ADVERTISEMENT

ಈ ವರ್ಷವೂ ಇಲ್ಲ 24X7 ಕುಡಿಯುವ ನೀರು

ಸಿ.ಕೆ.ಮಹೇಂದ್ರ
Published 24 ಮೇ 2017, 6:39 IST
Last Updated 24 ಮೇ 2017, 6:39 IST
ಖಾಲಿಯಾಗಿತ್ತಿರುವ ಬುಗುಡನಹಳ್ಳಿ ಕೆರೆ ನೋಟ
ಖಾಲಿಯಾಗಿತ್ತಿರುವ ಬುಗುಡನಹಳ್ಳಿ ಕೆರೆ ನೋಟ   

ತುಮಕೂರು: ಆರೇಳು ವರ್ಷಗಳಿಂದಲೂ ನಗರದ ಜನರು ಬಹು ನಿರೀಕ್ಷೆಯಿಂದ ಕಾಯುತ್ತಿರುವ 24X 7 (ವಾರದ ಎಲ್ಲ ದಿನಗಳಲ್ಲೂ 24 ಗಂಟೆ ಕಾಲ ಕುಡಿಯುವ ನೀರು ಪೂರೈಕೆ) ಕುಡಿಯುವ ನೀರಿನ ಯೋಜನೆ ಈ ವರ್ಷವೂ ಜಾರಿಗೊಳ್ಳುವುದು ಅನುಮಾನವಾಗಿದೆ.

ಕೇಂದ್ರ ಸರ್ಕಾರದ ಯುಐಡಿಎಸ್‌ಎಂಟಿ (ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ) ಅನುದಾನದಡಿ ಯೋಜನೆ ಜಾರಿಗೊಳ್ಳಬೇಕಾಗಿತ್ತು.
ಎರಡು ವರ್ಷಗಳ ಹಿಂದೆ ಯೋಜನೆಗೆ ಮಂಜೂರಾತಿ ನೀಡುವಾಗಲೇ ಮೊದಲ ಕಂತಾಗಿ  ಕೇಂದ್ರ ಸರ್ಕಾರ ₹79 ಕೋಟಿ ಬಿಡುಗಡೆ ಮಾಡಿತ್ತು. ರಾಜ್ಯ ಸರ್ಕಾರ ಹಾಗೂ ಪಾಲಿಕೆ ತಲಾ ಶೇ 10ರಷ್ಟು ಹಣವನ್ನು ನೀಡಬೇಕಾಗಿತ್ತು.

ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದರೂ ಕೆಲಸ ನಿಧಾನವಾಗಿತ್ತು. ಈಗ ಕೇಂದ್ರ ಸರ್ಕಾರ ಯುಐಡಿಎಸ್‌ಎಂಟಿಯ ಯಾವ ಯೋಜನೆಗೂ ಹಣ ನೀಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿರುವುದು ನಗರದ ಕುಡಿಯುವ ನೀರಿನ ಯೋಜನೆ ಮೇಲೂ ಪರಿಣಾಮ ಬೀರಿದೆ.

ADVERTISEMENT

ಯೋಜನೆಯ ಎರಡನೇ ಹಂತಕ್ಕೆ ಹಣ ನೀಡುವುದಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಹೀಗಾಗಿ ಹಣದ ಕೊರತೆ ಇದೆ. ರಾಜ್ಯ ಸರ್ಕಾರ ಹಣ ನೀಡಿದರೆ ಮಾತ್ರ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಯಂತೆ ₹ 48 ಕೋಟಿ ವೆಚ್ಚದಲ್ಲಿ ಬುಗುಡನಹಳ್ಳಿ ಕೆರೆಯ ಹೂಳೆತ್ತಲು ಸಹ ಟೆಂಡರ್‌ ಕರೆಯಲಾಗಿತ್ತು. ಆದರೆ ಗುತ್ತಿಗೆದಾರರೊಬ್ಬರು ಈ ಬಗ್ಗೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಇದರ ನಡುವೆ, ಹಣ ಇಲ್ಲದ ಕಾರಣ ಕಾಮಗಾರಿ ಮುಂದೂಡುವಂತೆ  ನಗರಾಭಿವೃದ್ಧಿ ಇಲಾಖೆ (ಯುಡಿ) ತಿಳಿಸಿದೆ. ಈ ವರ್ಷ ಕೆರೆ ಹೂಳೆತ್ತುವುದಿಲ್ಲ’ ಎಂದು ಅವರು ಹೇಳಿದರು.

