ADVERTISEMENT

ಸಮಾಲೋಚನಾ ಸಭೆ ಬಹಿಷ್ಕರಿಸಿದ ನಿವಾಸಿಗಳು

ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:19 IST
Last Updated 21 ಮಾರ್ಚ್ 2018, 12:19 IST

ಸಾಗರ: ನಗರದ ಸೊರಬ ಹಾಗೂ ಮಾರ್ಕೆಟ್‌ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಕರೆದಿದ್ದ ಸಮಾಲೋಚನಾ ಸಭೆಯನ್ನು ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಬಹಿಷ್ಕರಿಸಿ ಹೊರನಡೆದರು.

ಸೊರಬ ಹಾಗೂ ಮಾರ್ಕೆಟ್‌ ರಸ್ತೆ ನಿವಾಸಿಗಳ ಪರವಾಗಿ ವಿಡಿಯೋಗ್ರಾಫರ್‌ ಅವರನ್ನು ಕರೆಸಿ ಸಭೆಯ ಚಿತ್ರೀಕರಣ ಮಾಡುತ್ತಿರುವುದನ್ನು ಸಭೆಯ ಆರಂಭದಲ್ಲೇ ಗುರುತಿಸಿದ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಭೆಯ ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.

ಇದರಿಂದ ಅಸಮಾಧಾನಗೊಂಡ ಸೊರಬ ಹಾಗೂ ಮಾರ್ಕೆಟ್‌ ರಸ್ತೆ ನಿವಾಸಿಗಳು ಮತ್ತು ವರ್ತಕರು ಸಭೆಯಲ್ಲಿ ಏನು ನಡೆಯುತ್ತದೆ ಎನ್ನುವುದು ಪಾರದರ್ಶಕವಾಗಿರಲಿ. ಈ ಕಾರಣಕ್ಕೆ ವಿಡಿಯೊ ಚಿತ್ರೀಕರಣ ಮಾಡಿದರೆ ಏನು ತೊಂದರೆ ಎಂದು ಪ್ರಶ್ನಿಸಿದರು. ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ನೀಡಲು ಅಧಿಕಾರಿಗಳು ನಿರಾಕರಿಸಿದಾಗ ಸಭೆಯಲ್ಲಿದ್ದ ಬಹುತೇಕ ಸ್ಥಳೀಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ADVERTISEMENT

ಶಿವಪ್ಪನಾಯಕ ವೃತ್ತದಿಂದ ಸೊರಬ ರಸ್ತೆಯ ದುರ್ಗಾಂಬಾ ವೃತ್ತದವರೆಗೆ ರಸ್ತೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಪ್ರಥಮ ಹಂತದಲ್ಲಿ ₹ 20 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಈಗಿನ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದವರಿಗೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ತಿಳಿಸಿದರು.

ಸೊರಬ ರಸ್ತೆಯ ವರ್ತಕರೂ ಆಗಿರುವ ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಪ್ಪ ಮಾತನಾಡಿ, ‘ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರ ನೀಡಿದರೂ ಸ್ಥಳೀಯರು ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ಐದು ಪಟ್ಟು ಹೆಚ್ಚಿನ ದರವನ್ನು ಪರಿಹಾರ ರೂಪದಲ್ಲಿ ನೀಡಬೇಕು’ ಎಂದು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ನಾಗರಾಜ್‌ ಆರ್‌.ಸಿಂಗ್ರೇರ್‌, ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಎಸ್.ಜೆ.ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್‌.ಮೋಹನ್‌ಕುಮಾರ್‌, ಪೌರಾಯುಕ್ತ ಎಸ್.ರಾಜು ಹಾಜರಿದ್ದರು.

**

ಪ್ರತ್ಯೇಕ ಸಭೆ

ಸಭೆಯಿಂದ ಹೊರ ನಡೆದ ಸೊರಬ ರಸ್ತೆ ವರ್ತಕರು ನೆಹರೂ ಮೈದಾನದಲ್ಲಿ ಪ್ರತ್ಯೇಕ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಯು.ಜೆ.ಮಲ್ಲಿಕಾರ್ಜುನ್‌ ಮಾತನಾಡಿ, ಸಭೆಯ ವಿಡಿಯೊ ಚಿತ್ರೀಕರಣ ಮಾಡಲು ಅಧಿಕಾರಿಗಳು ಅವಕಾಶ ನೀಡದೆ ಇರುವುದು ಖಂಡನೀಯ ಎಂದರು. ‘ಸೊರಬ ಹಾಗೂ ಮಾರ್ಕೆಟ್‌ ರಸ್ತೆಯ ಯಾವುದೇ ನಿವಾಸಿಗಳು ಅಥವಾ ವರ್ತಕರು ರಸ್ತೆ ವಿಸ್ತರಣೆಯ ವಿರುದ್ಧವಾಗಿಲ್ಲ. ಆದರೆ, ಪರಿಹಾರ ವಿತರಿಸಿದ ನಂತರವಷ್ಟೆ ವಿಸ್ತರಣೆ ಕೆಲಸ ಆರಂಭಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ’ ಎಂದು ಹೇಳಿದರು.

**

ಇದು ಜಿಲ್ಲಾಡಳಿತದಿಂದ ಕರೆದಿರುವ ಸಭೆ. ಇದರ ವಿಡಿಯೊ ಚಿತ್ರೀಕರಣ ಮಾಡದಂತೆ ಹೊರಗಿನವರನ್ನು ನಿರ್ಬಂಧಿಸುವುದು ಸರಿಯಾದ ಕ್ರಮ.
-ಡಾ.ಎಂ.ಲೋಕೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.