ADVERTISEMENT

‘ಸಾಹಿತ್ಯ ಸಾರ್ವತ್ರಿಕವಾದ ಸಶಕ್ತ ಮಾಧ್ಯಮ’

ಸಂದರ್ಶನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2014, 6:04 IST
Last Updated 5 ಜುಲೈ 2014, 6:04 IST
ಡಾ.ಜಿ.ಎಸ್.ಭಟ್‌
ಡಾ.ಜಿ.ಎಸ್.ಭಟ್‌   

ಸಾಗರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಡಿಯಲ್ಲಿ ಶನಿವಾರ ನಡೆಯಲಿರುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವವರು ಡಾ.ಜಿ.ಎಸ್.ಭಟ್‌.

ಮೂಲತ: ಉತ್ತರಕನ್ನಡ ಜಿಲ್ಲೆಯವರಾದ ಜಿ.ಎಸ್. ಭಟ್‌ ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾದರು.ಕಥೆ, ಕಾದಂಬರಿ, ಕವನ, ನಾಟಕ, ಯಕ್ಷಗಾನ ಪ್ರಸಂಗ, ಆತ್ಮಕಥೆ ನಿರೂಪಣೆ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಜಿ.ಎಸ್.ಭಟ್‌ ಅವರಿಗೆ ಈಗ 70 ವರ್ಷ.

ಈಗ್ಗೆ ಎರಡು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದರೂ ಎಡಗೈನಲ್ಲೆ ಲ್ಯಾಪ್‌ಟಾಪ್‌ನಲ್ಲಿ ಬೆರಳಚ್ಚು ಮಾಡುತ್ತ ‘ತಂತ್ರಕ್ಕೆ ಪ್ರತಿ ತಂತ್ರ’ ಎಂಬ ನಾಟಕವನ್ನು ರಚಿಸಿರುವುದು ಅವರ ಸಾಹಿತ್ಯ ಪ್ರೀತಿಗೆ, ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ.

ಐದು ವರ್ಷಗಳ ಕಾಲ ‘ಪ್ರಜಾವಾಣಿ’ ಪತ್ರಿಕೆಗೆ ಸಾಗರ ತಾಲ್ಲೂಕಿನ ಅರೆಕಾಲಿಕ ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸಿರುವ ಜಿ.ಎಸ್.ಭಟ್‌ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ನಿಮ್ಮ ಸಾಹಿತ್ಯ ಪ್ರಜ್ಞೆ ರೂಪುಗೊಂಡ ಬಗೆ...
ಮಲೆನಾಡು ಹಾಗೂ ಉತ್ತರಕನ್ನಡ ಈ ಎರಡೂ ಜಿಲ್ಲೆಗಳ ಪರಿಸರ ಮತ್ತು ಜೀವನ ಕ್ರಮ ನನ್ನ ಸಾಹಿತ್ಯ ಪ್ರಜ್ಞೆಯನ್ನು ರೂಪಿಸಿದೆ.

* ಯಕ್ಷಗಾನದ ಬಗ್ಗೆ...
ನಾನು ಯಕ್ಷಗಾನದ ಬಗ್ಗೆ ಗೊತ್ತಿರುವ ವ್ಯಕ್ತಿ. ಯಕ್ಷಗಾನ ಗೊತ್ತಿರುವವರು ಆ ರಂಗಭೂಮಿಯನ್ನು ವಾಚಿಕ, ಆಂಗಿಕ, ನೃತ್ಯ ಪ್ರಧಾನ, ಗಾನ ಪ್ರಧಾನ ಹೀಗೆ ವಿವಿಧ ವ್ಯಾಖ್ಯಾನ ನೀಡಿ ಕಲೆಯ ವ್ಯಾಪ್ತಿಯನ್ನು ಸೀಮಿತಗೊಳಿಸುವ ಸಾಧ್ಯತೆ ಇದೆ.

* ಸಮಾಜಕ್ಕೆ ಸಾಹಿತ್ಯ ಯಾಕೆ ಬಹಳ ಮುಖ್ಯ...
ಸಾಹಿತ್ಯ ಸಾರ್ವತ್ರಿಕವಾದ ಸಶಕ್ತ ಮಾಧ್ಯಮ. ಅದನ್ನು ಪ್ರಾಮಾಣಿಕವಾಗಿ ಆಸ್ವಾದಿಸುವರಿಗೆ ಅತ್ಯುತ್ತಮ ಸಂಸ್ಕಾರ ನೀಡಿ ಬದುಕಿನಲ್ಲಿ ಆತನನ್ನು ಮೇಲಕ್ಕೆ ಎತ್ತುತ್ತದೆ.

* ‘ಪ್ರಜಾವಾಣಿ’ಯಲ್ಲಿ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡಿದ ಅನುಭವ ಹೇಗಿತ್ತು ?
ಅದೊಂದು ವಿಶಿಷ್ಟ ಅನುಭವ. ಯಾವುದನ್ನು ಎಷ್ಟು ಮತ್ತು ಹೇಗೆ ಸಂಕ್ಷಿಪ್ತವಾಗಿ, ಪರಿಣಾಮಕಾರಿಯಾಗಿ ಹೇಳಬೇಕು ಎಂಬುದನ್ನು ಕಲಿಸಿದ್ದು ಪತ್ರಿಕೋದ್ಯಮ. ಈ ಮೂಲಕ ನನ್ನ ಬರವಣಿಗೆಗೆ ನಿರ್ದಿಷ್ಟ ಚೌಕಟ್ಟು ಒದಗಿ ಬಂತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.