ADVERTISEMENT

‘ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ ಅಗತ್ಯ ಕ್ರಮ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:39 IST
Last Updated 16 ಫೆಬ್ರುವರಿ 2017, 5:39 IST
ಶಿವಮೊಗ್ಗ: ಪಶುಗಳಿಗೆ ಪರಾವಲಂಬಿ ಜೀವಿಗಳಿಂದ ಅನೇಕ ರೋಗಗಳು ತಗಲುತ್ತಿರುವುದನ್ನು ಮನಗಂಡು, ಸರ್ಕಾರ ರೋಗ ನಿಯಂತ್ರಣಕ್ಕಾಗಿ ಮುತುವರ್ಜಿ ವಹಿಸಿದೆ ಎಂದು ಪಶು ಸಂಗೋಪನಾ ಖಾತೆ ಸಚಿವ ಎ. ಮಂಜು ಹೇಳಿದರು.
 
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಬುಧವಾರ ಬೀದರ್‌ನ ಕರ್ನಾಟಕ ಪಶು-ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಏರ್ಪಡಿ ಸಲಾಗಿದ್ದ ‘ಪಶುವೈದ್ಯಕೀಯದಲ್ಲಿ ಪರೋಪಜೀವಿ ಶಾಸ್ತ್ರ’ ಕುರಿತ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
 
ರೋಗ ನಿಯಂತ್ರಣಕ್ಕಾಗಿಯೇ ಪ್ರತಿವರ್ಷ ₹ 5 ಕೋಟಿ ಖರ್ಚು ಮಾಡಲಾಗುತ್ತಿದೆ. ಪರಾವಲಂಬಿ ಜೀವಿಗಳಿಂದ ಪಶುಗಳಿಗೆ ಹರಡುವ ರೋಗ ತಡೆಗಟ್ಟಲು ಮೂರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಇದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
ಹಸು ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಹೈನುಗಾರಿಕೆಯಿಂದ ರೈತರಿಗೆ ಸಾಕಷ್ಟು ಅನುಕೂಲವಿದ್ದು, ಆರ್ಥಿಕವಾಗಿಯೂ ಸಬಲರಾಗಬಹುದು ಎಂದು ಅಭಿಪ್ರಾಯಪಟ್ಟರು.
 
ಕೃಷಿ ಜತೆಗೆ ಹೈನುಗಾರಿಕೆಯಂತಹ ಉಪಕಸುಬು ನಡೆಸುವುದರಿಂದ ರೈತರಿಗೆ ಉಪಯೋಗವಿದೆ. ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ 
ತೊಡಗಿಸಿಕೊಂಡವರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಹೈನುಗಾರಿಕೆಯಿಂದ ಸಾಕಷ್ಟು ಲಾಭ ದೊರಕಲಿದೆ ಎಂದರು.
 
ಬೀದರ್‌ನ ಪಶು, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿ ದ್ಯಾಲಯದ ಕುಲಪತಿ ಪ್ರೊ.ಆರ್.ವಿ. ಪ್ರಸಾದ್ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಜಾನುವಾರುಗಳಲ್ಲಿ ರೋಗ ಉಲ್ಭಣವಾಗುತ್ತದೆ. ಹೀಗಾಗಿ ಇವುಗಳ ನಿಯಂತ್ರಣ ಅಗತ್ಯ ಎಂದರು.
 
ದೇಶದಲ್ಲಿ ಗೋವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ ಪ್ರತಿವರ್ಷ ಸಾಕಷ್ಟು ಜಾನುವಾರುಗಳು ಮರಣ ಹೊಂದುತ್ತಿವೆ. ಪರಾವಲಂಬಿ ಜೀವಿಗಳಿಂದ ಆಗುವ ಹಾನಿ ತಪ್ಪಿಸಲು ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ಕೆ.ಸಿ. ವೀರಣ್ಣ, ಡಾ. ಎಸ್.ಅಬ್ದುಲ್ ರಹಮಾನ್, ಡಾ.ತಂಗನ್, ಕ್ಲಾಸಿಕ್ ಡಿಸೋಜ ಇತರರು ಉಪಸ್ಥಿತರಿದ್ದರು.

* ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆಯ ಪ್ರಯೋಜನ ರೈತರಿಗೆ ತಲುಪುವಂತಾಗಲಿ
–ಎ.ಮಂಜು, ಪಶುಸಂಗೋಪನಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.