ADVERTISEMENT

ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಅಮೃತ ಸಂಭ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಹೋತ್ಸವ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಚಂದ್ರಹಾಸ ಹಿರೇಮಳಲಿ
Published 22 ಏಪ್ರಿಲ್ 2017, 4:09 IST
Last Updated 22 ಏಪ್ರಿಲ್ 2017, 4:09 IST
ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಅಮೃತ ಸಂಭ್ರಮ
ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಅಮೃತ ಸಂಭ್ರಮ   
ಶಿವಮೊಗ್ಗ: ಕನ್ನಡದ ಹೆಸರಾಂತ ಕವಿಗಳು, ಸಾಹಿತಿಗಳು, ವಿಜ್ಞಾನಿಗಳು, ಹೋರಾಟಗಾರರು ಕಲಿತ, ಹಲವು ಮೇಧಾವಿಗಳು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಹ್ಯಾದ್ರಿ ಕಾಲೇಜು  75 ವಸಂತಗಳನ್ನು ಪೂರ್ಣಗೊಳಿಸಿದೆ.
 
ಮೈಸೂರಿನ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್  ಕಾಲದಲ್ಲಿ, 1940–41ರಲ್ಲಿ ಸ್ಥಾಪನೆ ಯಾದ ಸರ್ಕಾರಿ ಇಂಟರ್ ಮೀಡಿಯೆಟ್ ಕಾಲೇಜು 1956ರಲ್ಲಿ ಪ್ರಥಮ ದರ್ಜೆ ಕಾಲೇಜು ಆಗಿ ಬಡ್ತಿ ಪಡೆದಿತ್ತು.
 
1962ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿಯಾಗಿದ್ದ ಕುವೆಂಪು  ಈ ಕಾಲೇಜಿನ ಹೆಸರನ್ನು ‘ಸಹ್ಯಾದ್ರಿ ಕಾಲೇಜು’ ಎಂದು ಬದಲಿಸಿದ್ದರು. ಪ್ರಾಚೀನ ಕಾಲದಲ್ಲಿ ದಕ್ಷಿಣ ಭಾರತಕ್ಕೆ ‘ಸಹ್ಯಾದ್ರಿ ಪ್ರದೇಶ’ ಎಂದು ಕರೆಯಲಾಗುತ್ತಿತ್ತು.  1984ರಲ್ಲಿ ಸಹ್ಯಾದ್ರಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜುಗಳು ಪ್ರತ್ಯೇಕಗೊಂಡವು. 1992ರಿಂದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದೆ. ವಿವಿಯ ಘಟಕ ಕಾಲೇಜಾಗಿ ಮುಂದುವರಿದಿದೆ.
 
ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡ ಸುಂದರ ಕಲ್ಲಿನಿಂದ ನಿರ್ಮಾಣವಾಗಿದೆ. ಕಲಾ ಮತ್ತು ವಾಣಿಜ್ಯ ಕಾಲೇಜು ಈಚೆಗೆ ನಿರ್ಮಾಣಗೊಂಡ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
 
ಗಣ್ಯರು ಕಲಿತ ಜ್ಞಾನದೇಗುಲ: ‘ಭಾರತ ರತ್ನ’ ಪುರಸ್ಕೃತ ಪ್ರೊ. ಸಿ.ಎನ್.ಆರ್.ರಾವ್, ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ನಾಟಕಕಾರ ಕೆ.ವಿ.ಸುಬ್ಬಣ್ಣ, ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿ.ಲಂಕೇಶ್, ಪಂಪ ಪ್ರಶಸ್ತಿ ಪುರಸ್ಕೃತ ಪೂರ್ಣಚಂದ್ರ ತೇಜಸ್ವಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹಾ.ಮಾ. ನಾಯಕ, ಸಂಗೀತ ಕ್ಷೇತ್ರದ ದಿಗ್ಗಜರಾದ ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರಾ, ಮನೋವೈದ್ಯ ಡಾ.ಕೆ.ಎ.ಅಶೋಕ್ ಪೈ, ಡಾ.ಸಿ.ಆರ್. ಪರಮೇಶ್ವರಪ್ಪ, ರೈತ ಹೋರಾಟಗಾರ ಕಡಿದಾಳು ಶಾಮಣ್ಣ, ಪ್ರೊ.ರಾಮದಾಸ್‌, ರಾಜಕೀಯ ನೇತಾರರಾದ ಶಾಂತವೇರಿ ಗೋಪಾಲಗೌಡ, ಎಚ್.ಜಿ. ಗೋವಿಂದೇಗೌಡ, ಈಗಿನ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಕೋಣಂದೂರು ಲಿಂಗಪ್ಪ, ಆಯನೂರು ಮಂಜುನಾಥ್, ಕ್ರೀಡಾಪಟುಗಳಾದ ಎಂ.ಸಿ.ಮುತ್ತಯ್ಯ, ಮ್ಯಾಥ್ಯೂ ಗಿಬ್ಸನ್ ಸೇರಿದಂತೆ ಸಾವಿರಾರು ಸಾಧಕರು ಈ ಕಾಲೇಜಿನ ಹಳೆ ವಿದ್ಯಾರ್ಥಿಗಳು. 
 
