ADVERTISEMENT

ಆಹೋರಾತ್ರಿ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 8:53 IST
Last Updated 27 ಜುಲೈ 2017, 8:53 IST

ಗುಬ್ಬಿ: ‘ಗುಬ್ಬಿಯ ಪ್ರಥಮ್ ಗ್ಯಾಸ್ ಏಜೆನ್ಸಿಯವರು ರಾತ್ರಿ ಹೊತ್ತು ಉಜ್ವಲ್ ಯೋಜನೆ ಗ್ಯಾಸ್ ಸಿಲಿಂಡರ್‌ಗಳನ್ನು ಸಾವಿರಾರು ರೂಪಾಯಿಗೆ ಮಾರಾಟ ಮಾಡಿ ಸ್ಥಳೀಯರನ್ನು ಯಾಮಾರಿಸುತ್ತಿದ್ದಾರೆ’ ಎಂದು ದೂರಿ ತಾಲ್ಲೂಕಿನ ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಮಸ್ಥರು ಮಂಗಳವಾರ ರಾತ್ರಿ ಪ್ರತಿಭಟಿಸಿದರು.

ಗ್ಯಾಸ್ ಸಿಲಿಂಡರ್ ಗಳನ್ನು ಹೊತ್ತು ತಂದ ವಾಹನವನ್ನು ನೋಡಿ ಸ್ಥಳೀಯರು ದಂಗಾಗಿದ್ದಾರೆ. ಫಲಾನುಭವಿಗಳನ್ನು ಪತ್ತೆ ಮಾಡಿ ₹ 900 ರಿಂದ ₹ 1200ರ ವರೆಗೆ ಹಣ ಕೇಳುತ್ತಿದ್ದನ್ನು ತಿಳಿದು, ಇಷ್ಟೇಕೆ ಹಣ ಪಡೆಯುತ್ತಿರಿ ಎಂದು ಪ್ರಶ್ನಿಸಿ, ವ್ಯಾನ್ ಅಡ್ಡಗಟ್ಟಿ ಸ್ಥಳೀಯರು ಕೆಂಡಕಾರಿದರು.

‘ಕೇಂದ್ರ ಸರ್ಕಾರ ನಿಯಮದಂತೆ ಪ್ರತಿ ಸಂಪರ್ಕಕ್ಕೆ ₹ 110 ಪಡೆದು ಉಜ್ವಲ ಯೋಜನೆಯನ್ನು ಪ್ರತಿ ಬಡಕುಟುಂಬಕ್ಕೆ ತಲುಪಿಸಬೇಕು. ಆದರೆ ರಾತ್ರಿ ಹೊತ್ತು ಇಲ್ಲಿನ ಕುಟುಂಬಗಳನ್ನು ಯಾಮಾರಿಸುತ್ತಿದ್ದಾರೆ’ ಎಂದು ಗ್ಯಾಸ್ ಸರಬರಾಜುದಾರರ ವಿರುದ್ಧ ಹರಿಹಾಯ್ದರು.

ADVERTISEMENT

ಪ್ರತಿಭಟನೆ ನೇತೃತ್ವ ವಹಿಸಿದ್ದ ತ್ಯಾಗಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ.ಡಿ.ಪರಮೇಶ್ವರ್ ಮಾತನಾಡಿ, ‘ರಾತ್ರಿ ಹೊತ್ತು ಸಿಲಿಂಡರ್ ಸಂಪರ್ಕ ನೀಡಿ, ಹಣ ದೋಚುತ್ತಿದ್ದಾರೆ. ಈ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬಡಕುಟುಂಬಗಳು ಎಲ್ಲಿಂದ ದುಡ್ಡು ತರಬೇಕು’ ಎಂದು ಪ್ರಶ್ನಿಸಿದರು.

ಗ್ರಾಮಸ್ಥರ ಪ್ರತಿಭಟನೆಗೆ ಹೆದರಿದ ಗ್ಯಾಸ್ ಸರಬರಾಜುದಾರರು ಹಣ ಪಡೆಯದು ಗ್ಯಾಸ್ ಸಿಲಿಂಡರ್ ವಿತರಿಸಿ ಹೊರನಡೆದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ವಿಎಸ್‌ಎಸ್‌ಎನ್ ನಿರ್ದೇಶಕ ಚಿದಾನಂದ್, ಆಟೊ ಮಂಜು, ಪಂಚಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.