ADVERTISEMENT

ಮರಳು ಪೂರೈಸುವಂತೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:30 IST
Last Updated 14 ಮಾರ್ಚ್ 2017, 5:30 IST

ತೀರ್ಥಹಳ್ಳಿ: ‘ಸರ್ಕಾರದ ಶೌಚಾಲಯ, ವಸತಿ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಮರಳು ಪೂರೈಸಬೇಕು’ ಎಂದು ಆಗ್ರಹಿಸಿ ಸೋಮವಾರ ಶಾಸಕ ಕಿಮ್ಮನೆ ರತ್ನಾಕರ ಅವರ ಕಚೇರಿ ಮುಂದೆ ನಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಫಲಾನುಭವಿಗಳು  ಧರಣಿ ನಡೆಸಿದರು.

ಧರಣಿ ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು.

ವಸತಿ, ಶೌಚಾಲಯ ನಿರ್ಮಾಣಕ್ಕೆ ಮರಳು ಪೂರೈಸುವಂತೆ 3 ತಿಂಗಳಿನಿಂದಲೂ ಮನವಿ ಮಾಡಲಾಗಿದೆ. ಆಡಳಿತ ಸ್ಪಂದಿಸಿಲ್ಲ. ಆರ್ಥಿಕ ವರ್ಷದ ಕೊನೆಯಿಂದಾಗಿ ಅನುದಾನ ವಾಪಸ್ಸಾಗುವ ಆತಂಕವನ್ನು ಫಲಾನುಭವಿಗಳು ಎದುರಿಸುತ್ತಿದ್ದಾರೆ. ತಹಶೀಲ್ದಾರ್‌, ಇಒ ಪೊಲೀಸ್‌ ಇಲಾಖೆಗೆ ಮರಳು ಕೊರತೆ ಕುರಿತು ಮಾಹಿತಿ ನೀಡಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಧರಣಿ ನಿರತರು ದೂರಿದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಾಲತಿ ನದಿ ಪಾತ್ರದಲ್ಲಿ ಶೇಖರಣೆ ಯಾಗಿರುವ ಮರಳು ಸಾಗಣೆಗೆ ಅವಕಾಶ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಆಡಳಿತ ನಿರ್ಣಯ ಕೈಗೊಂಡಿದೆ. ದುರುಪಯೋಗ ವಾಗದಂತೆ ಫಲಾನುಭವಿಗಳಿಗೆ ಮರಳು ಪೂರೈಕೆ ಮಾಡಬೇಕು. ಕೆಲವು ಪಟ್ಟಭದ್ರರು ಫಲಾನುಭವಿಗಳಿಗೆ ಮರಳು ಪೂರೈಕೆ ಆಗದಂತೆ ಅಡ್ಡಿಪಡಿಸುತ್ತಿದ್ದು ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಸತ್ಯನಾರಾಯಣ್‌, ತಾಲ್ಲೂಕುಪಂಚಾಯ್ತಿ ಇಒ ಧನರಾಜ್‌ ಮಂಗಳವಾರ ಮರಳು ಲಭ್ಯ ಇರುವ ಪ್ರದೇಶವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.  ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿನಂತಿ ಸತೀಶ್‌, ಉಪಾಧ್ಯಕ್ಷ ನಾಗೇಂದ್ರ, ಸದಸ್ಯರಾದ ಶ್ರೀಕಾಂತ್‌ ಬಿಳಚಿಕಟ್ಟೆ, ಗೀತಾ ವಹಿಸಿದ್ದರು. ಅನೇಕ ಫಲಾನುಭವಿಗಳು ಧರಣಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.