ADVERTISEMENT

ಶಿರಾಳಕೊಪ್ಪ: ನೀರಿಗಾಗಿ ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:54 IST
Last Updated 31 ಜನವರಿ 2017, 5:54 IST
ಶಿರಾಳಕೊಪ್ಪ: ನೀರಿಗಾಗಿ ಬಂದ್ ಯಶಸ್ವಿ
ಶಿರಾಳಕೊಪ್ಪ: ನೀರಿಗಾಗಿ ಬಂದ್ ಯಶಸ್ವಿ   
ಶಿರಾಳಕೊಪ್ಪ: ನೀರಿಗಾಗಿ ರೈತರು ಇನ್ನೂ ಸರ್ಕಾರದ ಮುಂದೆ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಸರ್ಕಾರಗಳು ನೀರು ಕೊಡದಿದ್ದರೆ ಅದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಎಚ್ಚರಿಸಿದರು.
 
ಪಟ್ಟಣದಲ್ಲಿ ಸೋಮವಾರ ತಾಳಗುಂದ, ಉಡುಗಣಿ ಹೋಬಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಒತ್ತಾಯಿಸಿ ಸುವರ್ಣ ಕರ್ನಾಟಕ  ಹಿತ ರಕ್ಷಣಾ ವೇದಿಕೆ ಕರೆನೀಡಿದ್ದ ಸ್ವಯಂ ಪ್ರೇರಿತ ಬಂದ್ ಹಿನ್ನೆಲೆಯಲ್ಲಿ ನಡೆದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
 
‘ಕಾಡಾ’ ಮಾಜಿ ಅಧ್ಯಕ್ಷ ನಗರ ಮಹದೇವಪ್ಪ ಮಾತನಾಡಿ, ‘ರೈತರು ಈಗಲಾದರೂ ಎಚ್ಚೆತ್ತುಕೊಂಡು ನೀರಾ ವರಿಗೆ ಹೋರಾಟ ಮಾಡುತ್ತಿರುವುದು ಸಂತೋಷದ ಸಂಗತಿ. ತಾಲ್ಲೂಕಿನ  ಜಲಾಶಯಗಳನ್ನು ಮಹಾರಾಜರು ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಕಟ್ಟಿದ್ದು. ಬೇರೆ ಯಾರೂ ನೀರು ಕೊಡುವ ಪ್ರಯತ್ನ ಮಾಡಲಿಲ್ಲ’ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು. 
 
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ‘ಶಿಕಾರಿಪುರ ತಾಲ್ಲೂಕನ್ನು ಆಳಿದ ನಾಯಕರು ಪುರಸಭೆ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನ  ಪಡೆದಿದ್ದರೂ ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಗೋಜಿಗೆ ಹೋಗಲಿಲ್ಲ. ನಾನು ರೈತರ ಜೊತೆ ಇದ್ದು, ಅಧಿಕಾರಿಗಳು ವರದಿ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆತಂದು ನೀರಾವರಿ ಯೋಜನೆಗೆ ಗುದ್ದಲಿ ಪೂಜೆ ಮಾಡಿಸುತ್ತೇನೆ’ ಭರವಸೆ ಕೊಟ್ಟರು. 
 
ಹೋರಾಟ ಸಮಿತಿ ಅಧ್ಯಕ್ಷ ಜಂಬೂರಿನ ಎನ್.ಶಿವಾನಂದಪ್ಪ ಪ್ರಾಸ್ತಾ ವಿಕವಾಗಿ ಮಾತನಾಡಿ, ಈಗಾಗಲೇ ಸಮಿತಿ ವತಿಯಿಂದ ಯೋಜನೆ ನೀಲನಕ್ಷೆ ತಯಾರಿಸಲಾಗಿದ್ದು, ಆ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ತಲುಪಿಸಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಯನ್ನು ನೇರವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಅದಕ್ಕೆ ಅವರು ಕೂಡಲೇ ಸಮರ್ಪಕ ನಕ್ಷೆ ಮತ್ತು ವೆಚ್ಚದ ಪಟ್ಟಿ ವಿವರವನ್ನು ಕಳುಹಿಸಿ ಕೊಟ್ಟರೆ, ಅದನ್ನು ತಕ್ಷಣ ಜಾರಿಗೊಳಿಸಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವುದಾಗಿ ಭರವಸೆ ನೀಡಿದರು. ಆದರೆ, ಎಷ್ಟು ಬಾರಿ ಮನವಿ ಸಲ್ಲಿಸಿ ದರೂ ಆ ವರದಿ ಸಲ್ಲಿಸಲು  ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
 
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜೆ. ಫಕೀರಪ್ಪ, ನೂರ್ ಅಹ್ಮದ್, ರೈತ ಸಂಘದ ಪ್ಯಾಟಿ ಈರಪ್ಪ, ಮುಗಳಿಕೊಪ್ಪ ರಾಜಶೇಖರ್, ಮಲ್ಲೇನಹಳ್ಳಿ ಶಿವಯೋಗಿ ಕೆಂಚಳ್ಳಿ, ವಿಜಯಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯ ನರಸಿಂಗ್ ನಾಯ್ಕ, ಪಟ್ಟಣ ಪಂಚಾಯ್ತಿ ಸದಸ್ಯರಾದ ಬಿ.ಎಲ್. ಮಂಜುನಾಯ್ಕ್, ಎಂ.ಆರ್. ರಾಘವೇಂದ್ರ, ಪಿ.ಜಾಫರ್, ತಡಗಣಿ ರಾಜು, ಮುದಾಸಿರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಬ್ಬರ್ ಸಾಬ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.