ADVERTISEMENT

ಸಮಗ್ರತೆ ಅರಿವಿಗೆ ಭಿನ್ನ ಸಾಹಿತ್ಯ ಓದು ಅಗತ್ಯ

‘ಭಾರತೀಯ ಸಾಹಿತ್ಯದ ಓದು’ ವಿಚಾರ ಸಂಕಿರಣದಲ್ಲಿ ವಿಮರ್ಶಕ ಟಿ.ಪಿ.ಅಶೋಕ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2016, 8:28 IST
Last Updated 31 ಆಗಸ್ಟ್ 2016, 8:28 IST

ಶಿವಮೊಗ್ಗ: ‘ನಮ್ಮ ಭಾಷೆ, ಸಂಸ್ಕೃತಿಗಿಂತ ಭಿನ್ನವಾದ ಸಾಹಿತ್ಯ ಓದುವುದರಿಂದ ನಿಜವಾದ ಸಾಹಿತ್ಯದ ಅಧ್ಯಯನ ನಮ್ಮದಾಗುತ್ತದೆ. ಜತೆಗೆ, ಸಾಹಿತ್ಯದ ಸಮಗ್ರತೆಯೂ ದೊರಕುತ್ತದೆ’ ಎಂದು ವಿಮರ್ಶಕ ಟಿ.ಪಿ.ಅಶೋಕ ಹೇಳಿದರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮಂಗಳವಾರ ಭಾರತೀಯ ಸಾಹಿತ್ಯ ಅಧ್ಯಯನ ಪೀಠ, ಮಣಿಪಾಲ ವಿಶ್ವವಿದ್ಯಾಲಯ, ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ಆಂಗ್ಲ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ ‘ಭಾರತೀಯ ಸಾಹಿತ್ಯದ ಓದು: ಎರಡು ದಿನಗಳ ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯದ ಭಿನ್ನ ಅನುಭವಗಳು ನಮಗಾಗಬೇಕಾದರೆ ವಿಶಾಲ ಸಾಹಿತ್ಯ ಅರ್ಥೈಸಿಕೊಳ್ಳಬೇಕು. ಭಾರತೀಯ ಸಾಹಿತ್ಯದಲ್ಲಿಯೇ ಬಹುಭಾಷಾ ಪರಂಪರೆಯಿದೆ. ಹಾಗಾಗಿಯೇ ನೆಲೆಗಟ್ಟಿನಿಂದ ಹೊರತಾದ ಬೇರೆ ಬೇರೆ ಭಾಷೆ ಭಾರತಕ್ಕೆ ಆಗಮಿಸಿದರೂ ಭಾರತೀಯ ಸಾಹಿತ್ಯದ ಮೇಲೆ ಅದರ ಪ್ರಭಾವ ಕಡಿಮೆಯಿದೆ ಎನ್ನಬಹುದು. ಉದಾಹರಣೆಗೆ ಇಂಗ್ಲಿಷ್‌ ಸಾಹಿತ್ಯದ ಪ್ರಭಾವ ಭಾರತೀಯ ಸಾಹಿತ್ಯದ ಮೇಲೆ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್‌ ಭಾರತ ಪ್ರವೇಶಿಸುವು ದಕ್ಕಿಂತ ಮೊದಲೇ ಭಾರತೀಯ ಸಾಹಿತ್ಯ ಹಲವು ಮಜಲುಗಳನ್ನು ಕಂಡಿತ್ತು. ಅನೇಕ ಭಾಷೆಗಳಿಗೆ ಅದಾಗಲೇ ಭಾರತೀಯ ಸಾಹಿತ್ಯ ತೆರೆದುಕೊಂಡಿತ್ತು. ಇಂಗ್ಲಿಷ್ ಪ್ರವೇಶಿಸಿದಾಗ ದೇಶಕ್ಕೆ ದಿಗ್ಭ್ರಾಂತವಾಗಲಿ ಅಥವಾ ಆತಂಕವಾಗಲಿ ಉಂಟಾಗಲಿಲ್ಲ. ಏಕೆಂದರೆ ಆಫ್ರಿಕಾ ಖಂಡ ಭಾಗದಲ್ಲಿ ಹಾಗೂ ಏಷ್ಯಾ ಖಂಡ ಭಾಗದಲ್ಲಿ ಆಂಗ್ಲ ಭಾಷೆ ಉಂಟು ಮಾಡಿರುವ ಪ್ರಭಾವದ ಆಯಾಮ ಬೇರೆ ಬೇರೆಯದೇ ಆಗಿದೆ ಎಂದು ವಿಶ್ಲೇಷಿಸಿದರು.

