ADVERTISEMENT

ಅಂಬೇಡ್ಕರ್ ಚಿಂತನೆ ಒಪ್ಪದವರಿಗೆ ಅಧಿಕಾರ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪ್ರೊ.ರಾಜೇಂದ್ರ ಚೆನ್ನಿ ಕಳವಳ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 10:47 IST
Last Updated 11 ಫೆಬ್ರುವರಿ 2017, 10:47 IST
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ  ನಡೆದ  ‘ಸಮಕಾಲೀನ ಸಾಮಾಜಿಕ ಚಳವಳಿಗಳ ಬಿಕ್ಕಟ್ಟುಗಳು:ಅಂಬೇಡ್ಕರ್ ಚಿಂತನೆಗಳ ದಾರಿ’ ವಿಷಯ ಕುರಿತ ವಲಯ ಮಟ್ಟದ ಕಾರ್ಯಾಗಾರದಲ್ಲಿ ಕುವೆಂಪು ವಿ.ವಿ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ  ಉದ್ಘಾಟಿಸಿದರು. ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್,  ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಇದ್ದರು
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ‘ಸಮಕಾಲೀನ ಸಾಮಾಜಿಕ ಚಳವಳಿಗಳ ಬಿಕ್ಕಟ್ಟುಗಳು:ಅಂಬೇಡ್ಕರ್ ಚಿಂತನೆಗಳ ದಾರಿ’ ವಿಷಯ ಕುರಿತ ವಲಯ ಮಟ್ಟದ ಕಾರ್ಯಾಗಾರದಲ್ಲಿ ಕುವೆಂಪು ವಿ.ವಿ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಉದ್ಘಾಟಿಸಿದರು. ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್, ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಇದ್ದರು   

ತುಮಕೂರು: ‘ಸಂವಿಧಾನದ ಸ್ವರೂಪವನ್ನೇ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಈಗಿರುವ ಹಾಗೆಯೇ ಸಂವಿಧಾನ ಮುಂದುವರಿಯಲು ಬಿಡಲಿಕ್ಕಿಲ್ಲ ಎಂಬ ಆತಂಕ ಎದುರಾಗಿದೆ. ಯಾಕೆಂದರೆ, ಅಂಬೇಡ್ಕರ್ ಚಿಂತನೆಗಳನ್ನು ಎಂದೂ ಒಪ್ಪದ ತಾತ್ವಿಕತೆ ದೇಶದಲ್ಲಿ ಅಧಿಕಾರ ನಡೆಸುತ್ತಿದೆ’ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷಾಚರಣೆ ಅಂತರರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನದಡಿ ‘ಸಮಕಾಲೀನ ಸಾಮಾಜಿಕ ಚಳವಳಿಗಳ ಬಿಕ್ಕಟ್ಟುಗಳು: ಅಂಬೇಡ್ಕರ್ ಚಿಂತನೆಗಳ ದಾರಿ’ ವಿಷಯ ಕುರಿತ ವಲಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘80ರ ದಶಕದಲ್ಲಿ ಸಕ್ರಿಯವಾಗಿದ್ದ ಸಾಮಾಜಿಕ ಚಳವಳಿ ಬರು ಬರುತ್ತ ಕಳೆಗುಂದಿ ಛಿದ್ರವಾದವು ಎಂಬ ಭಾವನೆ ಇದೆ. ಈಗ ಚಳವಳಿಗೆ ಸಾಮಾಜ ಬದಲಾವಣೆ ಮಾಡುವ ಶಕ್ತಿ ಇಲ್ಲ. ಚಳವಳಿಯ ಏರುಗಾಲ ಮುಗಿದು ಹೋಗಿದೆ ಎಂದು ಹೇಳಲಾಗುತ್ತದೆ. ಮುಖಂಡರಲ್ಲಿನ ಭಿನ್ನಾಭಿಪ್ರಾಯ, ಸ್ವಯಂ ಪ್ರತಿಷ್ಠೆ, ಭ್ರಷ್ಟಾಚಾರ ವಾಸನೆ, ಪ್ರಾಮಾಣಿಕತೆ ಪ್ರಶ್ನೆ ಹೀಗೆ ಅನೇಕ ಕಾರಣ ನೀಡಿದರೂ ಅವು ಸಮರ್ಪಕವಾಗಿಲ್ಲ’ ಎಂದು ಹೇಳಿದರು.

