ADVERTISEMENT

ಶಿವಮೊಗ್ಗ: ರೈಲ್ವೆ ಅಂಡರ್ ಪಾಸ್; ಬೇಕಿದೆ ತಕ್ಷಣದ ಚಿಕಿತ್ಸೆ

ಕೆಳಸೇತುವೆಯಲ್ಲಿ ಚರಂಡಿ ನೀರು; ಸಾರ್ವಜನಿಕರಿಂದ ಹಿಡಿಶಾಪ

ನಾಗರಾಜ ಹುಲಿಮನೆ
Published 6 ಡಿಸೆಂಬರ್ 2023, 6:49 IST
Last Updated 6 ಡಿಸೆಂಬರ್ 2023, 6:49 IST
ಶಿವಮೊಗ್ಗದ ವೀರಣ್ಣ ಲೇಔಟ್ (ಪಿ ಅಂಡ್ ಟಿ ಕಾಲೋನಿ) ರೈಲ್ವೆ ಕೆಳ ಸೇತುವೆಯ ತಡೆಗೋಡೆಯ ಇಕ್ಕೆಲಗಳಿಂದ ಕೊಳಚೆ ನೀರು ಸೋರಿಕೆಯಾಗುತ್ತಿದೆ.
ಶಿವಮೊಗ್ಗದ ವೀರಣ್ಣ ಲೇಔಟ್ (ಪಿ ಅಂಡ್ ಟಿ ಕಾಲೋನಿ) ರೈಲ್ವೆ ಕೆಳ ಸೇತುವೆಯ ತಡೆಗೋಡೆಯ ಇಕ್ಕೆಲಗಳಿಂದ ಕೊಳಚೆ ನೀರು ಸೋರಿಕೆಯಾಗುತ್ತಿದೆ.   

ಶಿವಮೊಗ್ಗ: ಇಲ್ಲಿನ ವೀರಣ್ಣ ಲೇಔಟ್ (ಪಿ ಅಂಡ್ ಟಿ ಕಾಲೊನಿ) ರೈಲ್ವೆ ಕೆಳ ಸೇತುವೆಗೆ ಚಿಕಿತ್ಸೆಯ ಅಗತ್ಯವಿದೆ. ಆರಂಭದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದ ಸ್ಥಳೀಯರು ಈಗ ಕಳ‍‍ಪೆ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದು ನಗರದ ಮೊದಲ ರೈಲ್ವೆ ಕೆಳ ಸೇತುವೆ. ಇದರ ನಿರ್ಮಾಣಕ್ಕೂ ಮುನ್ನ ಜನರು ಓಡಾಟಕ್ಕೆ ಸಮಸ್ಯೆ ಎದುರಿಸುತ್ತಿದ್ದರು. ಬೊಮ್ಮನಕಟ್ಟೆಗೆ ಸಂ‍ಪರ್ಕ ಕಲ್ಪಿಸುವ ರೈಲ್ವೆ ಗೇಟ್‌ ವಿ‍ಪರೀತ ಸಂಚಾರ ದಟ್ಟಣೆಗೆ ಒಳಗಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಪ್ರಯಾಣಿಕರ ಸುರಕ್ಷತೆ ಮತ್ತು ವಸತಿ ಪ್ರದೇಶಗಳ ಸಂಚಾರಕ್ಕೆ ಅನುವಾಗಲು ವಿನೋಬನಗರ 100 ಅಡಿ ರಸ್ತೆಗೆ ಈ ಸೇತುವೆ ನಿರ್ಮಿಸಲಾಗಿದೆ.

ಆದರೆ, ಈಗ ಕೆಳ ಸೇತುವೆಯ ತಡೆಗೋಡೆಗಳ ಇಕ್ಕೆಲಗಳಿಂದ ಅಕ್ಕಪಕ್ಕದ ಬಡಾವಣೆಯ ಒಳಚರಂಡಿ ನೀರು ಸೋರಿಕೆ ಆಗುತ್ತಿದೆ. ಇದರಿಂದ ಸೇತುವೆಯಡಿಯ ಮಾರ್ಗದಲ್ಲಿ ಪಾಚಿ ಕಟ್ಟಿಕೊಂಡಿದ್ದು, ಕೊಳಚೆ ನೀರಿನ ವಾಸನೆ ಹರಡಿದೆ. ವಾಹನಗಳು ಓಡಾಟ ನಡೆಸುವಾಗ ಪಾದಚಾರಿಗಳಿಗೆ ಚರಂಡಿ ನೀರು ಸಿಡಿಯುತ್ತಿದೆ. ಪಾಚಿ ನೆಲದಲ್ಲಿ ದ್ವಿಚಕ್ರ ವಾಹನಗಳು ಜಾರಿ ಬಿದ್ದು ಸವಾರರು ನಿತ್ಯ ಕಿರಿ–ಕಿರಿ ಅನುಭವಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ADVERTISEMENT

ಸೋಮಿನಕೊಪ್ಪ ಬಳಿ ನಡೆದಿರುವ ರೈಲ್ವೇ ಓವರ್‌ ಬ್ರಿಡ್ಜ್ (ಆರ್‌ಒಬಿ) ಯೋಜನೆಯೊಂದಿಗೆ ನಡೆದಿರುವ ಈ ಕಾಮಗಾರಿಗೆ ಅಂದಾಜು ₹ 3.65 ಕೋಟಿ ವೆಚ್ಚ ಭರಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಕಳೆದ ಆಗಸ್ಟ್ 17ರಂದು ಕಾಮಗಾರಿಗೆ ಚಾಲನೆ ನೀಡಿದ್ದರು.