ಇಂಗ್ಲಿಷ್ ಬಂದ ದಿನಗಳಲ್ಲಿ ಪತ್ರ ಮುಖೇನ ಮನವಿ, ಅಹವಾಲುಗಳನ್ನು ಸಲ್ಲಿಸಲು ಬಳಕೆಯಾಗುತ್ತಿತ್ತು. ಬ್ರಿಟಿಷ್ ಆಡಳಿತದ ನಂತರವೂ ಇದು ಮುಂದುವರಿಯಿತು. ಆದರೆ, ಈಚಿನ ದಿನಗಳಲ್ಲಿ ಕಲಿಕೆ ಹಾಗೂ ಅಭಿವ್ಯಕ್ತಿ ಸಮಸ್ಯೆಯ ಜತೆಗೆ ಇಂಗ್ಲಿಷ್ ಒಂದು ಪ್ರತಿಷ್ಠೆಯೂ ಆಗಿಬಿಟ್ಟಿದೆ ಎಂದು ವಿಷಾದಿಸಿದರು.

‘1947ರ ದೇಶ ವಿಭಜನೆಯ ಸಂದರ್ಭದಲ್ಲಿ ಉಗಮಿಸಿದಂತಹ ಸಾಹಿತ್ಯವನ್ನು ನಾವು ಅರಿಯಬೇಕು. ಇಲ್ಲದೆ ಹೋದರೆ ವಿಭಜನೆಯ ಸಂದರ್ಭವನ್ನು ಕೇವಲ ರಾಜಕೀಯ ಘಟನೆ ಎಂಬುದಾಗಿ ಪರಿಗಣಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಈ ದಿಸೆಯಲ್ಲಿ ಪ್ರೇಮ್‌ಚಂದ್, ಭೀಷ್ಮ ಸಹಾನಿ ಹಾಗೂ ಅಮೃತಾ ಪ್ರೀತಂ ಅವರ ಕೃತಿಗಳನ್ನು ಓದುವುದು ಹೆಚ್ಚು ಸೂಕ್ತ’ ಎಂದರು.

ರಾಷ್ಟ್ರ ಇಬ್ಭಾಗವಾದಂತಹ ಸನ್ನಿವೇಶದಲ್ಲಿ ಮನುಷ್ಯ ನೆಲೆಗಟ್ಟಿನಲ್ಲಿ ಚಿತ್ರಣವನ್ನು ಕಂಡುಕೊಳ್ಳಬೇಕಾದರೆ, ಆ ಸಮಯದಲ್ಲಿ ಉಗಮವಾದಂತಹ ಕೃತಿಗಳನ್ನು ಸಂಪೂರ್ಣವಾಗಿ ಅರಿಯಬೇಕು. ಹಾಗಾದಾಗ ಮಾನವತೆ ಯ ನೆಲೆಯಲ್ಲಿ ಅಂತರಂಗ ಸ್ಪರ್ಶಿಸುವ ಮನಃಸ್ಥಿತಿ ನಮ್ಮದಾಗುತ್ತದೆ ಎಂದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸಿ.ಗೌಡರ ಶಿವಣ್ಣನವರ ಮಾತನಾಡಿ, ಕೇವಲ ತರಗತಿಗಳಲ್ಲಿ ಪಾಠ ಕೇಳುವುದನ್ನು ಹೊರತುಪಡಿಸಿ, ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವುದರಿಂದ ಅದರಾಚೆಗಿನ ಜ್ಞಾನಾರ್ಜನೆ ತಿಳಿದುಕೊಳ್ಳಬಹುದು. ವಿಚಾರ ಸಂಕಿರಣಗಳಿಂದ ನಮ್ಮಲ್ಲಿರುವ ಹವ್ಯಾಸಗಳಿಗೂ  ಪ್ರೋತ್ಸಾಹ ಸಿಕ್ಕಂತಾಗುತ್ತದೆ.

ನಂತರದ ದಿನಗಳಲ್ಲಿ ಯಾವುದೇ ಲೇಖನ ಬರೆದು ಯಶಸ್ವಿ ಆದರೂ ಅದಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಾಧ್ಯಾಪಕ ಸಿರಾಜ್ ಅಹಮದ್, ಎಂ.ಕೆ.ವೀಣಾ, ಪ್ರೊ.ಎಂ.ಎಸ್. ನಾಗರಾಜ್ ರಾವ್, ಡಾ.ಕೆ.ಎಸ್.ವೈಶಾಲಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.