ADVERTISEMENT

ಆಟೊ ಮೀಟರ್ ತೋರಿಕೆಗೆ ಮಾತ್ರ ಸೀಮಿತ

ಅರ್ಚನಾ ಎಂ.
Published 12 ಫೆಬ್ರುವರಿ 2018, 6:57 IST
Last Updated 12 ಫೆಬ್ರುವರಿ 2018, 6:57 IST
ಆಟೊ ಮೀಟರ್ ಹಾಕಿರುವ ಆಟೊ
ಆಟೊ ಮೀಟರ್ ಹಾಕಿರುವ ಆಟೊ   

ಶಿವಮೊಗ್ಗ: ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಸಲುವಾಗಿ ನಗರದ ಎಲ್ಲಾ ಆಟೊಗಳಲ್ಲಿ ಮೀಟರ್ ಅಳವಡಿಕೆಯನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದ್ದರೂ ಮೀಟರ್ ಬಳಕೆ ವಿರಳವಾಗಿದೆ.

ರಾಜ್ಯದಾದ್ಯಂತ ಪ್ರಯಾಣಿಕರ ಆಟೊಗಳಿಗೆ ಮೀಟರ್ ಅಳವಡಿಸಬೇಕೆಂಬ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ 2012ರಲ್ಲಿ ಜಿಲ್ಲಾಡಳಿತ ಅಂದಿನ ನಗರಸಭೆಯಿಂದ ಉಚಿತವಾಗಿ ಆಟೊಗಳಿಗೆ ಡಿಜಿಟಲ್ ಮೀಟರ್ ಅಳವಡಿಸಲು ನಿರ್ಧರಿಸಿತ್ತು. ಹಾಗೆಯೆ ಆಟೊ ಚಾಲಕರು ಮೀಟರ್ ಅಳವಡಿಕೆಗೆ ಅರ್ಜಿ ಸಲ್ಲಿಸಿದ್ದರು.

ನಗರಸಭೆಯ ಶೇ 22.75ರ ನಿಧಿಯಿಂದ ಪರಿಶಿಷ್ಟರ ಆಟೊಗಳಿಗೆ ಬ್ಯಾಟರಿಯೊಂದಿಗೆ ಹಾಗೂ ಶೇ 7.25ರ ಸಾಮಾನ್ಯ ನಿಧಿಯಿಂದ ಇತರರಿಗೆ ಬ್ಯಾಟರಿ ರಹಿತವಾಗಿ ಮೀಟರ್ ಅಳವಡಿಸಲು ತೀರ್ಮಾನಿಸಲಾಗಿತ್ತು. ಅಂದಿನ ಸುಮಾರು 3,200 ಆಟೊಗಳಲ್ಲಿ ಕೆಲವರಿಗೆ ಮಾತ್ರ ಮೀಟರ್ ಅಳವಡಿಸಲಾಯಿತು. ಹಲವು ಚಾಲಕರು ತಮ್ಮದೇ ಖರ್ಚಿನಲ್ಲಿ ಮೀಟರ್ ಅಳವಡಿಸಿಕೊಂಡರು. ಇಂದು ನಗರದಲ್ಲಿ ಸುಮಾರು 4 ಸಾವಿರ ಆಟೊಗಳಿವೆ.

ADVERTISEMENT

ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಸಹಯೋಗದಲ್ಲಿ  ಚಾಲಕರ ಸಭೆ ನಡೆಸಿ 1.5  ಕಿ.ಮೀ.ಗೆ ₹ 20 ನಿಗದಿ ಪಡಿಸಿತ್ತು, ಈ ದರ ಕಡಿಮೆ ಎಂದು ಆಟೊ ಚಾಲಕರು ಪ್ರತಿಭಟನೆ ನಡೆಸಿದ್ದ ಕಾರಣ ಮತ್ತೆ ₹ 25 ಎಂದು ದರ ಪರಿಷ್ಕರಿಸಲಾಯಿತು.

ಆಟೊದಲ್ಲಿ ಪ್ರಯಾಣಿಕರು ಹತ್ತಿದ ನಂತರ ಮೀಟರ್ ಹಾಕಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಕಡ್ಡಾಯಗೊಳಿಸಿತ್ತು. ಮೀಟರ್ ಅಳವಡಿಸಿಕೊಂಡಿದ್ದರೂ ಕೆಲವು ಆಟೊ ಚಾಲಕರು ಮೀಟರ್‌ ಬಳಸುತ್ತಿರಲಿಲ್ಲ. ಇಂಥವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಇದು ಕೆಲವು ದಿನಗಳಿಗೆ ನಡೆಯಿತಾದರೂ ನಂತರ ಪ್ರಯಾಣಿಕರು ಸ್ಪಂದನೆಯ ಕೊರತೆಯಿಂದ ಪರಿಶೀಲನಾ ಕಾರ್ಯ ನಿಂತಿದೆ.

ಈಗ ನಗರದಲ್ಲಿನ ಬಹುತೇಕ ಆಟೊಗಳ ಮೀಟರ್‌ಗಳು ತೋರಿಕೆಗೆ ಇದ್ದು, ಪ್ರಯಾಣಿಕರು ಹೇಳಿದರೆ ಮಾತ್ರ ಬಳಸುತ್ತಾರೆ.  ಆಟೊ ಮೀಟರ್ ಬಳಕೆ ಕಡ್ಡಾಯ ಕುರಿತ ಸೂಚನಾ ಫಲಕಗಳನ್ನು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಹಲವೆಡೆ ಹಾಕಿದ್ದರೂ ಮೀಟರ್‌ ಬಳಕೆಯೇ ಗೌಣವಾಗಿದೆ.

ಮೊದಲು 1 ಕೆ.ಜಿ. ಆಟೊ ಗ್ಯಾಸ್‌ ಬೆಲೆ ₹ 31 ಇತ್ತು. ಆದರೆ, ಈಗ ₹ 50 ಆಗಿದೆ. ಹಾಗಾಗಿ ಗ್ಯಾಸ್‌ ದರ ಏರಿಕೆಯಾದಂತೆ ಮೀಟರ್‌ ದರವನ್ನು ಏರಿಕೆ ಮಾಡಬೇಕು. ಈಗಿರುವ ದರದಿಂದ ಚಾಲಕರಿಗೆ ನಷ್ಟವಾಗುತ್ತಿದೆ. ಜೀವನ ನಡೆಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಆಟೊ ಚಾಲಕ ಸೋಮಶೇಖರ್.

ಆಟೊ ಹತ್ತುವಾಗಲೇ ದರ ನಿಗದಿ ಮಾಡುತ್ತೇವೆ. ಕೆಲವೊಮ್ಮೆ ಮೀಟರ್ ಹಾಕಿದರೆ ಅಧಿಕ ದರವಾಗಬಹುದು‌. ಹಾಗಾಗಿ ಮೀಟರ್ ಹಾಕಲು ಹೇಳುವುದಿಲ್ಲ ಎನ್ನುತ್ತಾರೆ ಪ್ರಯಾಣಿಕ ನಾರಾಯಣ ಸ್ವಾಮಿ.

ಬಸ್‌ ನಿಲ್ದಾಣದಲ್ಲಿರುವ ಆಟೊ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರಿಗೆ ಕೆಲವು ಆಟೊ ಚಾಲಕರು ಅಧಿಕ ದರವನ್ನು ಹೇಳಿ ಆಟೊ ಹತ್ತಿಸಿಕೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ, ಮಳೆಗಾಲದಲ್ಲಿ ಮೀಟರ್ ಹಾಕದೇ ದುಪ್ಪಟ್ಟು ದರ ಹೇಳುತ್ತಾರೆ. ಅನಿವಾರ್ಯವಾಗಿ ಅವರು ಹೇಳಿದ ದರಕ್ಕೆ ಹೋಗುತ್ತೇವೆ ಎನ್ನುತ್ತಾರೆ ಉದ್ಯೋಗಸ್ಥ ಮಹಿಳೆ ಚೈತ್ರಾ.

ಈಚೆಗೆ ಆಟೊಗಳ ಮೇಲೆ ಚಾಲಕರ ಸ್ವವಿವರಗಳನ್ನು ಒಳಗೊಂಡ ಡಿಸ್‌ಪ್ಲೆ ಕಾರ್ಡ್‌ ಅನ್ನು ಅಳವಡಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ಚಾಲಕರ ವಿವರ ತಿಳಿಯಬಹುದು.

ಈಗಾಗಲೇ 2 ಸಾವಿರ ಆಟೊಗಳಿಗೆ ಕಾರ್ಡ್‌ ಅಳವಡಿಸಲಾಗಿದೆ.  ಪ್ರಯಾಣಿಕರು ಚಾಲಕರು ಮೀಟರ್ ಹಾಕದಿರುವ ಬಗ್ಗೆ, ಅಧಿಕ ದರ ಪಡೆಯುತ್ತಿರುವ ಬಗ್ಗೆ ಯಾವುದೇ ದೂರುಗಳನ್ನು ಪೊಲೀಸರಿಗೆ ನಿಡಬಹದು. ಪೊಲೀಸರಿಗೆ ದೂರು ನೀಡಲು ಇದು ಸಹಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.