ADVERTISEMENT

ಉಪ್ಪಾರ ಸಮುದಾಯ ಒಗ್ಗಟ್ಟು ಪ್ರದರ್ಶಿಸಲಿ

ತಿಪಟೂರು: ಭಗೀರಥ ಜಯಂತಿ ಮಹೋತ್ಸವದಲ್ಲಿ ವಿದ್ಯಾಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಮೇ 2017, 4:56 IST
Last Updated 22 ಮೇ 2017, 4:56 IST

ತಿಪಟೂರು: ‘ಭಗೀರತ ಉಪ್ಪಾರ ಸಮಾಜ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಎಲ್ಲ ಕ್ಷೇತ್ರಗಳ ಅವಕಾಶಗಳನ್ನು ಬಳಸಿಕೊಳ್ಳಲು ಸಜ್ಜುಗೊಳಿಸಬೇಕು’ ಎಂದು ಹೊಸದುರ್ಗ ಭಗೀರಥ ವಿದ್ಯಾಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಭಗೀರಥ ಉಪ್ಪಾರ ಸಮಾಜದಿಂದ ಶನಿವಾರ ನಡೆದ ಭಗೀರಥ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.

‘ರಾಜ್ಯ ಸರ್ಕಾರ ಉಪ್ಪಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸುಮಾರು ₹ 100 ಕೋಟಿಗೂ ಹೆಚ್ಚು ಹಣ ನಿಧಿಯಾಗಿ ಇಡಲು ಮುಂದಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಹ ಒಪ್ಪಿರುವುದು ಸಂತೋಷದ ವಿಷಯ. ಇದರ ಸದ್ಬಳಕೆಗೆ ಸಂಘಟನಾ ಶಕ್ತಿಯನ್ನು ವೃದ್ಧಿಸಬೇಕು. ಜ್ಞಾನ ಪಡೆದು ಉನ್ನತ ಸ್ಥಾನದಲ್ಲಿ ಹೆಸರು ಮಾಡಬೇಕು. ಈ ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಉಪ್ಪಾರ ಸಮಾಜ ಒಡಕಿಗೆ ಆಸ್ಪದ ನೀಡದೆ ಒಗ್ಗಟ್ಟಾಗಿ ನಡೆದರೆ ಒಳಿತು’ ಎಂದರು.


‘ಭಗೀರಥ ಮಹರ್ಷಿ ಅಸಾಧ್ಯವಾದ ಕೆಲಸವನ್ನು ಮಾಡಿ ಸಾಧಿಸಿ ತೋರಿಸಿದ್ದಾರೆ. ಸಾಕ್ಷತ್ ದೇವಗಂಗೆಯನ್ನು ಧರೆಗಿಳಿಸಿದ ಅವರ ಪ್ರಯತ್ನ ಫಲ ಪ್ರಪಂಚಕ್ಕೆ ಇಂದು ಕೊಡುಗೆಯಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯು ಒಂದು ಸಮಾಜಕ್ಕೆ ಸೀಮಿತವಾಗಿರದೇ ಎಲ್ಲರೂ ಆಚರಿಸಬೇಕು. ಇದರಲ್ಲಿ ಕಾಟಾಚಾರದ ಆಚರಣೆಗಳು ಸಲ್ಲದು. ಎಲ್ಲ ಕ್ಷೇತ್ರಗಳಿಗೂ ಕೊಡುಗೆಯಾಗಿ ನೀಡಿರುವ ಬಸವಣ್ಣ, ಕನಕ, ವಾಲ್ಮೀಕಿಯಂತಹ ಚಿಂತಕರ ಜಯಂತಿಗಳು ಸಮಾಜಕ್ಕೆ ಶಕ್ತಿ ತುಂಬಬೇಕು’ ಎಂದರು.

