ADVERTISEMENT

ಎಟಿಎಂ ದರೋಡೆ: ಆರೋಪಿಗಳ ಬಂಧನ

ಗುಬ್ಬಿಗೇಟ್‌ ಸಮೀಪದ ಕರ್ಣಾಟಕ ಬ್ಯಾಂಕ್ ಎಟಿಎಂ ದರೋಡೆ: ತುರುವೇಕೆರೆ ಪೊಲೀಸರಿಗೆ ಸಿಕ್ಕಿ ಬಿದ್ದ ಕಳ್ಳರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:59 IST
Last Updated 18 ಏಪ್ರಿಲ್ 2017, 5:59 IST
ತುಮಕೂರು: ನಗರದ ಗುಬ್ಬಿಗೇಟ್‌ ಸಮೀಪ ಮೂರು ತಿಂಗಳ ಹಿಂದೆ ಕರ್ಣಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ₹19 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.
 
ದಾಬಸ್‌ಪೇಟೆ ಬಳಿಯ ಚಿಕ್ಕಬಿದರೆಕಲ್ಲು ವಾಸಿ ಪ್ರಭು, ಚನ್ನರಾಯಪಟ್ಟಣ ತಾಲ್ಲೂಕಿನ ಕಿರಿಸಾವೆ ವಾಸಿ ಮೋಹನ್‌, ಅರಕಲುಗೂಡು ತಾಲ್ಲೂಕಿನ ಬನವಾಸೆಯ ಸ್ವಾಮಿ, ಬೆಂಗಳೂರಿನ ಪೀಣ್ಯದ ಪುನೀತ, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ನಿವಾಸಿ ರಘು ಬಂಧಿತರು.
 
ತುರುವೇಕೆರೆ ಹೊರವಲಯದ ಮೈಸೂರು ರಸ್ತೆಯಲ್ಲಿ ಅರಳೀಕೆರೆ ಶಿವಣ್ಣ ಅವರ ತೋಟದ ಬಳಿ ಸೋಮವಾರ ಮುಂಜಾನೆ 3.50ರಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
 
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಗುಬ್ಬಿ ಗೇಟ್‌ ಎಟಿಎಂ ದರೋಡೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಾರು, ಕಬ್ಬಿಣ ತುಂಡರಿಸುವ ಕಟರ್‌, ಲಾಂಗು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 
ಜ. 24 ರಂದು ಇಂಡಿಕಾ ಕಾರಿನಲ್ಲಿ ಬಂದಿದ್ದ ಆರೋಪಿಗಳು ಎಟಿಎಂ ಸಿಸಿ ಟಿವಿ ಕ್ಯಾಮೆರಾ ನಾಶಪಡಿಸಿ, ನಗದು ದೋಚಿ ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗೆ ರಚಿಸಿದ್ದ ನಾಲ್ಕು ತನಿಖಾ ತಂಡಗಳು ಕಳೆದ ಮೂರು ತಿಂಗಳಿಂದ ರಾಜ್ಯದ ವಿವಿಧೆಡೆ ಹುಡುಕಾಟ ನಡೆಸಿದ್ದವು. 
 
ಹನುಮಂತಪುರದಲ್ಲೂ ದರೋಡೆ ಯತ್ನ: ‘ಗುಬ್ಬಿ ಗೇಟ್‌ ಎಟಿಎಂ ದರೋಡೆಗೂ ಮುನ್ನ ಹನುಮಂತಪುರದ ಎಟಿಎಂ ಕೇಂದ್ರದ ದರೋಡೆಗೆ ಯತ್ನಿಸಿದ್ದರು. ಆದರೆ, ಕೆಲವರು ಕೂಗಿಕೊಂಡಾಗ ಅಲ್ಲಿಂದ ಕಾಲ್ಕಿತ್ತ ಆರೋಪಿಗಳು, ಗುಬ್ಬಿ ಗೇಟ್‌  ಎಟಿಎಂ ಕೇಂದ್ರದ ದರೋಡೆ ನಡೆಸಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ಮೂಲಗಳು ತಿಳಿಸಿವೆ.
 
ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ
ಮಧುಗಿರಿ:  ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ನಾಲ್ಕನೇ ಅಧಿಕ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಸೋಮವಾರ ಆದೇಶ ನೀಡಿದೆ. 
 
