ADVERTISEMENT

ಅಧಿಕಾರಿಗಳಿಗೆ ಶಾಸಕ ತರಾಟೆ

ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಕುರಿತು ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 10:53 IST
Last Updated 11 ಫೆಬ್ರುವರಿ 2017, 10:53 IST

ಚಿಕ್ಕನಾಯಕನಹಳ್ಳಿ: ‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು 2 ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ನೀರು ಬರುತ್ತಿಲ್ಲ ಎಂದು ಜನರು ತಮಗೆ ಕರೆ ಮಾಡುತ್ತಿದ್ದು, ಪುರಸಭೆ ಏನು ಮಾಡುತ್ತಿದೆ’ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಪ್ರಶ್ನಿಸಿದರು.

‘ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕರೆದಿದ್ದ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರು ಒದಗಿಸಲು ಹಣದ ಕೊರತೆ ಇಲ್ಲ. ನೀರು ಲಭ್ಯವಿರುವ ಕಡೆ ಹೊಸ ಕೊಳವೆಬಾವಿ ಕೊರೆಸಬೇಕು. ಕನಿಷ್ಠ ವಾರದಲ್ಲಿ 2 ಬಾರಿ ನೀರು ಒದಗಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪುರಸಭೆ ಎಂಜಿನಿಯರ್ ಮಹೇಶ್‌ಬಾಬು ಮಾತನಾಡಿ, ‘ಪಟ್ಟಣದ ಜನಸಂಖ್ಯೆ ಅನುಸಾರ ಪ್ರತಿ ದಿನ 3.13 ದಶಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಆದರೆ ಲಭ್ಯವಿರುವ ನೀರಿನ ಪ್ರಮಾಣ ಕೇವಲ 0.3 ದಶಲಕ್ಷ ಲೀಟರ್. ಪಟ್ಟಣದಲ್ಲಿ ಒಟ್ಟು 79 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 50 ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು 29 ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ಬರುತ್ತಿದೆ’ ಎಂದು ವಿವರ ನೀಡಿದರು.

6 ಓವರ್ ಹೆಡ್ ಟ್ಯಾಂಕ್‌ಗಳಿಂದ 23 ವಾಡ್‌ಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಒತ್ತಡ ಕಡಿಮೆ ಇರುವ ಕಾರಣ 14 ಕೊಳವೆ ಬಾವಿಗಳಿಂದ ನೇರವಾಗಿ ಪೈಪ್‌ಲೈನ್ ಮೂಲಕ ಸಾರ್ವಜನಿಕರಿಗೆ ನೀರು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 18 ಕೊಳವೆಬಾವಿ ಕೊರೆಸಿದ್ದು, 13ರಲ್ಲಿ ನೀರು ಸಿಕ್ಕಿದೆ ಎಂದರು.

ಪಟ್ಟಣದಲ್ಲಿ ಮುಖ್ಯ ಸರಬರಾಜು ಮಾರ್ಗಕ್ಕೆ ನೇರವಾಗಿ 190 ನಲ್ಲಿಗಳ ಸಂಪರ್ಕ ಇದ್ದು, ಮನೆಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ರೈಸಿಂಗ್ ಮೈನ್‌ಗಳನ್ನು ರದ್ದುಪಡಿಸಿದರೆ ಮಾತ್ರ ಸಂಪ್‌ಗಳಿಗೆ ನೀರು ಒದಗಿಸಲು ಸಾಧ್ಯ ಎಂದರು.

ನೀರು ನಿರ್ವಹಣಾ ಸಮಿತಿ ರಚಿಸಿ: ಲಭ್ಯವಿರುವ ಅಲ್ಪ ನೀರನ್ನು ಜಾಣ್ಮೆಯಿಂದ ಬಳಸುವ ಅಗತ್ಯ ಇದೆ. ಅಧಿಕಾರಿಗಳಿಂದ ಇದು ಸಾಧ್ಯ ಇಲ್ಲ. ವಾರ್ಡ್‌ ಸದಸ್ಯರು, ನಾಗರಿಕರು ಒಟ್ಟಾಗಿ  ನೀರು ನಿರ್ವಹಣೆಗಾಗಿ ಸಮಿತಿ ರಚಿಸಿಕೊಳ್ಳಬೇಕು. ಸಮಿತಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಮುಖ್ಯಾಧಿಕಾರಿ ಸೇರಿದಂತೆ ಯಾವ ಅಧಿಕಾರಿಯೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಎಚ್.ಬಿ.ಪ್ರಕಾಶ್, ಉಪಾಧ್ಯಕ್ಷೆ ಇಂದಿರಾ ಪ್ರಕಾಶ್, ತಹಶೀಲ್ದಾರ್ ಆರ್.ಗಂಗೇಶ್, ಮುಖ್ಯಾಧಿಕಾರಿ ಮಂಜುಳಾ, ಸದಸ್ಯರಾದ ಸಿ.ಎಸ್.ರಮೇಶ್, ಸಿ.ಡಿ.ಚಂದ್ರಶೇಖರ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ಸಿ.ಪಿ.ಮಹೇಶ್ ಇದ್ದರು.

ಅಂಕಿ-ಅಂಶ(ಲೀಟರ್‌ಗಳಲ್ಲಿ)

135        – ನಿತ್ಯ ವ್ಯಕ್ತಿಗೆ ಬೇಕಿರುವ ನೀರು

ADVERTISEMENT

3140ಲಕ್ಷ – ನಿತ್ಯ ಪಟ್ಟಣಕ್ಕೆ ಬೇಕಿರುವ ನೀರು

3ಲಕ್ಷ       – ಲಭ್ಯ ಇರುವ ನೀರು

28ಲಕ್ಷ      – ಕೊರತೆ ಇರುವ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.