ADVERTISEMENT

ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ ಧರಣಿ

ಮೈದಾಳ ಕೆರೆಗೆ ನೀರು ಹರಿಸುವ ಕಾಮಗಾರಿ: ಶಾಸಕ ರಫೀಕ್‌ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:48 IST
Last Updated 9 ಜನವರಿ 2017, 9:48 IST

ತುಮಕೂರು: ‘ತುಮಕೂರು ಮಹಾನಗರಕ್ಕೆ ಹೇಮಾವತಿ ಜಲಾಶಯದಿಂದ ನಿಗದಿಯಾಗಿರುವ ಪ್ರಮಾಣದಷ್ಟು ನೀರನ್ನು ಸಂಗ್ರಹ ಮಾಡಿಕೊಳ್ಳುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ. ಈಗ ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ನೀರು ಹರಿಸುವುದಿಲ್ಲ ಎಂದು ಶಾಸಕ ಡಾ.ರಫೀಕ್ ಅಹಮ್ಮದ್ ಹೇಳಿರುವುದು ಸರಿಯಲ್ಲ’ ಎಂದು ಬಿಜೆಪಿ ಮುಖಂಡ ಶಿವಣ್ಣ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಮಳೆ ಕಡಿಮೆಯಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬುಗುಡನಹಳ್ಳಿ, ಹೆಬ್ಬಾಕ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹ ಮಾಡಿಟ್ಟುಕೊಳ್ಳಬೇಕಿತ್ತು. ಅದನ್ನು ಶಾಸಕರು ಮಾಡಿಲ್ಲ’ ಎಂದು ಆರೋಪಿಸಿದರು.

‘ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ 15 ಎಂಎಲ್‌ಡಿ ನೀರು ಪೈಪ್‌ ಮೂಲಕ ಪೂರೈಸಿ ಸಂಗ್ರಹ ಮಾಡುವ ಯೋಜನೆಯನ್ನು ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಸರ್ಕಾರ ಬದಲಾಯಿತು. ನಂತರ ಯಾವುದೇ ರೀತಿ ಕಾಮಗಾರಿ ಪ್ರಗತಿಯಾಗಿಲ್ಲ. ಆದರೆ, ಈಗ ಶಾಸಕ ಡಾ.ರಫೀಕ್ ಅಹಮ್ಮದ್ ಅವರು ಮೈದಾಳ ಕೆರೆಗೆ ನೀರು ಹರಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ’ ಎಂದು ಹೇಳಿದರು.

‘ಮೈದಾಳ ಕೆರೆಗೆ ಮಾತ್ರವಲ್ಲ. ದಾಬಸ್ ಪೇಟೆಗೂ ನೀರು ಕೊಡಬೇಕಾಗುತ್ತದೆ. ಕುಡಿಯುವ ನೀರು ಪಡೆಯುವ ಹಕ್ಕು ಎಲ್ಲರಿಗೂ ಇದೆ. ಅಭಿವೃದ್ಧಿ ಯೋಜನೆಗಳಿಗೂ ಅಡ್ಡಿಪಡಿಸುವಂತಿಲ್ಲ. ಈ ಸಂಗತಿ ಶಾಸಕರಿಗೆ ಗೊತ್ತಿದ್ದರೂ ನೀರು ಕೊಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಬುಗುಡನಹಳ್ಳಿ ಕೆರೆಯಿಂದ ಮೈದಾಳ ಕೆರೆಗೆ ಪೈಪ್‌ ಮೂಲಕ ನೀರು ಹರಿಸುವ ಕಾಮಗಾರಿ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದೇ ಇದ್ದರೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಎದುರ ಉಪವಾಸ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮಧ್ಯವರ್ತಿಗಳಾದ ಪೊಲೀಸರು: ‘ಪುಂಡರು, ಪುಡಾರಿಗಳು ಮತ್ತು ದುಷ್ಕರ್ಮಿಗಳನ್ನು  ಪೊಲೀಸರು ಮಟ್ಟಹಾಕಬೇಕು. ವಸೂಲಿ ಮಾಡುವುದನ್ನು ಬಿಡಬೇಕು. ಅಂದಾಗ ಮಹಿಳೆ, ಸಮಾಜದ ರಕ್ಷಣೆ ಸಾಧ್ಯವಾಗುತ್ತದೆ’ ಎಂದರು.

‘ಸರ್ಕಾರ ವಸೂಲಿಗೆ ಪೊಲೀಸರನ್ನು ಮಧ್ಯವರ್ತಿಗಳನ್ನಾಗಿ ಬಳಸಿಕೊಳ್ಳುತ್ತಿರುವುದೇ ವ್ಯವಸ್ಥೆ ಹದಗೆಡಲು ಕಾರಣವಾಗಿದೆ’ ಎಂದು ಟೀಕಿಸಿದರು.
ಪಕ್ಷದ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.