ADVERTISEMENT

ಏಪ್ರಿಲ್ 27ರಂದು ಉದ್ಯೋಗ ಮೇಳ

ತುಮಕೂರು ವಿ.ವಿ ಕೌಶಲ ಅಭಿವೃದ್ಧಿ ಕೇಂದ್ರದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:48 IST
Last Updated 14 ಏಪ್ರಿಲ್ 2017, 4:48 IST

ತುಮಕೂರು: ‘ತುಮಕೂರು ವಿಶ್ವವಿದ್ಯಾನಿಲಯದ ಕೌಶಲ ಅಭಿವೃದ್ಧಿ ಕೇಂದ್ರವು ಏಪ್ರಿಲ್ 27ರಂದು ವಿ.ವಿಯ ಡಾ.ಪಿ. ಸದಾನಂದಮಯ್ಯ ಕಟ್ಟಡದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ’ ಎಂದು ಕೇಂದ್ರದ ಸಂಯೋಜಕಿ ಡಾ.ನೂರ್ ಅಫ್ಜಾ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ಫೊಸಿಸ್‌ ಬಿಪಿಒ, ಐಸಿಐಸಿಐ ಫ್ರುಡೆನ್ಯಿಯಲ್, ಎಸ್‌ಬಿಐ ಲೈಫ್, ಸ್ಟಾರ್ ಹೆಲ್ತ್ ಇನ್‌ಶ್ಯೂರೆನ್ಸ್, ಎಕ್ಸಿಸ್ ಬ್ಯಾಂಕ್, ಕೊಟಕ್ ಮಹೇಂದ್ರ ಸೇರಿ 50ಕ್ಕೂ ಹೆಚ್ಚು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ’ ಎಂದು ಹೇಳಿದರು.

‘ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಮಾತ್ರವಲ್ಲದೇ ಅಂತಿಮ ಪದವಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಯಾವುದೇ ರೀತಿಯ ನೋಂದಣಿ ಶುಲ್ಕ ಇಲ್ಲ’ ಎಂದು ಮಾಹಿತಿ ನೀಡಿದರು.

‘ಕಳೆದ ವರ್ಷ ಆಯೋಜಿಸಿದ್ದ ಮೇಳದಲ್ಲಿ 35 ಕಂಪೆನಿಗಳು  ಭಾಗವಹಿಸಿದ್ದವು. 248 ಮಂದಿಗೆ ಉದ್ಯೋಗ ಸಿಕ್ಕಿತ್ತು. ಕೆಲಸ ಪಡೆದವರಲ್ಲಿ  ಶೇ 60ರಷ್ಟು ಮಹಿಳೆಯರಿದ್ದರು. ಈ ಮೇಳದಲ್ಲಿ ಕನಿಷ್ಠ 2000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಜಿಲ್ಲೆಯ ಪದವಿ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ. ಇತರ ಜಿಲ್ಲೆಯ ಅಭ್ಯರ್ಥಿಗಳೂ ಭಾಗವಹಿಸಲು  ಅವಕಾಶವಿದೆ’ ಎಂದರು.

‘ಮೇಳಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವವಿವರ, ಯಾವುದಾದರೂ ಒಂದು ಗುರುತಿನ ಪತ್ರ ತರಬೇಕು. ಪದವಿ ಅಂಕಪಟ್ಟಿ ತರಬೇಕಾಗಿಲ್ಲ.  ಆಯ್ಕೆಯಾದ ಬಳಿಕ ಅಂಕಪಟ್ಟಿ ಹಾಗೂ ಇತರ ದಾಖಲಾತಿಗಳನ್ನು  ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

‘ಗರಿಷ್ಠ ಮುಖ ಬೆಲೆಯ ನೋಟು ರದ್ದತಿಯಿಂದ ರಿಯಲ್‌ಎಸ್ಟೇಟ್‌ ಉದ್ಯಮದಲ್ಲಿ  ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ.  ಹೀಗಾಗಿ ಈ  ಕಂಪೆನಿಗಳು ಭಾಗವಹಿಸುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿ.ವಿ ವೆಬ್‌ಸೈಟ್‌ನಲ್ಲಿ ಅರ್ಜಿ ಲಭ್ಯ
‘ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಿಂದ ನೋಂದಣಿ ಅರ್ಜಿ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ – 9449089075 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT