ADVERTISEMENT

ಮುಕ್ತ ವಿವಿ ಪ್ರವೇಶಕ್ಕೆ ಆತಂಕ ಬೇಡ: ಪ್ರೊ.ಶಿವಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 13:36 IST
Last Updated 2 ಸೆಪ್ಟೆಂಬರ್ 2018, 13:36 IST
ಪ್ರೊ.ಡಿ. ಶಿವಲಿಂಗಯ್ಯ
ಪ್ರೊ.ಡಿ. ಶಿವಲಿಂಗಯ್ಯ   

ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ನೀಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪ್ರವೇಶಾತಿ ಪಡೆಯಬಹುದು ಎಂದು ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ಹೇಳಿದರು.

ಮಾನ್ಯತೆ ನವೀಕರಣದ ಸಮಸ್ಯೆ ಎದುರಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಯು 2018–19ನೇ ಸಾಲಿನಿಂದ 2022–23ರವರೆಗೆ ಮಾನ್ಯತೆ ನೀಡಿದೆ. ಶೈಕ್ಷಣಿಕ ವರ್ಷಕ್ಕೆ ವಿವಿಧ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಪ್ರವೇಶಾತಿ, ಮಾನ್ಯತೆ ಹಾಗೂ ಇತರೆ ಎಲ್ಲಾ ಮಾಹಿತಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ www.ksoumysore.karnataka.gov.in ಸಿಗಲಿವೆ ಎಂದು ತಿಳಿಸಿದರು.

‘ಈ ವೆಬ್‌ಸೈಟ್‌ನಲ್ಲಿ ವಿವರಣಾ ಪುಸ್ತಕ, ಪ್ರವೇಶಾತಿ ಅರ್ಜಿ ನಮೂನೆ ಮತ್ತು ಶುಲ್ಕ ಪಾವತಿಗಾಗಿ ಚಲನ್‌ಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಯಾವುದಾದರೊಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆಯಬಹುದು’ ಎಂದರು.

ADVERTISEMENT

‘ಈ ಹಿಂದೆ ಕೆಲಗೊಂದಲಗಳಿಂದ ಮೂರು ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇದು ಬೇಸರದ ಸಂಗತಿ. ಆದರೆ, ಈಗ ಯುಜಿಸಿಯೇ ಮಾನ್ಯ ನೀಡಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪ್ರವೇಶ ಪಡೆಯಬಹುದು’ ಎಂದು ಹೇಳಿದರು.

ಪ್ರಾದೇಶಿಕ ಕೇಂದ್ರ ಕಚೇರಿ:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಚೇರಿಯು ಶಿವಮೊಗ್ಗ ಆಲ್ಕೊಳ ವೃತ್ತ ಬಳಿಯಿರುವ ಎಲ್‌ಐಸಿ ಕಚೇರಿ ಬಳಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ಕಲಿಕಾ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ಸುತ್ತಮುತ್ತ ಇರುವ ವಿದ್ಯಾರ್ಥಿಗಳು ತಮ್ಮ ಕುಂದು ಕೊರತೆಗಳ ಬಗ್ಗೆ ಈ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.