ADVERTISEMENT

ಸರ್ವಋತು ಜಲಪಾತ ಯೋಜನೆ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:18 IST
Last Updated 24 ಮೇ 2017, 5:18 IST

ಶಿವಮೊಗ್ಗ: ಜೋಗದ ಸರ್ವಋತು ಜಲಪಾತ ಯೋಜನೆ ಸಂಪೂರ್ಣ ಅವೈಜ್ಞಾನಿಕ. ಯೋಜನೆ ಜಾರಿ ನಿರ್ಧಾರ ತಕ್ಷಣ  ಹಿಂಪಡೆಯಬೇಕು ಎಂದು ಒತ್ತಾಯಿಸಿ ಪರಿಸರವಾದಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜೋಗ ಜಲಪಾತ ಮಳೆಗಾಲದಲ್ಲಿ ಪ್ರಕೃತಿದತ್ತ ಸೌಂದರ್ಯದಿಂದ ಕಂಗೊಳಿಸುತ್ತದೆ. ಆದರೆ, ಸರ್ಕಾರ ಸರ್ವಋತು ಹೆಸರಿನಲ್ಲಿ ವರ್ಷದ 365 ದಿನವೂ ಜಲಪಾತ ಧುಮ್ಮಿಕ್ಕಲು ಯೋಜನೆ ರೂಪಿಸಿದೆ. ವಿಶ್ವ ವಿಖ್ಯಾತ ಜಲಪಾತವನ್ನು 60 ವರ್ಷ ಖಾಸಗಿ ವ್ಯಕ್ತಿಗೆ ಭೋಗ್ಯಕ್ಕೆ ನೀಡಲಾಗುತ್ತಿದೆ. ಆ ಮೂಲಕ ಪರೋಕ್ಷವಾಗಿ ಸರ್ಕಾರ ಜಲಪಾತವನ್ನೇ ಮಾರಾಟ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಋತು ಯೋಜನೆ ತಾಂತ್ರಿಕವಾಗಿ ಸರಿಯಲ್ಲ. ಜಲಪಾತದ ನೀರು ಧುಮ್ಮಿಕ್ಕುವ ಗುಂಡಿಯಲ್ಲಿ 23 ಸಾವಿರ ಘನ ಅಡಿ ನೀರಿನ ಸಾಮರ್ಥ್ಯ ತೊಟ್ಟಿ ನಿರ್ಮಿಸಿ, ಮತ್ತೆ ನೀರು ಮೇಲಕ್ಕೆ ಎತ್ತಿ 1,200 ಮಿ.ಮೀ. ಗಾತ್ರದ ಕೊಳವೆಗಳ ಮೂಲಕ ಸಾಗಿಸಲಾಗುತ್ತದೆ.

ADVERTISEMENT

ಹೀಗೆ ಸಾಗಿಸಿದ ನೀರು ಸೇತುವೆಯ ಬಳಿಯ ಸೀತಾಕಟ್ಟೆ ಹತ್ತಿರ ನಿರ್ಮಿಸುವ 15 ಅಡಿ ಎತ್ತರದ ಜಲಾಶಯದಲ್ಲಿ ಸಂಗ್ರಹಿಸಲಾಗುತ್ತದೆ. ಕೊಳವೆಗಳ ಮೂಲಕ ಸೀತಾಕಟ್ಟೆಯ ಜಲಾಶಯಕ್ಕೆ ನೀರು ಪಂಪ್ ಮಾಡಲು ಜಲಪಾತದ ಬಳಿ ಸಣ್ಣ ವಿದ್ಯುತ್ ಘಟಕ ಸ್ಥಾಪಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು.

ಜೋಗದ ಗುಂಡಿ ತೊಟ್ಟಿಯಿಂದ ಸೀತಾಕಟ್ಟೆಯ ಜಲಾಶಯಕ್ಕೆ ಸುಮಾರು 1 ಕಿ.ಮೀ. ಸುರಂಗ ನಿರ್ಮಿಸಲಾಗುವುದು. ಸೀತಾಕಟ್ಟೆಯ ಜಲಾಶಯದಲ್ಲಿ 200 ಕ್ಯುಸೆಕ್ ನೀರು 4 ಕವಲುಗಳಿಗೆ ಹರಿಸುವುದು ಪ್ರಕೃತಿಗೆ ವಿರುದ್ಧವಾದ ಯೋಜನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೋಗ ಜಲಪಾತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ಗಡಿಯ ಅತಿ ಸೂಕ್ಷ್ಮ ವನ್ಯಜೀವಿ ತಾಣ. ವಿಶ್ವ ಪರಂಪರೆಯ ತಾಣವೂ ಹೌದು. ಕಾನೂನಿನ ಪ್ರಕಾರ ಯಾವುದೇ ಬೃಹತ್ ಕಾಮಗಾರಿ ಇಲ್ಲಿ ಕೈಗೊಳ್ಳುವಂತಿಲ್ಲ. ಯೋಜನೆ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಜಲಪಾತದಲ್ಲಿನ ಬಂಡೆ ಮತ್ತು ಬೆಟ್ಟಗಳಿಗೆ ಹಾನಿಯಾಗುತ್ತದೆ.

ಸಿಡಿಮದ್ದು ಬಳಸುವ, ಬಂಡೆ ಕೊರೆಯುವ ಕಾಮಗಾರಿಗಳಿಂದ ಶರಾವತಿ ಕಣಿವೆಯ ಅರಣ್ಯ ಪ್ರದೇಶಕ್ಕೆ ತೊಂದರೆಯಾಗುತ್ತದೆ. ಪ್ರಾಣಿ, ಪಕ್ಷಿಗಳ ಜೀವಕ್ಕೆ ಸಂಚಕಾರವಿದೆ ಎಂದರು.ಜೋಗ ಜಲಪಾತವನ್ನು ಆಷಾಢ, ಶ್ರಾವಣ ಮಾಸಗಳಲ್ಲಿ ಪ್ರವಾಸಿಗರು ವೀಕ್ಷಿಸುತ್ತಾರೆ. 

ವರ್ಷದ ಎಲ್ಲ ದಿನಗಳೂ ಜಲಪಾತ ವೀಕ್ಷಿಸಬೇಕು ಎಂದು ಯಾರೂ ಒತ್ತಾಯಿಸಿಲ್ಲ. ಇದನ್ನು ಖಾಸಗಿ ಕಂಪೆನಿಗೆ  ಗುತ್ತಿಗೆ ನೀಡುವುದು ಪರಿಸರ ದುರಂತ ಎಂದರು.
ಪರಿಸರವಾದಿಗಳಾದ ಹೊ.ನ. ಸತ್ಯ, ಅಶೋಕ್ ಯಾದವ್, ಸುಬ್ರಹ್ಮಣ್ಯ, ಗೋಪಿನಾಥ್, ಶಿವಕುಮಾರ್, ಚಿದಾನಂದಮೂರ್ತಿ, ಪ್ರಸನ್ನ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.