ADVERTISEMENT

ಅತಿರುದ್ರ ಮಹಾಯಾಗ ಮಹೋತ್ಸವಕ್ಕೆ ಚಾಲನೆ

ಫೆಬ್ರುವರಿ 25ರ ವರೆಗೆ ವಿಶ್ವಶಾಂತಿಗಾಗಿ 65ನೇ ಮಹಾಯಾಗ; ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 5:47 IST
Last Updated 14 ಫೆಬ್ರುವರಿ 2017, 5:47 IST
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 65ನೇ ವಿಶ್ವಶಾಂತಿ ಅತಿರುದ್ರ ಮಹಾಯಾಗ ಮಹೋತ್ಸವಕ್ಕೆ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಮಾಜಿ ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಉದ್ಯಮಿ ರಮೇಶ್‌ಬಾಬು, ವೆಂಕಟೇಶ್ ಮತ್ತಿತರರಿದ್ದರು (ಎಡಚಿತ್ರ). ಅತಿರುದ್ರ ಮಹಾಯಾಗ ನಡೆಯುವ ಹೋಮಕುಂಡಗಳನ್ನು ಪುರೋಹಿತರು ಸೋಮವಾರ ಸಂಜೆ ಪರಿಶೀಲಿಸಿದರು
ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 65ನೇ ವಿಶ್ವಶಾಂತಿ ಅತಿರುದ್ರ ಮಹಾಯಾಗ ಮಹೋತ್ಸವಕ್ಕೆ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಮಾಜಿ ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಉದ್ಯಮಿ ರಮೇಶ್‌ಬಾಬು, ವೆಂಕಟೇಶ್ ಮತ್ತಿತರರಿದ್ದರು (ಎಡಚಿತ್ರ). ಅತಿರುದ್ರ ಮಹಾಯಾಗ ನಡೆಯುವ ಹೋಮಕುಂಡಗಳನ್ನು ಪುರೋಹಿತರು ಸೋಮವಾರ ಸಂಜೆ ಪರಿಶೀಲಿಸಿದರು   

ತುಮಕೂರು: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ‘65ನೇ ವಿಶ್ವಶಾಂತಿ ಅತಿರುದ್ರ ಮಹಾಯಾಗ ಮಹೋತ್ಸವ’ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡವು.

ಫೆ. 25ರ ವರೆಗೂ 65ನೇ ಈ ಮಹಾಯಾಗ ಕೃಷಿ ಪೀಠಾಧಿಪತಿ ಕೃಷಿ ಜ್ಯೋತಿ ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಸೋಮವಾರ ಬೆಳಿಗ್ಗೆ ಯಾಗಶಾಲಾ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಪೂಜಾ ಕಾರ್ಯ ನೆರವೇರಿಸಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ, ‘ಲೋಕ ಕಲ್ಯಾಣಾರ್ಥವಾಗಿ ನಡೆಸುತ್ತಿರುವ ಈ ಮಹಾಯಾಗದಿಂದ ದೇಶ, ಸಮಾಜಕ್ಕೆ ಒಳ್ಳೆಯದಾಗಲಿ. ಪೂಜಾ ಫಲದಿಂದ ಬೇಗ ಮಳೆ ಸುರಿದು ಬರದ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಪ್ರಾರ್ಥಿಸಿದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಲೋಕದ ಹಿತಕ್ಕಾಗಿ ಯಾಗ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಮಾಜಿ ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ‘ಈ ರೀತಿ ಮಹಾಯಾಗ ಕಾರ್ಯಕ್ರಮಗಳಿಂದ ಲೋಕಕ್ಕೆ ಒಳಿತಾಗಲಿದೆ. ನಾವೆಲ್ಲರೂ ಮಳೆ ಇಲ್ಲದೇ ತೊಂದರೆಗೆ ಸಿಲುಕಿದ್ದೇವೆ. ಇದರಿಂದ ಪರಿಹಾರವಾಗಬೇಕು ಎಂಬುದೇ ಪ್ರತಿಯೊಬ್ಬರ ಪ್ರಾರ್ಥನೆಯಾಗಿದೆ’ ಎಂದು ನುಡಿದರು.