ಇದು ಪಿ ಅಂಡ್ ಟಿ ಕಾಲೋನಿ, ಅರವಿಂದ ನಗರ, ಸೂರ್ಯ ಲೇಔಟ್, ಕನಕ ನಗರ, ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳಿಗೆ ಓಡಾಡಲು ಅವಕಾಶ ಕಲ್ಪಿಸಿದ್ದು, ಬೊಮ್ಮನಕಟ್ಟೆ ಮೂಲಕ ಸವಳಂಗ ರಸ್ತೆಯನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಬಹುದಾಗಿದೆ. ಅದೇ ರೀತಿ ನಿತ್ಯ ನೂರಾರು ಪ್ರಯಾಣಿಕರು ಈ ಅಂಡರ್ ಪಾಸ್ ಬಳಸುತ್ತಿದ್ದು, ಈ ಸಮಸ್ಯೆಯಿಂದ ಜನರಿಗೆ ಮುಕ್ತಿ ಬೇಕಿದೆ.

ಬೀದಿ ದೀಪ ಅಳವಡಿಸಿ:

ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಯೋಜನೆಗೆ ಚಾಲನೆ ನೀಡಿ 4 ತಿಂಗಳು ಕಳೆದಿವೆ. ಆದರೂ, ರಾತ್ರಿ ವೇಳೆ ಸಂಚರಿಸಲು ಬೀದಿದೀಪ ಅಳವಡಿಸಿಲ್ಲ. ಇದರಿಂದ ಈ ಮಾರ್ಗದಲ್ಲಿ ಕಳ್ಳತನ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿವೆ ಎಂದು ಸ್ಥಳೀಯ ನಿವಾಸಿ ಪ್ರಕಾಶ್ ‘ಪ್ರಜಾವಾಣಿ’ ಎದುರು ದೂರಿದರು.

ನಗರದಲ್ಲಿ ರೈಲ್ವೆ ಸೇತುವೆಗಳ ಅನೇಕ ಕಾಮಗಾರಿ ನಡೆಯುತ್ತಿವೆ. ಆದ್ದರಿಂದ ರೈಲ್ವೆ ಅಂಡರ್ ಪಾಸ್‌ಗೆ ಬೀದಿ ದೀಪ ಹಾಗೂ ಅದರ ವೆಚ್ಚ ಭರಿಸುವ ಕುರಿತು ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.

ಇದು ಒಳ ಚರಂಡಿಯಿಂದ ಸೋರಿಕೆಯಾಗುತ್ತಿರುವ ನೀರು ಅನ್ನಿಸೊಲ್ಲ. ಬದಲಿಗೆ ಭೂಮಿಯ ತೇವಾಂಶದ ನೀರು. ಸಮಸ್ಯೆಯನ್ನು ಕೂಲಂಕುಶವಾಗಿ ಪರಿಶೀಲಿಸಲಾಗುವುದು. ಶೀಘ್ರ ರೈಲ್ವೆ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಜಂಟಿಯಾಗಿ ಇರುವ ಸಮಸ್ಯೆ ಪರಿಹರಿಸುವುದಾಗಿ ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌  ಶಾಂತಯ್ಯ ತಿಳಿಸಿದರು.

ಶಿವಮೊಗ್ಗ ವೀರಣ್ಣ ಲೇಔಟ್ (ಪಿ ಅಂಡ್ ಟಿ ಕಾಲೋನಿ) ರೈಲ್ವೆ ಕೆಳ ಸೇತುವೆಯ ತಡೆಗೋಡೆಯ ಇಕ್ಕೆಲಗಳಿಂದ ನೀರು ಸೋರಿಕೆ.
ಶಿವಮೊಗ್ಗ ವೀರಣ್ಣ ಲೇಔಟ್ (ಪಿ ಅಂಡ್ ಟಿ ಕಾಲೋನಿ) ರೈಲ್ವೆ ಕೆಳ ಸೇತುವೆಯ ತಡೆಗೋಡೆಯ ಇಕ್ಕೆಲಗಳಿಂದ ಬಿಸಿ ನೀರು ಸೋರಿಕೆ.

ನೀರು ಸೋರಿಕೆ ಆಗುತ್ತಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

-ಮಾಯಣ್ಣ ಗೌಡ ಆಯುಕ್ತ ಮಹಾನಗರ ಪಾಲಿಕೆ ಶಿವಮೊಗ್ಗ

ಡಿ.11ರಿಂದ ದುರಸ್ತಿ ಕಾರ್ಯ

‘ರೈಲ್ವೆ ಕೆಳ ಸೇತುವೆ ತಡೆಗೋಡೆಯ ಇಕ್ಕೆಲಗಳಿಂದ ಕೊಳಚೆ ನೀರು ಬಸಿದು ರಸ್ತೆಗೆ ಸೇರದಂತೆ ತಡೆಯಲು ಪ್ರತ್ಯೇಕ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತ್ಯೇಕ ಪೈಪ್ ಅಳವಡಿಸಿ ಸೋರಿಕೆಯಾಗುವ ನೀರನ್ನು ಕಾಲುವೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯ ಡಿ.11ರಿಂದ ಆರಂಭಿಸಲಿದ್ದೇವೆ. ಅದೇರೀತಿ ಮಹಾನಗರ ಪಾಲಿಕೆ ಸಹಕಾರ ನೀಡಬೇಕಿದೆ’ ಎಂದು ನೈರುತ್ಯ ರೈಲ್ವೆ ವಿಭಾಗದ ಹಿರಿಯ ಎಂಜಿನಿಯರ್ ರಾಜ‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.