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದ ರಾಮಲಿಂಗಯ್ಯ ಎಂಬಾತ ಪತ್ನಿ ಭಾಗ್ಯಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಸಹೋದರಿ ಲಕ್ಷ್ಮಿದೇವಿ ನೆರವಿನೊಂದಿಗೆ ಶವವನ್ನು ಚರಂಡಿಯಲ್ಲಿ ಹೂತು ಹಾಕಿದ್ದ. ಕೊಡಿಗೇನಹಳ್ಳಿ ಪೊಲೀಸರು ಆರೋಪಿಗಳಾದ ರಾಮಲಿಂಗಯ್ಯ ಮತ್ತು ಲಕ್ಷ್ಮಿದೇವಿ ವಿರುದ್ಧ ಪ್ರಕರಣ ದಾಖಲಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 
 
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಬಿ.ಎನ್.ಲಾವಣ್ಯಲತಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ಮತ್ತು ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಆರೋಪದ ಮೇಲೆ ಲಕ್ಷ್ಮಿದೇವಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಜಿ.ಟಿ.ರಂಗಪ್ಪ ವಾದ ಮಂಡಿಸಿದ್ದರು.  
 
ಕಾರ್ಮಿಕ ಸಾವು
ಮಧುಗಿರಿ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮರಿತಿಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗೋವಿಂದರಾಜು(38) ಮೃತಪಟ್ಟಿದ್ದಾರೆ.  ಇವರು ಪುರವರ ಹೋಬಳಿಯ ಲಕ್ಷ್ಮಯ್ಯನ ಪಾಳ್ಯದ ನಿವಾಸಿ.

ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಲೈನ್ ಹಾಕುತ್ತಿದ್ದಾಗ ವಿದ್ಯುತ್ ಪ್ರಸರಣವಾಗಿದೆ. ಕಾಮಗಾರಿಗೆ ಲೈನ್ ಕ್ಲಿಯರ್ ಪಡೆದುಕೊಂಡಿದ್ದರೂ ವಿದ್ಯುತ್ ಪ್ರಸರಣವಾಗಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕನ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
***
ಕುಣಿಗಲ್: ಐವರು ದರೋಡೆಕೋರರ ಬಂಧನ
ಕುಣಿಗಲ್: ತಾಲ್ಲೂಕಿನ ಅಮೃತೂರು ಪೊಲೀಸರು ಐದು ಮಂದಿ ಹೆದ್ದಾರಿ ದರೋಡೆಕೋರರನ್ನು ಬಂಧಿಸಿ, ಎರಡು ಕಾರು ಹಾಗೂ ₹ 10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗಮಂಗಲ ತಾಲ್ಲೂಕಿನ ಗೊಲ್ಲರಹಟ್ಟಿಯ ಸುರೇಶ್ ಚಂದ್ರ, ಬೆಂಗಳೂರು ಶ್ರೀರಾಮಪುರದ ಮುರುಗೇಶ್, ಮಂಡ್ಯ ಜಿಲ್ಲೆ ಹರಿಹರಪುರದ ಪ್ರದೀಪ, ಹಾಸನ ಜಿಲ್ಲೆಯ ಕಾಟೀಹಳ್ಳಿ ಗ್ರಾಮದ ಚೇತನ್‌ ಮತ್ತು ಸಚಿನ್ ಬಂಧಿತರು.

ಮಾರ್ಚ್‌ 21ರಂದು ಬೆಂಗಳೂರಿನಿಂದ ಹಾಸನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವಿಜಯ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಪೆಂಟ ಬೋಯಿನಾ ಸತ್ಯನಾರಾಯಣ ಅವರನ್ನು ಅಗ್ರಹಾರ ಗೇಟ್ ಬಳಿ ಅಡ್ಡಹಾಕಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಅವರ ಬಳಿಯಿಂದ ಕಾರು, ನಗದು, ಎಟಿಎಂ ಕಾರ್ಡ್‌ಗಳನ್ನು ದೋಚಿ, ಮಾರ್ಕೋನಹಳ್ಳಿ ನಿರ್ಜನ ಪ್ರದೇಶದಲ್ಲಿ ತಳ್ಳಿ ಪರಾರಿಯಾಗಿದ್ದರು.

ಸಿಪಿಐ ಬಾಳೇಗೌಡ, ಪಿಎಸ್‌ಐ ಧರ್ಮೇಗೌಡ, ಸಿಬ್ಬಂದಿಗಳಾದ ಪುಟ್ಟರಾಮು, ರವಿ, ನಟರಾಜು, ನವೀನ, ಹೇಮಂತ್, ರವಿಕುಮಾರ್, ನರಸಿಂಹಮೂರ್ತಿ, ನರಸಿಂಹರಾಜು ಹಾಗೂ ರಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
***
ರೈತ ಆತ್ಮಹತ್ಯೆ
ಪಾವಗಡ:
ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಸಾಲಬಾಧೆಯಿಂದ ರೈತ ರಾಮಕೃಷ್ಣರೆಡ್ಡಿ(49) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1.20 ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದರು. ಈಚೆಗೆ ಕೊಳವೆ ಬಾವಿಯಲ್ಲಿ ನೀರು ಬತ್ತಿತ್ತು. ₹5 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ದೂರಿನಲ್ಲಿ ತಿಳಿಸಿದ್ದಾರೆ.  ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.