ADVERTISEMENT

‘ಮಂಗನ ಕಾಯಿಲೆ; ಆತಂಕ ಬೇಡ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 9:39 IST
Last Updated 12 ಫೆಬ್ರುವರಿ 2017, 9:39 IST
ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಶನಿವಾರ ಮಂಗನ ಕಾಯಿಲೆ ಹಾಗೂ ಎಚ್‌1ಎನ್‌1 ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ಗಳಿಗೆ ಶಾಸಕ ಕಿಮ್ಮನೆ ರತ್ನಾಕರ ಭೇಟಿ ನೀಡಿ ಪರಿಶೀಲಿಸಿದರು
ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಶನಿವಾರ ಮಂಗನ ಕಾಯಿಲೆ ಹಾಗೂ ಎಚ್‌1ಎನ್‌1 ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ಗಳಿಗೆ ಶಾಸಕ ಕಿಮ್ಮನೆ ರತ್ನಾಕರ ಭೇಟಿ ನೀಡಿ ಪರಿಶೀಲಿಸಿದರು   

ತೀರ್ಥಹಳ್ಳಿ:  ‘ಮಂಗನ ಕಾಯಿಲೆ ಹಾಗೂ ಎಚ್‌1ಎನ್‌1 ರೋಗದ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ,  ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳಲು ಉದಾಸೀನ ಮಾಡಬಾರದು’ ಎಂದು ಶಾಸಕ ಕಿಮ್ಮನೆ ರತ್ನಾಕರ ಹೇಳಿದರು.

ಶನಿವಾರ ಪಟ್ಟಣದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ ರೋಗಿಗಳ ಪರಿಸ್ಥಿತಿ ಪರಿಶೀಲಿಸಿದ ನಂತರ ನಡೆದ ಸಾರ್ವಜನಿಕರ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

‘ಬಿಸಿಲ ಪ್ರಮಾಣ ಹೆಚ್ಚಿರುವುದರಿಂದ ರೋಗವನ್ನು ಹತೋಟಿಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯ. ಜನರಲ್ಲಿ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಕರಪತ್ರ ಹಂಚಬೇಕು. ಸಂತೆ ರದ್ದುಪಡಿಸುವ ಕುರಿತು ತೀರ್ಮಾನಿಸಲು ಜನಪ್ರತಿನಿಧಿಗಳ ಜತೆ ಸಭೆ ನಡೆಸಬೇಕು’ ಎಂದು ಹೇಳಿದರು.

‘ಜ್ವರ ಬಾಧಿತ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಂತೆ ಎಚ್ಚರ ವಹಿಸಬೇಕು. ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಎಚ್‌1ಎನ್‌1 ಹಾಗೂ ಮಂಗನ ಕಾಯಿಲೆ ಕುರಿತು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದರು.

ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಕಿರಣ್‌ ಮಾತನಾಡಿ, ‘ಮಂಗನ ಕಾಯಿಲೆ ಪ್ರದೇಶದಲ್ಲಿ ಅಗತ್ಯ ಮುನ್ನ ಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರ  ಆರೋಗ್ಯ ಸೇವೆ ಒದಗಿಸ ಲಾಗಿದೆ. ರೋಗಪೀಡಿತ ಪ್ರದೇಶದಲ್ಲಿ ಸಂಪೂರ್ಣ ಲಸಿಕೆ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್‌ ಸುರಗಿಹಳ್ಳಿ ಮಾತನಾಡಿ, ‘ 24 ಗಂಟೆಗಳ ಕಾಲ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು. ಸಭೆಯಲ್ಲಿ ಜೆ.ಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್‌, ಡಾ.ಪ್ರಭಾಕರ್‌ ಕಾಯಿಲೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆದರ್ಶ, ಜಿಲ್ಲಾ ಪಂಚಾಯ್ತಿ ಸದಸ್ಯೆ ಕಲ್ಪನಾ, ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಶಾಂತ್‌ ಕುಕ್ಕೆ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆಸ್ತೂರ್‌ ಮಂಜುನಾಥ್‌,   ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾರೋಗೊಳಿಗೆ ಪದ್ಮನಾಭ್‌, ತಹಶೀಲ್ದಾರ್‌ ಧರ್ಮೋಜಿರಾವ್‌, ಗ್ರಾಮ ಪಂಚಾಯ್ತಿ  ಸದಸ್ಯರಾದ ಮಂಜುನಾಥಶೆಟ್ಟಿ, ಶ್ರೀಮತಿ, ಪಿಡಿಓ ಮಂಜುನಾಥ್‌, ಕೆಡಿಪಿ ಸದಸ್ಯ ಸಂದೀಪ್‌, ಗ್ರಾಮ ಪಂಚಾಯ್ತ ಮಾಜಿ ಸದಸ್ಯ ಸಿ.ಆರ್‌.ಮಂಜುನಾಥ್‌ ಇತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.