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ನಿತ್ಯೋತ್ಸವದ ಕವಿ ಕೆ.ಎಸ್.ನಿಸಾರ್ ಅಹಮದ್, ದೇ.ಜವರೇಗೌಡರು, ಸಾ.ಶಿ.ಮರಳಯ್ಯ, ಪಿ.ಲಂಕೇಶ್, ಅನಂತರಂಗಾಚಾರ್, ಡಿ.ಟಿ.ರಾಮ ಸ್ವಾಮಿ, ಜಿ.ಬ್ರಹ್ಮಪ್ಪ, ಡಾ. ರಹಮತ್ ತರೀಕೆರೆ ಮತ್ತಿತರರು ಈ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
 
ಪಠ್ಯ ಚಟುವಟಿಕೆಗಳ ಜತೆಗೆ, ಪಠೇತರ ವಿಷಯದಲ್ಲೂ ಈ ಕಾಲೇಜಿನ ವಿದ್ಯಾರ್ಥಿಗಳು ಅನನ್ಯ ಸಾಧನೆ ಮಾಡಿದ್ದಾರೆ. ನಾಟಕ, ಸಂಗೀತ, ವಿಚಾರ ಸಂಕಿರಣ, ಚರ್ಚೆ ಮೂಲಕ  ನಾಡಿನ ಗಮನ ಸೆಳೆದಿದೆ.  
 
ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ತಿಂಗಳಿಗೆ ಎರಡು ಬಾರಿ ಕಾಲೇಜಿಗೆ ಭೇಟಿ ನೀಡುತ್ತಿದ್ದರು. ಕಾಲೇಜಿನಲ್ಲಿ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಸೇರಿದಂತೆ 300ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
****
ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭ
ಕಾಲೇಜಿನ ಆವರಣದಲ್ಲಿ  ಏ. 22ರಂದು  ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಷಾಚರಣೆಯ ಕಾರ್ಯಕ್ರಮ  ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವರಾದ ಕಾಗೋಡು ತಿಮ್ಮಪ್ಪ, ಜಿ.ಪರಮೇಶ್ವರ್, ಸಂಸತ್‌ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜೋಗನ್‌ ಶಂಕರ್ ಭಾಗವಹಿಸುವರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆ ವಹಿಸುವರು.

ಅಂದು ಬೆಳಿಗ್ಗೆ 9.30ರಿಂದ ಜಾನಪದ ಗಾಯಕ ಕೆ.ಯುವರಾಜ್ ಅವರಿಂದ ಸುಗಮ ಸಂಗೀತ, ಸಂಜೆ 5ಕ್ಕೆ ಜನಪದ ಕಲಾ ಮೇಳ ಆಯೋಜಿಸಲಾಗಿದೆ.

ಸಂಭ್ರಮದ ನೆನಪಿಗಾಗಿ ಕಾಲೇಜು ಆವರಣದಲ್ಲಿ ಅಮೃತ ಮಹೋತ್ಸವ ಭವನ, ಅತಿಥಿಗೃಹ ಹಾಗೂ ಬಯಲು ರಂಗಮಂದಿರ ನಿರ್ಮಾಣ, ಅಮೃತ ಮಹೋತ್ಸವ ದ್ವಾರ ಮತ್ತು ರಸ್ತೆಯ ವಿಸ್ತರಣೆ, ಜ್ಞಾನ ಕೇಂದ್ರದ ಮಾನ್ಯತೆ ಪಡೆಯುವುದು, ಭವಿಷ್ಯಮುಖಿ ಕೋರ್ಸ್‌ಗಳ ಆರಂಭ, ವೈಫೈ ಸೌಲಭ್ಯ ಒದಗಿಸಲಾಗುತ್ತಿದೆ.

ಅಮೃತ ಮಹೋತ್ಸವದ ಅಂಗವಾಗಿ ಇಡೀ ವರ್ಷ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು 10ಕ್ಕೂ ಹೆಚ್ಚು ವಿವಿಧ ಸಮಿತಿ ರಚಿಸಲಾಗಿದೆ.
***
ಇಂದು ನಗರಕ್ಕೆ  ಮುಖ್ಯಮಂತ್ರಿ  ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10.15ಕ್ಕೆ ನಗರಕ್ಕೆ ಬರುವರು. 10.30ಕ್ಕೆ ಸಹ್ಯಾದ್ರಿ ಕಾಲೇಜು, ಮ.12ಕ್ಕೆ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆ, 2.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಸಭೆಯಲ್ಲಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT