ADVERTISEMENT

ಮಲಹೊರುವ ಪ್ರಕರಣ ಪತ್ತೆಯಾದರೆ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:21 IST
Last Updated 16 ಜುಲೈ 2017, 8:21 IST

ಶಿವಮೊಗ್ಗ: ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಲಹೊರುವ ಪ್ರಕರಣ ಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗು ವುದು ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮಲಹೊರುವ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಬೇಕು. ಸಂಪೂರ್ಣ ನಿರ್ಮೂಲನೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಕುರಿತು ಸಮೀಕ್ಷೆ ನಡೆಸಲಾಗಿದೆ. ಒಟ್ಟು 24 ಕುಟುಂಬಗಳನ್ನು ಗುರುತಿಸ ಲಾಗಿದೆ. ಭದ್ರಾವತಿಯಲ್ಲಿ 15, ಶಿಕಾರಿ ಪುರ 5, ತಾಳಗುಪ್ಪ 4 ಕುಟುಂಬಗಳಿವೆ. ಇವರಿಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತದೆ.\

ಈಗಾಗಲೇ ಅವರು ಯಾವ ಸೌಲಭ್ಯ ಪಡೆಯುತ್ತಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಈ ಕುಟುಂಬಗಳು ಪರ್ಯಾಯ ವೃತ್ತಿ ಕೈಗೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು. ಬ್ಯಾಂಕ್ ಸಾಲ ಒದಗಿಸಬೇಕು. ಈ ತಿಂಗಳ ಅಂತ್ಯದ ಒಳಗೆ ಕಾರ್ಯ ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.

ADVERTISEMENT

ಮೂಲಸೌಕರ್ಯ ಒದಗಿಸಿ: ಪೌರ ಕಾರ್ಮಿಕರು ವಾಸಿಸುವ ವಾರ್ಡ್‌ಗಳಲ್ಲಿ ರಸ್ತೆ, ಶೌಚಾಲಯ, ಕುಡಿಯುವ ನೀರು ಮೂಲಸೌಲಭ್ಯ ಕಡ್ಡಾಯವಾಗಿ ಒದಗಿಸಬೇಕು. ಗೃಹಭಾಗ್ಯ ಯೋಜನೆ ಅಡಿ ಕಾಯಂ ಪೌರಕಾರ್ಮಿಕರಿಗೆ ಮನೆ ಒದಗಿಸುವ ಕಾರ್ಯ ತ್ವರಿತಗೊಳಿಸಬೇಕು ಎಂದು ತಾಕೀತು ಮಾಡಿದರು.

ಪಾಸ್‌ಪೋರ್ಟ್, ದಾಖಲೆಗೆ ಸಹಕಾರ ಅಗತ್ಯ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 27 ಕಾಯಂ ಪೌರಕಾರ್ಮಿಕರು ಸಿಂಗಪುರ ಪ್ರವಾಸ ಕೈಗೊಳ್ಳಲು ಅಗತ್ಯವಿರುವ ಪಾಸ್‌ಪೋರ್ಟ್ ಮತ್ತಿತರ ದಾಖಲಾತಿ ಪಡೆಯಲು ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಿಂಗಪುರದಲ್ಲಿ ಪೌರಕಾರ್ಮಿಕರ ಕಾರ್ಯನಿರ್ವಹಣೆ, ಸ್ವಚ್ಛತೆ ಕುರಿತು ಮಾಹಿತಿ ಪಡೆಯಲು ಸರ್ಕಾರ ಇದೇ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಕಲ್ಪಿಸಿದೆ. ಈಗಾ ಗಲೇ ಪ್ರಥಮ ತಂಡ ಭೇಟಿ ನೀಡಿ ಮರಳಿದೆ. ಅಧ್ಯಯನ ಪ್ರವಾಸಗಳ ಮೂಲಕ ಪೌರಕಾರ್ಮಿಕರಲ್ಲಿ ತಿಳಿವಳಿಕೆ ಹಾಗೂ ಅರಿವು ಮೂಡುತ್ತದೆ ಎಂದರು.

ಮಹಾನಗರ ಪಾಲಿಕೆ 6, ನಗರ ಸಭೆಗಳ 4 ಮಂದಿ, ಪುರಸಭೆಯ 3  ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಲಾ ಇಬ್ಬರನ್ನು ಸಿಂಗಪುರ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ತತ್ಕಾಲ್ ಮೂಲಕ ಪಾಸ್‌ಪೋರ್ಟ್ ಪಡೆಯಲು ಕ್ರಮಕೈಗೊ ಳ್ಳಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿ ತಿಳಿಸಿದರು. ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಉಪಸ್ಥಿತರಿದ್ದರು.

ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ತಾಕೀತು
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳನ್ನೂ ಕಾಲಮಿತಿ ಒಳಗಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಲೋಕೇಶ್‌ ಮಾತನಾಡಿದರು.

ಪ್ರತಿ ಇಲಾಖೆಗಳು ಕ್ರಿಯಾ ಯೋಜನೆ ಪ್ರಕಾರ ಆಯಾ ತಿಂಗಳು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳು ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದರು.

ವರ್ಷದ ಆರಂಭದಲ್ಲಿಯೇ ಕಾರ್ಯಕ್ರಮ ಅನುಷ್ಠಾನಗೊಳಿಸಿದರೆ ಅನುದಾನದ ಸಮರ್ಪಕ ಬಳಕೆ ಸಾಧ್ಯ. ಎಲ್ಲಾ ಇಲಾಖೆಗಳು ಎಸ್‌ಸಿಪಿ, ಟಿಎಸ್‌ಪಿ ಕಾರ್ಯಕ್ರಮ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಲೆಮಾರಿ, ಅರೆ ಅಲೆಮಾರಿ ಹಾಗೂ ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಅನುಷ್ಠಾನ ಸಮಿತಿ ರಚಿಸಲಾಗಿದೆ. ಅಲೆಮಾರಿ ಸಮುದಾಯ ಗುರುತಿಸಿ ಅವರ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮೊದಲ ಹಂತದಲ್ಲಿ ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿ ತಿಳಿದುಕೊಳ್ಳಬೇಕು. ಅರ್ಹ ಮಕ್ಕಳನ್ನೂ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪರಿಶಿಷ್ಟರ ವಸತಿ ನಿಲಯಗಳಲ್ಲಿ  ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಸೂರಿಲ್ಲದವರಿಗೆ ಮನೆ ಒದಗಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.