಿಂಗಡಣೆ ಮತ್ತು ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಕೆಗೆ ತ್ಯಾಜ್ಯ ಸಂಸ್ಕರಣಾ ಯಂತ್ರವನ್ನು ಅಳವಡಿಸಲಾಗಿದ್ದು, ಕಾರ್ಯಾರಂಭ ಆಗಬೇಕಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಮನೋಹರ್,  ಕಸ ವಿಲೇವಾರಿ ಪ್ರಕ್ರಿಯೆಗೆ ಅವಶ್ಯ ಇರುವ ಯಂತ್ರಗಳ ಬಳಕೆ ಯಶಸ್ವಿಯಾದರೆ ನಗರಸಭೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ಪ್ಲಾಸ್ಟಿಕ್ ನಿಷೇಧದ ಗುರಿ: ಅಂಗಡಿ–ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದ್ದು, ಶೇ 90ರಷ್ಟು ಗುರಿ ಸಾಧಿಸಿದ್ದೇವೆ. ಫ್ಲೆಕ್ಸ್, ಭಿತ್ತಿಪತ್ರಗಳು, ಜಾಹೀರಾತು ಫಲಕಗಳ ಬಳಕೆಗೂ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸ್ವಚ್ಛ ಶೌಚಾಲಯ: ನಗರಸಭಾ ವ್ಯಾಪ್ತಿಗೆ ಬರುವ ನಾಲ್ಕು ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡುವ  ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಂತೆ ಮೈದಾನ, ಬಸವೇಶ್ವರ ವೃತ್ತ, ಸರ್ಕಾರಿ ಆಸ್ಪತ್ರೆ ಹಾಗೂ ನಗರಸಭೆ ಮುಂಭಾಗದ ಶೌಚಾಲಯಕ್ಕೆ ‘ಪೇ ಅಂಡ್ ಯೂಸ್’ ಫಲಕ ಹಾಕಲಾಗಿದೆ.

* * 

ನಗರ ಸಭೆ ಸ್ವಚ್ಛತೆ ಆದ್ಯತೆ ನೀಡಲಿದ್ದು, ಮುಂದಿನ ವರ್ಷ ಒಳ್ಳೆಯ ಸ್ಥಾನ ಪಡೆಯಲು ಶ್ರಮ ಹಾಕುತ್ತೇವೆ
ಮನೋಹರ್ , ಪೌರಾಯುಕ್ತ
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.