ಬೆಳಿಗ್ಗೆ 6 ಗಂಟೆಗೆ ಕೃಷ್ಣ ಜ್ಯೋತಿ ಸ್ವರೂಪಾನಂದ ಸ್ವಾಮೀಜಿ ನೇತೃತ್ವದಲ್ಲಿ ಪುರೋಹಿತರು  ಶ್ರೀ ಕೃಷ್ಣ ಕಾಲಚಕ್ರಸಹಿತ ರಾಧಾಕೃಷ್ಣ ಪರಮಾತ್ಮನಿಗೆ ಪೂಜೆ ನೆರವೇರಿಸಿದರು. ಬಳಿಕ ಯಾಗಶಾಲೆಯ ಸಂಸ್ಕಾರಗಳು ಆರಂಭಗೊಂಡವು. ಗಣಪತಿ ಪೂಜೆ, ಗೋಸಹಿತ ಯಾಗ ಶಾಲಾ ಪ್ರವೇಶ,  ಅಖಂಡ ಜ್ಯೋತಿ ಯಾಗ ಶಾಲಾ ಸಂಸ್ಕಾರ, ಮಾತೃಕಾ ಪೂಜಾ ಮಂಟಪ ಆರಾಧನೆ, ಸಂಜೆ ರಮಾರಹಿತ ಸತ್ಯನಾರಾಯಣಸ್ವಾಮಿ ವ್ರತ ನಡೆಯಿತು. ಸಂಜೆ ಕಳಸ ಸ್ಥಾಪನೆ ನಡೆಯಿತು.

ಸಾರ್ವಜನಿಕರಿಗೆ 54 ಹೋಮ ಕುಂಡ: ಸಾರ್ವಜನಿಕರು ಹೋಮ ಪೂಜೆ ನೆರವೇರಿಸಲು ಉಚಿತ ಅವಕಾಶವಿದೆ. ಪೂಜಾ ಸಾಮಗ್ರಿ ತಂದು ಪೂಜೆ ಸಲ್ಲಿಸಬಹುದು. ಇದಕ್ಕಾಗಿ 54 ಹೋಮ ಕುಂಡಗಳನ್ನು ರೂಪಿಸಲಾಗಿದೆ. ಮತ್ತೊಂದೆಡೆ ವೇದ ಪಂಡಿತರು ಹೋಮ ನಡೆಸಲು ಪ್ರತ್ಯೇಕವಾಗಿ 12 ಕುಂಡಗಳನ್ನು ರೂಪಿಸಲಾಗಿದೆ. ಇಲ್ಲಿ ಪಂಡಿತರು, ಸ್ವಾಮೀಜಿಗಳು ಹೋಮ ನೆರವೇರಿಸುವರು ಎಂದು ಸಂಘಟಕರಲ್ಲೊಬ್ಬರಾದ ವೆಂಕಟೇಶ್ ವಿವರಿಸಿದರು.

ಪ್ರತಿ ನಿತ್ಯವೂ ಒಂದೊಂದು ಹೋಮ ನಡೆಯಲಿದೆ. ಪ್ರತಿ ದಿನ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆ ಪ್ರಸಾದ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ‘ಪ್ರಸಾದವನ್ನು ಬಫೆ ಪದ್ಧತಿಯಡಿ ವಿತರಿಸುವುದು ಬೇಡ, ಭಕ್ತರು ಕುಳಿತು ಪ್ರಸಾದ ಸ್ವೀಕರಿಸಿದರೇ ಯಾಗಕ್ಕೆ ಶ್ರೇಷ್ಠತೆ ಎಂದು ಸ್ವರೂಪಾನಂದ ಸ್ವಾಮೀಜಿಯವರ ಅಪೇಕ್ಷೆಯಾಗಿದ್ದರಿಂದ ಅದೇ ರೀತಿ ವ್ಯವಸ್ಥೆಯನ್ನು ಮಾಡಿದ್ದೇವೆ’ ಎಂದು ವಿವರಿಸಿದರು.

24ರಂದು ಮಹಾಶಿವರಾತ್ರಿ ದಿನ ಅಂದಾಜು 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಶಿವರಾತ್ರಿ ದಿನ ಲಕ್ಷ ದೀಪೋತ್ಸವವೂ ನಡೆಯಲಿದೆ. ಫೆ.24ರ ಬೆಳಿಗ್ಗೆ 6ರಿಂದ 25ರ ಬೆಳಗಿನ ಜಾವದವರೆಗೆ ಹಾಲು ಅಭಿಷೇಕ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಕಿ ಅಂಶಗಳು

100ಕ್ವಿಂಟಲ್ - ಸಂಗ್ರಹವಾಗಿರುವ  ತುಪ್ಪದ ಪ್ರಮಾಣ

1000ಕೆ.ಜಿ - ತೊಗರಿ ಬೇಳೆ

1ಲಕ್ಷ - ಬಾಳೆ ಎಲೆಗಳು

120ಟನ್ - ಸಂಗ್ರಹವಾಗಿರುವ ಸೌದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.