ADVERTISEMENT

ಶಿವಮೊಗ್ಗ ನಗರಕ್ಕೆ ಬೇಕಿದೆ ರೈಲ್ವೆ ಮೇಲ್ಸೇತುವೆ

ತೋಟಗಾರಿಕಾ ಕಾಲೇಜು ಸ್ಥಾಪನೆ ಈ ಭಾಗದ ರೈತರ ಬಹುದಿನಗಳ ಬೇಡಿಕೆ

ಅನಿಲ್ ಸಾಗರ್
Published 21 ಮೇ 2018, 10:18 IST
Last Updated 21 ಮೇ 2018, 10:18 IST
ಶಿವಮೊಗ್ಗ ಹೊಳೆ ಬಸ್‌ ಸ್ಟಾಪ್‌ ಬಳಿ ರೈಲ್ವೆ ಓವರ್ ಬ್ರಿಡ್ಜ್ ಇಲ್ಲದೇ ಕಾಯುತ್ತಿರುವ ವಾಹನ ಸವಾರರು.
ಶಿವಮೊಗ್ಗ ಹೊಳೆ ಬಸ್‌ ಸ್ಟಾಪ್‌ ಬಳಿ ರೈಲ್ವೆ ಓವರ್ ಬ್ರಿಡ್ಜ್ ಇಲ್ಲದೇ ಕಾಯುತ್ತಿರುವ ವಾಹನ ಸವಾರರು.   

ಶಿವಮೊಗ್ಗ: ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಕಾಲೇಜು, ಕ್ರೀಡಾಪಟುಗಳ ಬೆಳವಣಿಗೆಗಾಗಿ ತರಬೇತುದಾರರು, ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಓವರ್ ಬ್ರಿಡ್ಜ್‌ಗಳು ಶಿವಮೊಗ್ಗದ ಪಾಲಿಗೆ ಗಗನ ಕುಸುಮವಾಗಿದ್ದು, ನೂತನ ಸರ್ಕಾರ ಹಾಗೂ ಶಾಸಕರು ದಶಕದ ಬೇಡಿಕೆಗೆ ತಾರ್ಕಿಕ ಅಂತ್ಯ ನೀಡುವ ಆಶಾಭಾವನೆ ಶಿವಮೊಗ್ಗ ಜನರದ್ದಾಗಿದೆ.

ಶಿವಮೊಗ್ಗದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸಬೇಕು ಎನ್ನುವುದು ಈ ಭಾಗದ ರೈತರ ದಶಕದ ಕನಸು. ಶಿವಮೊಗ್ಗ ಜಿಲ್ಲೆ ತೋಟಗಾರಿಕೆ ಬೆಳೆಗಳ ತವರೂರಾಗಿದ್ದರೂ, ಸೂಕ್ತ ಮಾರ್ಗದರ್ಶನ, ಸಂಶೋಧನೆಗಳ ಕೊರತೆ ಇರುವ ಕಾರಣ ಈ ಭಾಗದ ರೈತರು ಆಧುನಿಕತೆಗೆ ಮುಖ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಭೌಗೋಳಿಕವಾಗಿ ಜಿಲ್ಲಾ ಕೇಂದ್ರದಂತಿರುವ ಈಗಿರುವ ಶಿವಮೊಗ್ಗದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಯಾಗಬೇಕು ಎಂದು ಇಲ್ಲಿನ ನಿರಂತರವಾಗಿ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ. ಆದರೆ ಸರ್ಕಾರಗಳ ಹಾಗೂ ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಈ ಬೇಡಿಕೆ ಇದುವರೆಗೂ ಈಡೇರಿಲ್ಲ. ಆದರೆ ಇದರಿಂದ ವಿಶ್ವಾಸ ಕಳೆದುಕೊಳ್ಳದ ಇಲ್ಲಿನ ರೈತರು ಈ ಬಾರಿಯಾದರೂ ಈ ಬೇಡಿಕೆ ಈಡೇರುವ ಭರವಸೆಯಲ್ಲಿದ್ದಾರೆ.

ದೊಡ್ಡ ಪ್ರಮಾಣದ ಬೆಳೆ:

ADVERTISEMENT

ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಅಂದರೆ ಒಟ್ಟು 54,482 ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅಲ್ಲದೇ ಸುಮಾರು 2,000 ಹೆಕ್ಟೇರ್ ಭೂಮಿಯಲ್ಲಿ ಹಲವಾರು ತರಕಾರಿಗಳನ್ನು ಬೆಳೆಯಲಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಬೆಳೆಯಿದ್ದರೂ ತೋಟಗಾರಿಕೆ ಕಾಲೇಜಿನ ಸೇವೆ ಲಭ್ಯವಾಗುತ್ತಿಲ್ಲ ಎನ್ನುವ ಕೊರಗು ಇಲ್ಲಿನ ರೈತರದ್ದಾಗಿದೆ.

