ADVERTISEMENT

ಹೋರಿ ಹಿಡಿದು ಸಾಹಸ ಮೆರೆದ ಯುವಕರು

ಬಗನಕಟ್ಟೆ ಗ್ರಾಮ: ಸಾವಿರಾರು ಪ್ರೇಕ್ಷಕರ ಹರ್ಷೋದ್ಗಾರದ ನಡುವೆ ಹೋರಿ ಬೆದರಿಸುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 11:27 IST
Last Updated 1 ಡಿಸೆಂಬರ್ 2015, 11:27 IST

ಶಿಕಾರಿಪುರ: ನೆಲಕ್ಕೆ ಬಿದ್ದರೂ ಛಲ ಬಿಡದೆ, ಹೋರಿ ಹಿಡಿದು ಕೊಬ್ಬರಿ ಮಾಲೆ ಕೀಳುವ ಮೂಲಕ ಸಾಹಸ ಪ್ರದರ್ಶಿಸಿದ ಯುವಕರ ದೃಶ್ಯ ತಾಲ್ಲೂಕಿನ ಬಗನಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆದ ವಿಶೇಷ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ (ವಿಶೇಷ ದೀಪಾವಳಿ) ಕಂಡು ಬಂದಿತು.

ಸಾವಿರಾರು ಪ್ರೇಕ್ಷಕರ ಮಧ್ಯೆ ನಡೆದ ವಿಶೇಷ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯ ಮಾಸೂರು ಸೇರಿದಂತೆ ಕೆಲ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಹೋರಿಗಳು ಪಾಲ್ಗೊಂಡಿದ್ದವು. ಹೋರಿ ಮಾಲೀಕರು ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳನ್ನು ಜೂಲಾ, ಬಲೂನ್‌, ಕಾಲ್ಗೆಜ್ಜೆ, ಬಣ್ಣದ ಟೇಪು, ಕೊಬ್ಬರಿ ಮಾಲೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು.

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಕರು ತಮ್ಮ ಹೋರಿ ಹೆಸರನ್ನು ಮುದ್ರಿಸಿದ್ದ ಟೀಶರ್ಟ್‌ಗಳನ್ನು ಧರಿಸಿ, ತಮ್ಮ ಹೋರಿ ಬರುವ ಮುನ್ನ  ಹೋರಿ ಹೆಸರನ್ನು ಹೊಂದಿದ ಧ್ವಜವನ್ನು ಹಾರಿಸುತ್ತ ಮುಂದೆ ಸಾಗುತ್ತಿದ್ದರು.

ಶಿಕಾರಿಪುರದ ಕಾಂತ, ಬೆಣ್ಣೆ ಸಾಗಿ, ಅರುಣ ಹಾಲಿವುಡ್‌, ಕೆಂಪ್ಯಾ. ಮಂಡಗಟ್ಟ ಅಣ್ಣಪ್ಪ, ಇಟ್ಟಿಗೆಹಳ್ಳಿ ಕುಮಾರ, ಅಂಜನಾಪುರ ಪರಮೇಶ್ವರನಾಯ್ಕ, ಅಮಟೆಕೊಪ್ಪ ಬಸಪ್ಪ, ಭದ್ರಾಪುರ ಜ್ಞಾನೇಶ್‌, ತರಲಘಟ್ಟ ಸತೀಶ್, ಮಲ್ಲಿಕ, ಅಡಗಂಟಿ ಪ್ರವೀಣ ಸೇರಿದಂತೆ ವಿವಿಧ ಗ್ರಾಮಗಳ ಯುವಕರು ಹೋರಿಗಳನ್ನು ಹಿಡಿದು ಕೊಬ್ಬರಿ ಮಾಲೆ ಕೀಳುತ್ತಿದ್ದ ಸಾಹಸ ದೃಶ್ಯ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.

ಕೆಲ ಯುವಕರು ನಿಯಂತ್ರಣ ತಪ್ಪಿ ನೆಲದ ಮೇಲೆ ಬಿದ್ದು ಗಾಯಗೊಂಡರೂ, ಛಲದಿಂದ ಮತ್ತೆ ಮೇಲೆ ಎದ್ದು ಹೋರಿ ಹಿಡಿದು ಕೊಬ್ಬರಿ ಮಾಲೆ ಕೀಳುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ವಯಸ್ಸಿನ ಭೇದವಿಲ್ಲದೇ ಸಾವಿರಾರು ಜನರು ಹೋರಿ ಸ್ಪರ್ಧೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಹೋರಿಯಿಂದ ಪ್ರೇಕ್ಷಕರಿಗೆ ಅನಾಹುತ ಸಂಭವಿಸದಂತೆ ಪ್ರೇಕ್ಷಕರನ್ನು ಹೋರಿಯಿಂದ ದೂರ ಇರುವಂತೆ ಗ್ರಾಮಸ್ಥರು ಸಲಹೆ ನೀಡುತ್ತಿದ್ದರು. ಯೋಜಕರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಹೋರಿಗಳಿಗೆ ಹಾಗೂ ಹೋರಿ ಹಿಡಿಯುವ ಯುವಕರಿಗೆ ಬಂಗಾರದ ಉಂಗುರ, ಟಿವಿ ಸೇರಿದಂತೆ ವಿವಿಧ ಬಹುಮಾನಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.