ADVERTISEMENT

ಮಾಜಿ ಶಾಸಕರಿಂದ ಜಮೀನು ಕಬಳಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:26 IST
Last Updated 21 ಜನವರಿ 2017, 5:26 IST
ಮಾಜಿ ಶಾಸಕರಿಂದ ಜಮೀನು ಕಬಳಿಕೆ: ಆರೋಪ
ಮಾಜಿ ಶಾಸಕರಿಂದ ಜಮೀನು ಕಬಳಿಕೆ: ಆರೋಪ   

ಹೊಸನಗರ: ‘ಭೂ ನ್ಯಾಯ ಮಂಡಳಿಯಲ್ಲಿ ಮಂಜೂರಾದ ಜಮೀನನ್ನು ಮಾಜಿ ಶಾಸಕರು ಕಬಳಿಸಿದ್ದಾರೆ’ ಎಂದು ಸೊನಲೆ ಗ್ರಾಮದ ನಿವಾಸಿ ಸುವರ್ಣಮ್ಮ ಆರೋಪಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೊನಲೆ ಗ್ರಾಮದ, ಸ.ನಂ.95/1ರಲ್ಲಿ ಎರಡು ಎಕರೆ ಜಮೀನು ಭೂ ನ್ಯಾಯ ಮಂಡಳಿಯಿಂದ ಜೂನ್ 27 1979ರಲ್ಲಿ ಆದೇಶ ಸಂಖ್ಯೆ ಪ್ರ.ಸಂ.

ಎಲ್ಆರ್ಎಫ್ಟಿ: 22-74-75ದಂತೆ ನನ್ನ ಪತಿ ದಿವಂಗತ ಎಸ್.ಬಿ.ಮಲ್ಲಿಕಾರ್ಜುನ ಹೆಸರಿಗೆ ಮಂಜೂರಾಗಿದೆ’ ಎಂದು ದಾಖಲೆ ಸಹಿತ ಅವರು ಮಾಹಿತಿ ನೀಡಿದರು.

‘ನಮಗೆ ಮಂಜೂರಾದ ಜಮೀನನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಅವರ ಮಕ್ಕಳು ಬಲವಂತವಾಗಿ ಇಲ್ಲಿಯತನಕ ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿದ್ದಾರೆ. ಅವರು ಜಮೀನಿನಿಂದ ಅಕ್ರಮವಾಗಿ ಫಸಲು ಪಡೆಯುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಈ ಕುರಿತಂತೆ ಮಾಜಿ ಶಾಸಕರು ಭೂ ನ್ಯಾಯ ಮಂಡಳಿಗೆ ಸಲ್ಲಿಸಿದ ತಕರಾರು ಅರ್ಜಿಗಳು ವಜಾ ಆಗಿದ್ದು, ಎಲ್ಲಾ ದಾಖಲೆಗಳು ನಮ್ಮ ಪರವಾಗಿ
ದ್ದರೂ ನಮಗೆ ಭೂಮಿ ಕೃಷಿ ಮಾಡಲು ಬಿಡುತ್ತಿಲ್ಲ’ ಎಂದು ಅವರು ದೂರಿದರು.

‘ನಮಗೆ ಭೂ ನ್ಯಾಯ ಮಂಡಳಿಯಿಂದ ಮಂಜೂರಾದ ಜಮೀನಿನ ಮೇಲೆ ಸೊಸೈಟಿ ಹಾಗೂ ಬ್ಯಾಂಕಿನಿಂದ ಸಾಲವನ್ನೂ ಪಡೆದಿದ್ದರೂ ನಮ್ಮ ಕುಟುಂಬದ ಮೇಲೆ ದೌರ್ಜನ್ಯ ಮಾಡಿ ಜಮೀನು ಕಬಳಿಕೆ ಮಾಡಿದ್ದಾರೆ’ ಎಂದು ದೂರಿದರು.

‘ನಮಗೆ ಮಂಜೂರಾದ ಜಮೀನು ಸರ್ವೆ ಮಾಡಿ ಪಕ್ಕಪೋಡಿ ಮಾಡುವಂತೆ ಹಲವು ಬಾರಿ ಸರ್ವೆ ಇಲಾಖೆಗೆ ಮನವಿ ಮಾಡಿದ್ದೇವೆ. ಸ್ವಾಮಿರಾವ್ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್ ಅವರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸರ್ವೆ  ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಶಾಲಾವನ ದುರುಪಯೋಗ: ಈ ಸಂದರ್ಭದಲ್ಲಿ ಹಾಜರಿದ್ದ ಈರಾಗೋಡು ಶಂಕ್ರಪ್ಪ ಗೌಡ ಮಾತನಾಡಿ, ‘ತಾಲ್ಲೂಕು ಸೊನಲೆ ಗ್ರಾಮದ ಸ.ನಂ.119 ರಲ್ಲಿ
6 ಎಕರೆ 17 ಗುಂಟೆ ಜಮೀನನ್ನು ಸ್ವಾಮಿರಾವ್ ಅವರ ಚಿಕ್ಕಪ್ಪ ರಾಮನಾಯ್ಕ ಅವರು ಸೊನಲೆ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದ್ದಾರೆ.

ಆದರೆ, ಈ ಶಾಲಾವನದಲ್ಲಿ 30 ವರ್ಷಗಳಿಂದ ಅಕ್ರಮವಾಗಿ ಸ್ವಾಮಿ ರಾವ್ ಅವರು ನೀಲಗಿರಿ ನೆಡುತೋಪು ಬೆಳೆಸಿ, ಮರಗಳನ್ನು ಮಾರಾಟ ಮಾಡಿ
ದ್ದಾರೆ’ ಎಂದು ದೂರಿದರು.

‘ನೀಲಗಿರಿ ನಾಟಾ ಮಾರಾಟದಿಂದ ಲಕ್ಷಾಂತರ ರೂಪಾಯಿ ಲಾಭ ಪಡೆದರೂ  ಶಾಲೆಗೆ ಕೇವಲ ₹ 12,025 ಪಾವತಿಸಿ
ದ್ದಾರೆ ಎಂಬುದು ಶಾಲಾ ದಾಖಲಾತಿ ತಿಳಿಸುತ್ತದೆ’ ಎಂದು ಅವರುಹೇಳಿದರು.

‘ಅಕ್ರಮವಾಗಿ ಸ್ವಾಧೀನ ಮಾಡಿಕೊಂಡ ಜಮೀನನ್ನು ಅಮಾಯಕ ಮಹಿಳೆಗೆ ಪುನಃ  ಹಸ್ತಾಂತರಿಸಬೇಕು. ಶಾಲಾ ಜಮೀನು ಮರಳಿ ಶಾಲೆಗೆ ನೀಡ
ಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವೀಣಾ ಕುಮಾರಿ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.