ಕೆರೆಯನ್ನು ಎರಡು ಮೀಟರ್ ಆಳಗೊಳಿಸಲು ನಿರ್ಧರಿಸಲಾಗಿತ್ತು. ಇದರಿಂದಾಗಿ ಕೆರೆಯ ನೀರಿನ ಸಾಮರ್ಥ್ಯ ಈಗಿರುವ 240 ಎಂಸಿಎಫ್‌ಟಿ ಅಡಿಯಿಂದ (ಒಂದು ಎಂಸಿಎಫ್‌ಟಿ ಅಡಿ ಎಂದರೆ 28 ಲಕ್ಷ ಲೀಟರ್‌ ನೀರು)  365 ಎಂಸಿಎಫ್‌ಡಿ ಅಡಿಗೆ ಹೆಚ್ಚಳವಾಗುತ್ತಿತ್ತು.

ಬುಗಡನಹಳ್ಳಿ ಕೆರೆಯ ಜತೆಗೆ ಮರಳೂರುದಿಣ್ಣೆ ಕೆರೆಯನ್ನು ಬಳಕೆ ಮಾಡಿಕೊಳ್ಳುವ ಉದ್ದೇಶವಿದೆ. ಆದರೆ ಇನ್ನೂ ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ. ‘ ಈ ವರ್ಷ ಮಳೆಗಾಲದಲ್ಲಿ ಕೆರೆಯ ಹೂಳೆತ್ತಲು ಬಿಡುವುದಿಲ್ಲ. ಮುಂದಿನ ಬೇಸಿಗೆಯಲ್ಲಿ ಈ ಕೆಲಸ ಮಾಡಬೇಕು. ಇದರಿಂದಾಗಿ ಈ ವರ್ಷ ಯೋಜನೆ ಪೂರ್ಣಗೊಳ್ಳದು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈಗಾಗಲೇ ಕೆಲವು ಕಾಮಗಾರಿಗಳು ನಡೆಯುತ್ತಿವೆ. ಯೋಜನೆಗೆ ಬೇಕಾದ ಉಳಿಕೆ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ’ ಎಂದು ಕರ್ನಾಟಕ ರಾಜ್ಯ ನೀರು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಈರಣ್ಣ ತಿಳಿಸಿದರು.

ಸರ್ಕಾರ ಕೊಡಲಿದೆ
ಮೊದಲ ಹಂತದಲ್ಲಿ ಕೇಂದ್ರ ಸರ್ಕಾರದಿಂದ ₹ 80 ಕೋಟಿ ಹಣ ಬಂದಿದೆ. ಈಗ ಕೇಂದ್ರ ಸರ್ಕಾರ ಉಳಿಕೆ ಹಣ ನೀಡದ ಕಾರಣ ಕಾಮಗಾರಿ ನಿಧಾನಗೊಂಡಿದೆ ಎಂದು ಶಾಸಕ ರಫೀಕ್‌ಅಹಮದ್‌ ಹೇಳಿದರು.

‘ಈ ಮೊದಲು ಪಾಲಿಕೆ ಶೇ 10ರಷ್ಟು ಪಾಲು ನೀಡಬೇಕಾಗಿತ್ತು. ಈಗ ಪಾಲಿಕೆಯ ಪಾಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ. ಉಳಿಕೆ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಮಾತನಾಡಲಾಗಿದೆ. ಜೂನ್ ತಿಂಗಳಲ್ಲಿ ಮುಖ್ಯಮಂತ್ರಿಯವರನ್ನು ನಗರಕ್ಕೆ ಕರೆಸಲಾಗುವುದು. ಆಗ ಯೋಜನೆಗೆ ಅವರು ಶಿಲಾನ್ಯಾಸ ನೆರವೇರಿಸುವರು’ ಎಂದು ತಿಳಿಸಿದರು.

‘ಯೋಜನೆಯ ಯೋಜನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಚಿಂತಿಸಲಾಗಿದೆ. ಬುಗುಡನಹಳ್ಳಿ ಕೆರೆಯ ಹೊಳೆತ್ತುವುದಕ್ಕೆ ಮರು ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆದಿದೆ’ ಎಂದು ವಿವರಿಸಿದರು. ‘ಎಲ್ಲ 35 ವಾರ್ಡ್‌ಗಳಿಗೂ ನೀರು ಕೊಡಲಾಗುವುದು. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.