ಮಾಹಿತಿ ಕೊರತೆ:

ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು. ಯಾವ ಕಾಲಕ್ಕೆ ಯಾವ ರೀತಿಯ ಔಷಧಿ, ಗೊಬ್ಬರ, ಬೆಳೆಗಳನ್ನು ಬೆಳೆಯಬೇಕು ಎನ್ನುವ ಬಗ್ಗೆ ರೈತರಿಗೆ ಮಾಹಿತಿ ಕೊರೆತೆ ಇದೆ. ಹಾಗಾಗಿ ತೋಟಗಾರಿಕೆ ಕಾಲೇಜು ಸ್ಥಾಪಿಸಿದರೆ ರೈತರಿಗೆ ಆಧುನಿಕ ತಂತ್ರಜ್ಞಾನ ಬಳಕೆಗೆ ದಾರಿ ತೋರಿಸಿದಂತಾಗುತ್ತದೆ.

ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಇದ್ದು, ವಿಶ್ವವಿದ್ಯಾಲಯಕ್ಕೆ ಸೇರಿದ ತೋಟಗಾರಿಕಾ ಕಾಲೇಜು ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮಾಹಿತಿ ಬೇಕಾದರೇ ಹಣ, ಕೆಲಸ, ಕಾರ್ಯ ಬಿಟ್ಟು ಅಲ್ಲಿಗೆ ಹೋಗಬೇಕಾಗಿದೆ.

ರೈಲ್ವೆ ಮೇಲ್ಸೇಸೇತುವೆ:

ಇನ್ನೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಮೇಲ್ಸೇತುವೆ, ಕೆಳ ಸೇತುವೆಗಳಿಲ್ಲದೇ ಪ್ರಯಾಣಿಕರು ಗಂಟೆಗಟ್ಟಲೇ ಕಾಯುವ ಸ್ಥಿತಿಯಿದೆ. ಮುಖ್ಯವಾಗಿ ಸವಳಂಗ ರಸ್ತೆಯ ರೈಲ್ವೆ ಗೇಟ್‌ ಬಳಿ ಹಾಗೂ ಹೊಳೆಹೊನ್ನೂರು ಮಾರ್ಗದ ರೈಲ್ವೆ ಗೇಟ್‌ ಬಳಿ ಬ್ರಿಡ್ಜ್ ಇಲ್ಲದೆ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ಎರಡು ಸ್ಥಳಗಳಲ್ಲಿ ಬ್ರಿಡ್ಜ್‌ ನಿರ್ಮಿಸುವಂತೆ ನಿರಂತರವಾಗಿ ಬೇಡಿಕೆ ಇಡಲಾಗುತ್ತಿದೆ.

ತರಬೇತುದಾರರ ಕೊರತೆ:

ಶಿವಮೊಗ್ಗ ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿರುವಂತೆ ಕ್ರೀಡಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದೆ. ಆದರೆ ಸೂಕ್ತ ತರಬೇತುದಾರರ ಕೊರತೆಯಿಂದ ಶಿವಮೊಗ್ಗದ ಕ್ರೀಡಾ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಪ್ರಸ್ತುತ ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಹಾಕಿ ಮತ್ತು ಅಥ್ಲೆಟಿಕ್ಸ್‌ಗೆ ಕಾಯಂ ತರಬೇತುದಾರರನ್ನು ಬಿಟ್ಟರೇ ಉಳಿದ ಯಾವ ಆಟಗಳಿಗೂ ಕಾಯಂ ತರಬೇತುದಾರರಿಲ್ಲ.

**
ತೋಟಗಾರಿಕೆ ಬೆಳೆಗಳು ಶಿವಮೊಗ್ಗ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾ ಗಿದೆ. ಇಲ್ಲಿ ಕಾಲೇಜು ತೆರೆದರೆ ರೈತರ ಮಕ್ಕಳಿಗೂ ತೋಟಗಾರಿಕೆ ಪದವಿ ಪಡೆಯಲು ಸಹಾಯಕವಾಗುತ್ತದೆ 
ರಮೇಶ್ ಹೆಗ್ಡೆ, ಅಧ್ಯಕ್ಷರು, ಜಿಲ್ಲಾ ಅಡಿಕೆ ಬೆಳೆಗಾರರ ಸಂಘ

**
ಹಲವು ವರ್ಷಗಳಿಂದ ತರಬೇತುದಾರರ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಬೇಡಿಕೆ ಈಡೇ ರಿಲ್ಲ. ಹೊಸ ಸರ್ಕಾರ ಈ ಕೊರತೆ ನೀಗಿಸಬೇಕು 
ಕೆ.ಎಸ್‌.ಶಶಿ, ಕಾರ್ಯದರ್ಶಿ, ಜಿಲ್ಲಾ ಒಲಿಂಪಿಕ್ ಸಂಸ್ಥೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.