ADVERTISEMENT

ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 6:56 IST
Last Updated 22 ಫೆಬ್ರುವರಿ 2018, 6:56 IST

ಶಿವಮೊಗ್ಗ: ಕೋಟೆ ದೇವಾಲಯ ಆವರಣದ ಮಾರಿಗದ್ದುಗೆಯಲ್ಲಿ ಪ್ರತಿಷ್ಠಾಪಿಸಿರುವ ಮಾರಿಕಾಂಬ ದೇವಿಯನ್ನು ಬುಧವಾರ ಸಹಸ್ರಾರು ಭಕ್ತರು ದರ್ಶನ ಪಡೆದರು. ಗಾಂಧಿ ಬಜಾರಿನಲ್ಲಿ ಪ್ರತಿಷ್ಠಾಪಿಸಿದ್ದ ಮಾರಿಕಾಂಬೆಯನ್ನು ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ರಾತ್ರಿ ಮಾರಿ ಗದ್ದುಗೆಯಲ್ಲಿ ತಂದು ಪ್ರತ್ರಿಷ್ಠಾಪಿಸಲಾಗಿದೆ.  ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯ ಎರಡನೇ ದಿನವಾದ ಬುಧವಾರ ಬೆಳಿಗ್ಗೆ 4ರಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೋಟೆ ರಸ್ತೆಯ ವಾಸವಿ ಶಾಲೆಯ ವರೆಗೂ ಸರತಿ ಸಾಲಿನಲ್ಲಿ ನಿಂತು ದೇವಸ್ಥಾನಕ್ಕೆ ತೆರಳಿದರು. ಹರಕೆ ಹೊತ್ತ ಕುಟುಂಬದ ಸದಸ್ಯರು, ಮಕ್ಕಳು ಬೇವಿನ ಉಡಿಗೆ ತೊಟ್ಟು ಶ್ರದ್ಧಾ ಭಕ್ತಿಯಿಂದ ಬಂದು ದೇವಿಯ ದರ್ಶನ ಪಡೆದರು. ದೇವರ ದರ್ಶನಕ್ಕೆ ದೇವಸ್ಥಾನದ ಹಿಂಭಾಗದಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕಾಗಿ ₹ 150 (3 ಜನರಿಗೆ ಮಾತ್ರ) ಪಾಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿ‌ಕ ವಿಧಿವಿಧಾನ ಪೂಜೆಗಳು ನಡೆದವು.

ದೇವಾಲಯ ಸುತ್ತಮುತ್ತ ಆಟಿಕೆ ಸಾಮಾಗ್ರಿ, ತಿಂಡಿತಿನಿಸುಗಳ ಅಂಗಡಿಗಳು ಜಾತ್ರೆ ಕಳೆತಂದಿದ್ದರೆ, ಪರ ಊರುಗಳಿಂದಲೂ ಬಂಧುಗಳು  ಬಂದಿದ್ದರಿಂದ ಹಬ್ಬಕ್ಕೆ ಮತ್ತಷ್ಟು ಕಳೆ ಬಂದಿತ್ತು. ಅನೇಕ ಬಡಾವಣೆ, ಬೀದಿಗಳ ತಮ್ಮ ತಮ್ಮ ಮನೆಗಳಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿಕೊಂಡು ಹಬ್ಬದ ಅಡುಗೆ ತಯಾರಿಸಿ, ಊಟದ ವ್ಯವಸ್ಥೆ ಮಾಡಿದ್ದರು.  ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಸಂಚಾರಿ ಶೌಚಾಲಯ, ಬೇವಿನ ಉಡುಗೆ ಧರಿಸಿದ್ದವರಿಗೆ ಸ್ನಾನದ ವ್ಯವಸ್ಥೆ, ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನ ಕಮಿಟಿ ಯಿಂದ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತವಾಗಿ ಕ್ರಮ ಕೈಗೊಂಡಿದ್ದರು.

ADVERTISEMENT

ಕೋಣ ಬಲಿ ನಿಷೇಧ: ಮಾರಿಕಾಂಬ ಜಾತ್ರೆಗೆ ಕೋಣ ಬಲಿ ನೀಡುವುದು ವಾಡಿಕೆ. ಆದರೆ, ಸರ್ಕಾರ ಪ್ರಾಣಿ ಬಲಿಯನ್ನು ನಿಷೇಧಿಸಿ ಆದೇಶ ಹೊರಡಿಸಿರುವುದರಿಂದ ಕೋಣ ಬಲಿ ನಿಷೇಧಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.