ADVERTISEMENT

ಆತ್ಮಹತ್ಯೆ ನಿಯಂತ್ರಣ ಯೋಜನೆ ಜಾರಿಯಾಗಲಿ

ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 5:51 IST
Last Updated 14 ಫೆಬ್ರುವರಿ 2017, 5:51 IST
ಪಾವಗಡ ತಾಲ್ಲೂಕಿನಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ತಡೆಗಟ್ಟಲು ಅಗತ್ಯ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು
ಪಾವಗಡ ತಾಲ್ಲೂಕಿನಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ತಡೆಗಟ್ಟಲು ಅಗತ್ಯ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು   
ಪಾವಗಡ: ರೈತರ ಆತ್ಮಹತ್ಯೆಗಳನ್ನು ನಿಯಂತ್ರಿಸುವ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.
 
ತಾಲ್ಲೂಕಿನಲ್ಲಿ ಕಳೆದ ವಾರ ಇಬ್ಬರು ರೈತರು ಸಾಲದ ಹೊರೆ ಹೆಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ತಾಲ್ಲೂಕಿನಾದ್ಯಂತ ರೈತ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ. ಮಳೆ ಅಭಾವದಿಂದಾಗಿ ಬೆಳೆಗಳು ಹಾಳಾಗುತ್ತಿವೆ. ಇದ್ದಕ್ಕಿದ್ದ ಹಾಗೆ ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಸಾಲ ಸೋಲ ಮಾಡಿ ಕೊಳವೆ ಬಾವಿ ಕೊರೆಸಿದ ರೈತರಿಗೆ ಸಾಲ ತೀರಿಸಲಾಗುತ್ತಿಲ್ಲ. ಬ್ಯಾಂಕಿನವರು ಸಾಲದ ಕಂತು ಪಾವತಿಸುವಂತೆ ರೈತರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಇದರಿಂದ ಸಾಲ ತೀರಿಸಲಾಗದೆ ಮನನೊಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದರು.
 
ಮುಂಗಾರಿನಲ್ಲಿ ಭೂಮಿ ಹಸನು ಮಾಡಲು ಬಂಗಾರವನ್ನು ಅಡವಿಟ್ಟು ಸಾಲ ತಂದಿರುವ ರೈತರಿಗೆ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಕೈಲಾಗದ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ಹೊರತುಪಡಿಸಿ ಲೇವಾದೇವಿಗಾರರಿಂದಲೂ ಸಾಲ ಪಡೆಯಲಾಗಿದ್ದು, ಖಾಸಗಿಯಾಗಿ ಸಾಲ ನೀಡುವವರ ಕಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ದೂರಿದರು.
 
ರೈತರಿಗೆ ಚಿನ್ನವನ್ನು ಅಡ ಇರಿಸಿಕೊಂಡು ನೀಡಿದ ಸಾಲ, ಬೆಳೆ ಸಾಲ ಇತ್ಯಾದಿ ಸಾಲಗಳನ್ನು ಮನ್ನಾ ಮಾಡಬೇಕು. ರೈತರಿಗೆ ಬೆಳೆ ವಿಮೆ, ನಷ್ಟ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ವಿದ್ಯುತ್ ಲೈನ್, ಟವರ್ ಅಳವಡಿಕೆ ಸೇರಿದಂತೆ ರೈತರ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಮುನ್ನ ರೈತರಿಗೆ ಸೂಕ್ತ ಪರಿಹಾರ ವಿತರಿಸಿಬೇಕು ಎಂದು ಒತ್ತಾಯಿಸಿದರು.
 
ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಟಿ.ಕೆ.ತಿಪ್ಪೂರಾವ್ ಅವರಿಗೆ ಮನವಿ ನೀಡಲಾಯಿತು.
ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗಭೂಷಣರೆಡ್ಡಿ, ರೈತ ಮುಖಂಡ ಧರ್ಮಪಾಲ್, ಮಾನಂ ಗೋಪಾಲ್, ಪವನ್, ಹನುಮಂತಪ್ಪ, ಜಿ.ಎನ್.ಶಿವಕುಮಾರ್, ಗೋಪಾಲ್, ಶಿವಾರೆಡ್ಡಿ, ಗೋಪಾಲರೆಡ್ಡಿ, ವೀರಭದ್ರ ಇತರರು ಇದ್ದರು.
 
* ರೈತರ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಗಮನಹರಿಸಬೇಕು. ರಾಜ್ಯ, ಕೇಂದ್ರ ಸರ್ಕಾರಗಳು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
ವಿ.ನಾಗಭೂಷಣರೆಡ್ಡಿ, ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಕಿಸಾನ್ ಸಂಘ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.