ADVERTISEMENT

ಶರಾವತಿ ಅಭಯಾರಣ್ಯ ಘೋಷಣೆಗೆ ವಿರೋಧ

ಶರಾವತಿ ಕಣಿವೆ ನಿವಾಸಿಗಳ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 8:01 IST
Last Updated 10 ಜನವರಿ 2017, 8:01 IST
ಶರಾವತಿ ಅಭಯಾರಣ್ಯ ಘೋಷಣೆಗೆ ವಿರೋಧ
ಶರಾವತಿ ಅಭಯಾರಣ್ಯ ಘೋಷಣೆಗೆ ವಿರೋಧ   
* ಅಂತಿಮ ಘೋಷಣೆಯಾಗದೆ, ಜನರಿಗೆ ಕಿರುಕುಳ * ನಿವಾಸಿಗಳ ಒಕ್ಕಲೆಬ್ಬಿಸಲು ಹುನ್ನಾರ * ಜಿಲ್ಲಾಡಳಿತ ಗಮನ ಹರಿಸಲು ಆಗ್ರಹ
 
**
ಶಿವಮೊಗ್ಗ: ಶರಾವತಿ ಅಭಯಾರಣ್ಯ ಪ್ರದೇಶ ಘೋಷಿಸಿರುವುದನ್ನು ವಿರೋಧಿಸಿ ಹಾಗೂ ಘೋಷಿತ ಪ್ರದೇಶದಲ್ಲಿ ಜೀವನ ನಡೆಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿ ಶರಾವತಿ ಕಣಿವೆ ಜನಹೋರಾಟ ವೇದಿಕೆ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
 
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದ ಪಕ್ಕದ ಹೋಬಳಿ ಕರೂರು, ಆವಿನಹಳ್ಳಿ, ಬಾರಂಗಿ ವ್ಯಾಪ್ತಿಯ 31 ಕಂದಾಯ ಗ್ರಾಮಗಳನ್ನು ಶರಾವತಿ ಅಭಯಾರಣ್ಯವೆಂದು ಘೋಷಿಸಲಾಗಿದೆ. ಘೋಷಿತ ಪ್ರದೇಶದ ಕೃಷಿ ಕಾರ್ಮಿಕರು ಹಾಗೂ ನಿವಾಸಿಗಳಿಗೆ ನಾಗರಿಕ ಹಕ್ಕುಗಳಾದ ಕೃಷಿ ಭೂಮಿ, ವಾಸಸ್ಥಳ, ಗೋಮಾಳ, ರಸ್ತೆ ಇತ್ಯಾದಿ ಗುರುತಿಸಿಲ್ಲ. ಭೂ ಪ್ರದೇಶದ ನಕ್ಷೆ ಮಾಡದೇ, ಅಹವಾಲು ಆಲಿಸದೆ, ಅಭಯಾರಣ್ಯ ಘೋಷಣೆ ಪ್ರಕ್ರಿಯೆ ನಡೆಸುವ ಮೂಲಕ  ನಿವಾಸಿಗಳ ಬದುಕನ್ನು ಕತ್ತಲೆಗೆ ದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಅಧಿಕೃತ ಘೋಷಣೆಯಾಗಿಲ್ಲ: ಶರಾವತಿ ಕಣಿವೆ ಜನಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ‘1972ರ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 18ರ ಅಡಿ ಶರಾವತಿ ಅಭಯಾರಣ್ಯವೆಂದು ಸರ್ಕಾರ ಘೋಷಿಸಿದ ಪರಿಣಾಮ ವಾಸಿಸುತ್ತಿರುವ ಸಾವಿರಾರು ಜನರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಸುಮಾರು 431 ಚ.ಕಿ.ಮೀ. ಭೂ ಪ್ರದೇಶವನ್ನು ಇದುವರೆಗೂ ಕೇವಲ ಅಧಿಕೃತ ಘೋಷಣೆ ಮಾಡಿಲ್ಲ. ಕೇವಲ ಕಾಗದದಲ್ಲಿ ಮಾತ್ರವಿದೆಯಷ್ಟೆ ಎಂದು ತಿಳಿಸಿದರು.
 
ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
 
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಶರಾವತಿ ಕಣಿವೆ ಜನಹೋರಾಟ ವೇದಿಕೆ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ ಆರೋಡಿ, ತಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿ.ಪಂ ಸದಸ್ಯರಾದ ಕಾಗೋಡು ಅಣ್ಣಪ್ಪ, ರಾಜಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್, ತಾ.ಪಂ ಸದಸ್ಯರಾದ ಸವಿತಾ ದೇವರಾಜ್, ಸುವರ್ಣಾ ಟೀಕಪ್ಪ, ಚಂದ್ರಕಾಂತ್, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
***
ಕಾನೂನು ಉಲ್ಲಂಘನೆ
ಕಾನೂನು ಉಲ್ಲಂಘನೆಯಾಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿನ ನಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಜೀವನ ಸಾಗಿಸುತ್ತಿರುವ ಸುಮಾರು 11,403 ಜನರಿಗೆ ಉಸಿರುಕಟ್ಟುವ ವಾತಾವರಣ ಮೂಡಿಸಿ ಒಕ್ಕಲೆಬ್ಬಿಸುವಂತೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
 
**
‘ನಿಯಮ  ಪರಿಪಾಲಿಸಿ’
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ನಿಯಮ 19ರಿಂದ 25ರವರೆಗೆ ಇರುವ ವಿಧಿಗಳನ್ನು ಸರ್ಕಾರ ಪಾಲಿಸಬೇಕು. ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಹೊರತುಪಡಿಸಿ ಉಳಿದ ಸರ್ಕಾರಿ ಮತ್ತು ಖಾಸಗಿ ಜಮೀನು ಒಡೆತನದ ಹಕ್ಕು, ಬಾಧ್ಯತೆಗಳನ್ನು ಜಿಲ್ಲಾಡಳಿತವೇ ನಿರ್ಧರಿಸುವಂತೆ ಕಾಯ್ದೆಯಲ್ಲಿ ವಿವರಿಸಲಾಗಿದೆ. ನಂತರ ನಿಯಮ 26 ‘ಎ’ ಪ್ರಕಾರ ಅಂತಿಮ ಘೋಷಣೆ ಪ್ರಕ್ರಿಯೆ ಆದೇಶವನ್ನು ಜನಾಭಿಪ್ರಾಯದಂತೆ ರದ್ದುಗೊಳಿಸಲು ಜಿಲ್ಲಾಡಳಿತ ಸೂಕ್ತ ಶಿಫಾರಸು ಮಾಡಬೇಕು.
 
**
‘ಬೆಳಕು ಕೊಟ್ಟವರು ಕತ್ತಲಲ್ಲಿ’
ನಾಡಿಗೆ ಬೆಳಕು ಕೊಟ್ಟವರ ಬದುಕು ವ್ಯವಸ್ಥೆಯಡಿ ಕತ್ತಲಾಗಿರುವುದು ಮಾತ್ರ ವಿಪರ್ಯಾಸ. ಶರಾವತಿ ಕಣಿವೆ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಶರಾವತಿ ಕಣಿವೆ ಜನ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ಆರ್.ಜಯಂತ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.