ADVERTISEMENT

ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:06 IST
Last Updated 20 ಮೇ 2017, 5:06 IST
ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರನ್ನು ಮನೊಲಿಸಿದರು.
ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರನ್ನು ಮನೊಲಿಸಿದರು.   

ತೀರ್ಥಹಳ್ಳಿ: ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮಕ್ಕಳು ದಾಖಲಾಗುವಂತೆ ಆಸ್ಥೆ ವಹಿಸುವ ಮೂಲಕ  ತಾಲ್ಲೂಕಿನ ಹುಣಸವಳ್ಳಿ ಗ್ರಾಮಸ್ಥರು ಈಗ ಸಂತಸದ ನಗೆ ಬೀರಿದ್ದಾರೆ.

ಈ ಶಾಲೆಯಲ್ಲಿಯೇ ಅಕ್ಷರ ಕಲಿತ ಶಿಲ್ಪಾ, ಪವಿತ್ರಾ ಆರಂಭಿಸಿದ ‘ಶಾಲೆ ಉಳಿಸುವ ಹೋರಾಟ’ಕ್ಕೆ ಸಹನಾ, ಮುನ್ನೂರು ಮೋಹನಶೆಟ್ಟಿ ಕೈಜೋಡಿಸಿದರು. ಉಳಿದ ಗ್ರಾಮಸ್ಥರು ಜತೆಯಾದರು.

1ರಿಂದ 7ರವರೆಗೆ ತರಗತಿಗಳು ನಡೆಯುವ ಈ ಶಾಲೆಯಲ್ಲಿ ಸಾವಿರಾರು ಮಂದಿ ಶಿಕ್ಷಣ ಪಡೆದಿದ್ದಾರೆ.  ಆದರೆ ಕ್ರಮೇಣ ಖಾಸಗಿ ಶಾಲೆಗಳ ಭರಾಟೆಯಿಂದ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ADVERTISEMENT

ಒಂದು ಕಾಲದಲ್ಲಿ 150ರಿಂದ 200 ವಿದ್ಯಾರ್ಥಿಗಳಿರುತ್ತಿದ್ದ ಈ ಶಾಲೆಯಲ್ಲಿ ಕಳೆದ ವರ್ಷ ಇದ್ದ ವಿದ್ಯಾರ್ಥಿಗಳ ಸಂಖ್ಯೆ  ಕೇವಲ ಐದು.

ಇದರಿಂದ ಕಂಗಾಲಾದ ಗ್ರಾಮಸ್ಥರು ಶಾಲೆ ಉಳಿಸಿಕೊಳ್ಳಬೇಕೆಂದು ಪಣ ತೊಟ್ಟರು. ಸರ್ಕಾರಿ ಶಾಲೆಯ ಮಹತ್ವವನ್ನು ತಿಳಿಸುವ ಸಲುವಾಗಿ ಮನೆ ಮನೆಗೆ ತೆರಳಿ ಶಾಲೆ ಉಳಿವಿಗೆ ಸಹಕರಿಸುವಂತೆ ಅಭಿಯಾನ ಆರಂಭಿಸಿದರು. ಪೋಷಕರ ಮನವೊಲಿಸಿದರು.

ಅದರ ಫಲವಾಗಿ ಈಗ ಈ ಶಾಲೆಯಲ್ಲಿ  30 ಮಕ್ಕಳು ಇದ್ದಾರೆ. ಪೋಷಕರು ಮನಸ್ಸು ಮಾಡಿದ್ದು ಇದಕ್ಕೆ ಕಾರಣ. ಗ್ರಾಮ ಪಂಚಾಯ್ತಿಯೊಂದಿಗೆ ಸಭೆ: ಗ್ರಾಮಸ್ಥರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

ಉತ್ತಮ ಶಿಕ್ಷಣಕ್ಕಾಗಿ ಹೆಚ್ಚುವರಿ ಶಿಕ್ಷಕರ ನೇಮಕ, ಧನ ಸಂಗ್ರಹ, ಶಾಲೆ ಯಿಂದ ದೂರವಿರುವ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ, ಆಧುನಿಕ ಹಾಗೂ ತಂತ್ರಜ್ಞಾನದ ಸಹಾಯದಿಂದ ಕಲಿಕೆಗೆ ಅವಕಾಶ ಸೇರಿದಂತೆ ಶಾಲೆಯ ಸಮಗ್ರ ಅಭಿ ವೃದ್ಧಿಗೆ ಅಗತ್ಯವಿರುವ ಅನುಕೂಲಗಳನ್ನು ಕಲ್ಪಿಸು ವಂತೆ  ಮನವಿ ಮಾಡಿದ್ದಾರೆ.

ಸಭೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅರುಣಾಚಲ, ಗ್ರಾಮ ಪಂಚಾಯ್ತಿ ಸದಸ್ಯರಾದ ಎಚ್‌.ಪಿ. ಅನಿಲ್‌, ಎಂ.ಪಿ. ಜಗನ್ನಾಥ್‌, ಬಂಡೆ ವೆಂಕಟೇಶ್‌,  ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಆರ್‌.ಕೃಷ್ಣಮೂರ್ತಿ, ಗಿರಿರಾಜ್‌, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಾಜ್ಯ ಸಮನ್ವಯ ವೇದಿಕೆ ಸಂಚಾಲಕ ಕಬಸೆ ಅಶೋಕ ಮೂರ್ತಿ,  ಜಂಟಿ ಕಾರ್ಯದರ್ಶಿ ಹೇಮಾ ಸಾಗರ್‌, ಪ್ರಗತಿ ಪರ ಚಿಂತಕ ದೂಗೂರು ಪರ ಮೇಶ್ವರ  ಇದ್ದರು. ಮಕ್ಕಳ ಕೊರ ತೆಯಿಂದ ಮುಚ್ಚಿ ಹೋಗಬೇಕಿದ್ದ ಹುಣಸವಳ್ಳಿ ಶಾಲೆ ಗ್ರಾಮಸ್ಥರ ಒತ್ತಾಸೆಯಿಂದ ಜೀವಪಡೆದಿದೆ.

–ಶಿವಾನಂದ ಕರ್ಕಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.