ಸಮಾರಂಭದ ಉದ್ಘಾಟಿಸಿ ಮಾತನಾಡಿದ ಸಂಸದ ಮುದ್ದಹನುಮೇಗೌಡ ಮಾತನಾಡಿ, ‘ಸಣ್ಣ ಜಾತಿಗಳಿಗೆ ರಾಜ್ಯ ಸರ್ಕಾರ ನೀಡಿರುವ ವಿಶೇಷ ಸವಲತ್ತುಗಳು ಆರ್ಥಿಕ, ಶೈಕ್ಷಣಿಕ ಉದ್ಧಾರಕ್ಕೆ ಪೂರಕವಾಗಿವೆ. ಎಲ್ಲ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯವನ್ನು ದೊರಕಿಸಲು ಸಮುದಾಯದ ಪೂಜ್ಯರು ಪ್ರಮುಖ ಪಾತ್ರವಹಿಸಿದ್ದಾರೆ. ಸಂಸದರ ಅನುದಾನದಲ್ಲಿ ಅನುಕೂಲವಾಗುವ ಸಹಾಯ ಮಾಡಲಾಗುವುದು. ಸಮಾಜದ ಒಬ್ಬರನ್ನು ರಾಜ್ಯ ಸರ್ಕಾರ ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಿರುವುದು ಪ್ರಮುಖ ನಿರ್ಣಯ’ ಎಂದರು.

‘ಶಾಸಕ ಕೆ. ಷಡಕ್ಷರಿ ಮಾತನಾಡಿ, ಉಪ್ಪು ಕೊಟ್ಟವರನ್ನು ಮುಪ್ಪು ಇರುವವರೆಗೂ ಮರೆಯಬಾರದು ಎಂಬಂತೆ ಈ ಸಮಾಜವನ್ನು ಯಾರೂ ಮರೆಯುವಂತಿಲ್ಲ. ಸರ್ಕಾರದ ಯೋಜನೆಗಳನ್ನು  ಸಮಾಜ ಬಳಸಿಕೊಳ್ಳಬೇಕು’ ಎಂದರು.

ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ, ‘ನಮ್ಮ ಸಮಾಜದಲ್ಲಿ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ಕಾಲೆಳೆಯುವವರು ಹೆಚ್ಚು. ಈ ಸಮಾಜವು ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟಿದ್ದು 4-5 ಜನಕ್ಕಾದರೂ ಟಿಕೆಟ್ ದೊರೆಯಬೇಕು’ ಎಂದರು.

ತಾಲ್ಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಕೆ.ಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ರೇಣುಕಯ್ಯ ಉಪನ್ಯಾಸ ನೀಡಿದರು. ಮಾಜಿ ಶಾಸಕ ಬಿ.ಸಿ.ನಾಗೇಶ್ ಹಾಗೂ ಚಿಕ್ಕನಾಯಕನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಲೇಶ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಗರದ ಕೆಂಪಮ್ಮದೇವಿ ದೇವಸ್ಥಾನದ ಆವರಣದಿಂದ ಭಗೀರಥ ಮಹರ್ಷಿಯ ಸ್ತಬ್ಧ ಚಿತ್ರದ ಜತೆ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಜಾನಪದ ಕಲಾ ತಂಡಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ರಾಜ್ಯ ಉಪ್ಪಾರ ಸಮಾಜದ ಕಾರ್ಯದರ್ಶಿ ವೆಂಕೋಬ, ಸಗರ ಭಗೀರಥ ಸಂಘದ ಅಧ್ಯಕ್ಷ ಎನ್.ಚನ್ನಬಸಪ್ಪ, ಉಪಾಧ್ಯಕ್ಷ ಬಸವರಾಜು, ತಾಲ್ಲೂಕು ಉಪ್ಪಾರ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ರಂಗಸ್ವಾಮಿ, ತಹಶೀಲ್ದಾರ್ ಡಾ.ವಿ.ಮಂಜುನಾಥ್, ಬಿಇಓ ಪ್ರಭುಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಂಕರ್, ಮುನಿಯಪ್ಪ, ಶಂಕರಪ್ಪ, ನಾಗರತ್ನ, ಮಂಜುನಾಥ್, ಶಿವರಾಮಯ್ಯ, ಎಲ್‍ಐಸಿ ಶಂಕರಪ್ಪ, ಕೊಂಡ್ಲೀಘಟ್ಟ ಶಿವಣ್ಣ, ವಕೀಲ ಕೃಷ್ಣಮೂತಿ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT