ADVERTISEMENT

ಶಿವಾಜಿ ಸಮಸ್ತ ಭಾರತಕ್ಕಾಗಿ ಬದುಕಿದ ಯೋಧ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 6:53 IST
Last Updated 20 ಫೆಬ್ರುವರಿ 2018, 6:53 IST

ಶಿವಮೊಗ್ಗ: ಶಿವಾಜಿ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಸಾಧನೆ ಮಾಡಿದ ಮಹಾಪರಾಕ್ರಮಿ ಎಂದು ಕಾರ್ಕಳದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಯಾವಾಗ ಧರ್ಮ, ಪರಂಪರೆ, ಗೋವುಗಳ, ಮಹಿಳೆಯರ ಮೇಲೆ ದುಷ್ಟರ ಕಣ್ಣು ಬಿದ್ದಿತ್ತೋ ಅಂದಿನಿಂದಲೇ ಶಿವಾಜಿ ತಮ್ಮ ಹೋರಾಟಗಳನ್ನು ಆರಂಭಿಸಿದರು. ಮಾಳವ ಸಮಾಜದ ಗೆಳೆಯರೊಂದಿಗಿನ ಒಡನಾಟ ಬೆಳೆಸಿಕೊಂಡು ಯುದ್ಧ ಮಾಡುತ್ತಿದ್ದರು. ಶಿವಾಜಿ ತಮ್ಮ ಆಡಳಿತಾವಧಿಯಲ್ಲಿ ಜನಸಮಾನ್ಯರಿಗೆ ಉತ್ತಮ ಯೋಜನೆಗಳ ಕೊಡುಗೆ ನೀಡಿದ್ದರು ಎಂದರು.

‘ಸಮಸ್ತ ಭಾರತಕ್ಕಾಗಿ ಬದುಕಿದ ಯೋಗಿ ಹಾಗೂ ಯೋಧ ಶಿವಾಜಿ ಅವರಲ್ಲಿ ಧರ್ಮ ಸಂರಕ್ಷಣೆಯ ಕಳಕಳಿಯಿತ್ತು. ತಾಯಿನಾಡ ಕುರಿತು ಪ್ರೀತಿಯಿತ್ತು. ಅವರ ಬದುಕು ಆದರ್ಶಪ್ರಾಯವಾಗಿದೆ. ಅವರ ಹೋರಾಟದ ಫಲ, ತ್ಯಾಗ, ಬಲಿದಾನದಿಂದ ನಾವು ಇಂದು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿದೆ’ ಎಂದು  ಹೇಳಿದರು.

ADVERTISEMENT

‘ಶಿವಾಜಿ ಅವರ ತಾಯಿ ಜೀಜಾಬಾಯಿ ಹೇಳುತ್ತಿದ್ದ ವೀರ ಕಥೆಗಳು ಅವರು ಮುಂದೆ ಸಾಮಾಜ್ರ್ಯ ಸ್ಥಾಪಿಸಲು ಸ್ಫೂರ್ತಿಯಾಗಿತ್ತು. ಶಿವಾಜಿ ಜೀವನಕ್ಕೆ ಅವರ ತಾಯಿಯ ಕೊಡುಗೆ ಅಪಾರ’ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅಖಿಲ ಕರ್ನಾಟಕ ಛತ್ರಪತಿ ಶಿವಾಜಿ ಯುವ ವೇದಿಕೆಯಿಂದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಅಂಬಾಭವಾನಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಕುವೆಂಪು ರಂಗ ಮಂದಿರದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಶಿವಕುಮಾರ್ ಪವಾರ್, ಮರಾಠ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜನಾರ್ದನ ರಾವ್ ಜಾಧವ್, ಪಾಲಿಕೆ ಸದಸ್ಯ ಓಂಪ್ರಕಾಶ್ ತೆಲ್ಕರ್, ಇಂದಿರಾ ಪವಾರ್, ಜಗದೀಶ್, ಸುರೇಶ್ ಬಾಬು, ತಾನಾಜಿ ರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.