ADVERTISEMENT

ಅಹಿಂದ ಯಾರ ಸ್ವತ್ತೂ ಅಲ್ಲ; ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 13:52 IST
Last Updated 27 ಆಗಸ್ಟ್ 2016, 13:52 IST
eshwarappa
eshwarappa   

ತುಮಕೂರು: ‘ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮತ್ತು ದಲಿತರು(ಅಹಿಂದ) ಯಾರ ಸ್ವತ್ತೂ ಅಲ್ಲ.  ಆ ಸಮುದಾಯದ ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ಸಂಘಟನೆ ಮಾಡುತ್ತಿದ್ದೇನೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆಗೊಂಡಿರುವುದು ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಆಶಯದಿಂದಲೇ ಹೊರತು ಮುಖ್ಯಮಂತ್ರಿ ಆಗಲೇಬೇಕು ಎಂಬುದಕ್ಕೆ ಅಲ್ಲ’ಎಂದು ಹೇಳಿದರು.

‘ರಾಜ್ಯದಲ್ಲಿ  ಬಿಜೆಪಿ ಅಧಿಕಾರದಲ್ಲಿದ್ದಾಗ ಅಹಿಂದ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿದೆ. ಮಠಗಳಿಗೆ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗಿದೆ.  ಈಗ ಸಂಗೊಳ್ಳಿ ರಾಯಣ್ಣ  ಬ್ರಿಗೇಡ್ ಮೂಲಕ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ನಾನು ಅಹಿಂದ ಸಂಘಟನೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಅಲ್ಲ. ಅಹಿಂದ ಸಮುದಾಯ ಅಭಿವೃದ್ಧಿಪಡಿಸಬೇಕು ಎಂಬ ಕಾಳಜಿಯಿಂದ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಪರ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ ಬಜೆಟ್‌ನಲ್ಲಿ ₹ 16000 ಕೋಟಿ ಅನುದಾನ ಗುರಿ ನಿಗದಿಪಡಿಸಿ ಘೋಷಣೆ ಮಾಡಿದ್ದರು. ಬಿಡುಗಡೆ ಮಾಡಿದ್ದು ಕೇವಲ ₹ 800 ಕೋಟಿ ಮಾತ್ರ. ಹಣ ಬಿಡುಗಡೆ ಮಾಡದೇ ಅಭಿವೃದ್ಧಿ ಕೆಲಸ ಮಾಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿದರೆ ಅಭಿವೃದ್ಧಿ ಕೆಲಸ ಆಗುವುದಿಲ್ಲ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಇನ್ನೂ ಎರಡು ವರ್ಷ ಕಾಲಾವಕಾಶವಿದೆ. ಈ ಅವಧಿಯಲ್ಲಾದರೂ ಹೆಚ್ಚಿನ ಅನುದಾನವನ್ನು ಅಹಿಂದ ಸಮುದಾಯದ ಏಳ್ಗೆಗೆ ಖರ್ಚು ಮಾಡಲಿ. ಬೇಕಾದರೆ ಅವರೇ ಮುಖ್ಯಮಂತ್ರಿಯಾಗಲಿ’ ಎಂದು ಹೇಳಿದರು.

‘ಬಿಜೆಪಿ ಪಕ್ಷದ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ರಾಜ್ಯ ಘಟಕದಿಂದ ಹಿಡಿದು ಜಿಲ್ಲಾ, ತಾಲ್ಲೂಕು ಘಟಕದವರೆಗೂ ಅಸಮಾಧಾನವಿರುವುದು ನಿಜ.  ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ’ ಎಂದರು.

ಸುಪ್ರೀಂ ಕೋರ್ಟ್‌ಗೆ ಮನವರಿಕೆಗೆ ನಿರ್ಧಾರ: ‘ರಾಜ್ಯದಲ್ಲಿ ಕುಡಿಯಲು ನೀರಿಲ್ಲ.  ಇಂಥ ಸ್ಥಿತಿಯಲ್ಲಿ ತಮಿಳು ನಾಡಿಗೆ ನೀರು ಕೊಡಲು ಸಾಧ್ಯವಿಲ್ಲ. ಈ ವರ್ಷ ಶೇ 35 ರಷ್ಟು ಮಳೆ ಕಡಿಮೆ ಆಗಿದೆ. ಬೆಳೆಗಳು ಒಣಗುತ್ತಿವೆ. ಈ ನೈಜ ಚಿತ್ರಣವನ್ನು ಅಂಕಿಅಂಶಗಳ ಮೂಲಕ ಸುಪ್ರೀಂ ಕೋರ್ಟ್‌ ಗೆ ಮನವರಿಕೆ ಮಾಡಿಕೊಡಲು ಶುಕ್ರವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.