ADVERTISEMENT

ಕರ್ನಾಟಕ ಸಮಗ್ರ ಕೊಳೆಗೇರಿ ಅಭಿವೃದ್ಧಿ ಕಾಯ್ದೆಗೆ ಆಗ್ರಹ

ಜಿಲ್ಲಾ ಕೊಳೆಗೇರಿ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 8:36 IST
Last Updated 17 ಮಾರ್ಚ್ 2018, 8:36 IST

ತುಮಕೂರು: ಕರ್ನಾಟಕ ಸಮಗ್ರ ಕೊಳೆಗೇರಿ ಅಭಿವೃದ್ಧಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೊಳೆಗೇರಿ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸ್ಲಂ ಜನಾಂದೋಲನದ ರಾಜ್ಯ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ‘ನಗರ ವಸತಿ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸಿ ವಸತಿ ನಿರ್ಮಾಣಕ್ಕಾಗಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆಗಳಲ್ಲಿ ಭೂಮಿ ಮೀಸಲಿಡುವ ಲ್ಯಾಂಡ್ ಬ್ಯಾಂಕ್‌ನ್ನು ಜಾರಿಗೊಳಿಸಿರುವ ರಾಜ್ಯಸರ್ಕಾರದ ಕಾರ್ಯ ಶ್ಲಾಘನೀಯ. ಆದರೆ, ಸ್ಲಂ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸಮಗ್ರ ಕೊಳೆಗೇರಿ ಅಭಿವೃದ್ಧಿ ಕಾಯ್ದೆಯ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಕೊಳೆಗೇರಿ ಜನರಿಗೆ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಭಿವೃದ್ಧಿಯಲ್ಲಿ ಖಾತ್ರಿಗೊಳಿಸಬೇಕಾದ ಬಹುಮುಖ್ಯವಾದ ಅಂಶಗಳು ಕಾಯ್ದೆ ರೂಪದಲ್ಲಿ ಸಲ್ಲಿಕೆಯಾಗಿದೆ. ಹೀಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಬೇಕು’ ಎಂದು ಹೇಳಿದರು.

ADVERTISEMENT

‘1973ರ ಮೂಲ ಕಾಯ್ದೆಯನ್ನು ಹಾಗೆ ಉಳಿಸಿಕೊಂಡು ಪ್ರಸ್ತುತ ರಾಷ್ಟ್ರೀಯ ಕಾನೂನು ಶಾಲೆಯ ‘ಇನ್ಸ್‌ಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ’ ವಿಭಾಗ ರಚಿಸಿರುವ ‘ಕರ್ನಾಟಕ ಸ್ಲಂ ಅಭಿವೃದ್ಧಿ ಕಾಯ್ದೆ’ಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸುಗ್ರೀವಾಜ್ಞೆ ಮೂಲಕ ಜಾರಿಗೊಳ್ಳಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಮಾದಿಗ ದಂಡೋರದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್, ಕೊಳೆಗೇರಿ ಸಮಿತಿಯ ದೀಪಿಕಾ, ಶೆಟ್ಟಾಳಯ್ಯ, ಅರುಣ್, ರಘು, ಕಣ್ಣನ್, ಅಟೇಕರ್.ಸಿದ್ದಪ್ಪ, ಚಕ್ರಪಾಣಿ, ಗೋವಿಂದಮ್ಮ, ಕಾಶಿರಾಜ್, ಚೆಲುವರಾಜ್, ಕೃಷ್ಣ, ಮುರುಗ, ಸುಬ್ಬು, ರಜಿಯಾಭಿ, ಶಂಕರಪ್ಪ ಹಯಾತ್, ಗುನ್ನಾಜ್, ಗಂಗಮ್ಮ, ಹೇಮ, ಜಬೀರ್, ಲತಾ, ಗಾಯಿತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.