ADVERTISEMENT

ಮಾದಿಗರು ಎಂದು ಹೇಳಲು ಅಂಜಿಕೆ ಬೇಡ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:29 IST
Last Updated 22 ಮೇ 2017, 5:29 IST

ಶಿಕಾರಿಪುರ: ಮಾದಿಗ ಜಾತಿ ಎಂದು ಹೇಳಿಕೊಳ್ಳಲು ಹಿಂಜರಿಯಬಾರದು. ಸಾಧನೆಗೆ ಛಲ ಮುಖ್ಯವೇ ಹೊರತು ಜಾತಿಯಲ್ಲ ಎಂದು ಹಿರಿಯೂರು ಆದಿ ಜಾಂಬವ ಪೀಠದ ಷಡಕ್ಷರಿಮುನಿ ಸ್ವಾಮೀಜಿ ಕಿವಿಮಾತು ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕುಲಕಸುಬು ಜಾತಿ ಸೂಚಕ ವಾಗಿರುವುದು ವಿಪರ್ಯಾಸವಾಗಿದೆ. ನಡೆ, ನುಡಿ, ಸಂಸ್ಕಾರ ಉತ್ತಮ ವಾಗಿದ್ದರೆ ಜಾತಿ ಕಳೆದು ಹೋಗುತ್ತದೆ. ಕಾಯಕ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಜೀವನ ನಡೆಸಬೇಕು. ದೇವರು ಎಂದು ಪೂಜಿಸುವ ಹನುಮಂತನಿಗೆ ಸಲಹೆ ನೀಡಿದ ಗುರು ಜಾಂಬವ ಮಾದಿಗ ಜಾತಿಯವನು. ಜಾತಿ ಹಿರಿಮೆಯನ್ನು ಹೆಚ್ಚಿಸುವಂತಹ ಸಾಧನೆ  ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ,   ಹಸಿವು ನೀಗಿಸಲು ಶಿಕ್ಷಣ ಪಡೆಯುವುದು ಮುಖ್ಯ. ಮಾದಿಗ ಸಮುದಾಯದಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ದೇಶಕ್ಕೆ ಸಂವಿಧಾನ ನೀಡಿದ   ಅಂಬೇಡ್ಕರ್‌ ಜೀವನ ಎಲ್ಲರಿಗೂಆದರ್ಶವಾಗಬೇಕು ಎಂದು ಸಲಹೆ ನೀಡಿದರು.

ಚಾಮರಾಜನಗರ ಜಿಲ್ಲೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌ ಹಾಗೂ ನ್ಯಾಮತಿ ಸರ್ಕಾರಿ ಕಾಲೇಜು ಉಪನ್ಯಾಸಕ ಮೋಹನ್‌ಕುಮಾರ್‌ ಉಪನ್ಯಾಸ ನೀಡಿದರು.  ತಾಲ್ಲೂಕು ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ  ಪಿ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. 

ಕಡೇನಂದಿಹಳ್ಳಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ರೂಪಕಲಾ ಹೆಗಡೆ, ಸದಸ್ಯ ಚಾರಗಲ್ಲಿ ಪರಶುರಾಮ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಚಿನ್ನಪ್ಪ, ಪತ್ರಕರ್ತ ಬಿ.ಸಿ. ವೇಣುಗೋಪಾಲ್‌, ಉಪನ್ಯಾಸಕ ಸೋಮಶೇಖರ್‌ ಶಿಮೊಗ್ಗಿ, ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಎ.ಟಿ. ತಿಮ್ಮಪ್ಪ, ಪದಾಧಿಕಾರಿಗಳಾದ ಕಾಳೇಶಪ್ಪ, ಶ್ರೀನಿವಾಸ್‌, ಶಿವಕುಮಾರ್‌, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.