‘ಚಳವಳಿ ಸಾಯುವುದಕ್ಕೆ ಜಾತಿ ವಿನಾಶದ ಚಿಂತನೆ ಅಲಕ್ಷ್ಯ ಮಾಡಿದ್ದೇ ಕಾರಣ. ಈಗ ಚಳವಳಿಗಳ ಬಿಕ್ಕಟ್ಟು ಬಹಳ ಸಂಕೀರ್ಣವಾಗಿವೆ. ಚಳವಳಿಗಳು ಮತ್ತೊಂದು ಸಾರಿ ಪರೀಕ್ಷೆಗೊಡ್ಡಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

‘ಜಾತಿ ವ್ಯವಸ್ಥೆ ಎಲ್ಲಿ ಇರುತ್ತದೊ ಅಲ್ಲಿ ಮಾನವ ಹಕ್ಕುಗಳು ಇರುವುದೇ ಇಲ್ಲ ಎಂಬ ಸ್ಪಷ್ಟತೆಯನ್ನು ಡಾ.ಅಂಬೇಡ್ಕರ್ ನೀಡಿದ್ದರು. ನಾಗರಿಕ ಹಕ್ಕುಗಳೂ ಕೂಡಾ ಜಾತಿ ವ್ಯವಸ್ಥೆಯಿಂದ ನಿರ್ನಾಮವಾಗಿ ಹೋಗುತ್ತವೆ ಎಂದು ಹೇಳಿದ್ದರು. ಜಾತಿ ವ್ಯವಸ್ಥೆ ಇಂದಿಗೂ ಇದೆ. ದಲಿತರು ತಮ್ಮ ಹಕ್ಕು, ನಾಗರಿಕ ಹಕ್ಕುಗಳನ್ನು ಕೇಳಿದರೂ ಹಲ್ಲೆಗಳಾಗುತ್ತಿವೆ’ ಎಂದರು.

‘ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೊಳಿಸಿದರೆ ದಲಿತ ಸಮುದಾಯದವರು ಅಡುಗೆ ಮಾಡುತ್ತಾರೆ, ದಲಿತರ ಮಕ್ಕಳೊಂದಿಗೆ ತಮ್ಮ ಮಕ್ಕಳು ಕುಳಿತು ಊಟ ಮಾಡುತ್ತಾರೆ ಎಂಬ ಕಾರಣಕ್ಕೆ  ಮಕ್ಕಳನ್ನು ಶಾಲೆಗೆ ಕಳಿಸದ ಪ್ರಕರಣಗಳು ನಡೆದವು. ಇಂತಹ ಸಂದರ್ಭದಲ್ಲಿ ಸರ್ಕಾರ ಸುಮ್ಮನೆ ಇದ್ದು ಬಿಟ್ಟಿತು. ಅದರ ಭಾಷೆಯೇ ಬೇರೆಯಾಯಿತು. ಇದು ವಾಸ್ತವ ಸಂಗತಿ. ಹೀಗಾದರೆ, ಜಾತಿ ನಿರ್ಮೂಲನೆ ಸಾಧ್ಯವೆ’ ಎಂದು ಪ್ರೊ.ಚೆನ್ನಿ ಪ್ರಶ್ನಿಸಿದರು.

‘ಶೋಷಿತ ಯುವ ಮನಸ್ಸುಗಳು ಅಂಬೇಡ್ಕರ್ ಚಿಂತನೆ ಸಂಸ್ಕೃತಿ ಬೆಳೆಸಬೇಕು. ಅಂಬೇಡ್ಕರ್ ಎಂದರೆ ಮೀಸಲಾತಿ ಎಂಬ ಭಾವನೆ ಬೇರೂರಿದೆ. ಅದರಾಚೆ ಚಿಂತನೆ ಮಾಡುತ್ತಿಲ್ಲ. ಸುಶಿಕ್ಷಿತರಲ್ಲಿಯೇ ಈ ಸಮಸ್ಯೆ ಹೆಚ್ಚಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇಂದಿರಾ ಕೃಷ್ಣಪ್ಪ ಮಾತನಾಡಿ, ‘ಗೋರಾಜಕಾರಣ, ಅಸಹಿಷ್ಣುತೆ, ಜಾತಿಯತೆ ಸೇರಿ ಅನೇಕ ಸಮಸ್ಯೆಗಳ ವಿರುದ್ಧ ದೇಶವ್ಯಾಪಿ ಚಿಂತಕರು, ಸಾಂಸ್ಕೃತಿಕ ಮುಖಂಡರು ಧ್ವನಿ ಎತ್ತಿದ್ದಾರೆ. ಸಂಘಟನೆಗಳು ಪ್ರಬಲವಾಗಿ ಹೋರಾಟ ನಡೆಸಿವೆ’ ಎಂದರು.

ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್  ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎಂ. ವೆಂಕಟೇಶ್ವರಲು,  ವೇದಿಕೆಯಲ್ಲಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಟ್ರಂಪ್‌– ಮೋದಿ ಇಬ್ಬರೂ ಒಂದೇ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಈ ಇಬ್ಬರ ಚಿಂತನೆಯೂ ಒಂದೇ ಆಗಿದೆ. ಟ್ರಂಪ್ ಮುಸ್ಲಿಮರನ್ನು ಸೇರಿಸಿಕೊಳ್ಳುತ್ತಿಲ್ಲ. ಇಲ್ಲಿ ಮೋದಿಗೆ ಮುಸ್ಲಿಮರು, ಕ್ರಿಶ್ಚಿಯನ್ನರ ಬಗ್ಗೆ ಸೇರಿಕೆ ಇಲ್ಲ. ಇದೊಂದು ರೀತಿ ಅಂತರರಾಷ್ಟ್ರೀಯ ಮಟ್ಟದ ಬ್ರಾಹ್ಮಣಿಸಂ ಎಂದು ಕವಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT