ADVERTISEMENT

ಕಲ್ಪತರು ನಾಡಿನ ನುಡಿ ಹಬ್ಬಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2017, 10:53 IST
Last Updated 23 ಜೂನ್ 2017, 10:53 IST
ಸಮ್ಮೇಳನದ ಸಿದ್ಧತೆಯನ್ನು ಕಸಾಪ ಅಧ್ಯಕ್ಷ ಬಾಲಕೃಷ್ಣ ಗುರುವಾರ ಸಂಜೆ ಪರಿಶೀಲಿಸಿದರು
ಸಮ್ಮೇಳನದ ಸಿದ್ಧತೆಯನ್ನು ಕಸಾಪ ಅಧ್ಯಕ್ಷ ಬಾಲಕೃಷ್ಣ ಗುರುವಾರ ಸಂಜೆ ಪರಿಶೀಲಿಸಿದರು   

ತಿಪಟೂರು: ಕಲ್ಪತರು ನಾಡಿನಲ್ಲಿ ನಡೆಯುತ್ತಿರುವ ನಾಲ್ಕನೇ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಗುರುವಾರ ಸಂಜೆ ವೇಳೆಗೆ ಬಹುತೇಕ ಪೂರ್ಣಗೊಂಡಿದ್ದವು. ಸೀಮಾರಾಮಯ್ಯ ಸಮುದಾಯ ಭವನದಲ್ಲಿ ನಡೆಯುವ ಸಮ್ಮೇಳನಕ್ಕೆ ಆಕರ್ಷಕ ವೇದಿಕೆ ಸಿದ್ಧಪಡಿಸಲಾಗಿದೆ. ಚಿತ್ರಕಲಾ ಪ್ರದರ್ಶನಕ್ಕೆ ಪಕ್ಕದ ಶಿಕ್ಷಕರ ಭವನ ಸಜ್ಜುಗೊಳಿಸಲಾಗಿದೆ. ಊರಿನ ಸೌಂದರ್ಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ.

ಮಹಾದ್ವಾರಕ್ಕೆ ಈ ಕ್ಷೇತ್ರದ ಮೊದಲ ಶಾಸಕ ಟಿ.ಜಿ.ತಿಮ್ಮೇಗೌಡ ಅವರ ಹೆಸರಿಡಲಾಗಿದೆ. ಚಿತ್ರಕಲಾ ಪ್ರದರ್ಶನ ಮಳಿಗೆಗೆ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಕವಿ ದಿ.ಎಲ್.ಮಹಲಿಂಗಪ್ಪ ಅವರು ಹೆಸರಿಡಲಾಗಿದೆ. ಪ್ರಧಾನ ವೇದಿಕೆಗೆ ನಗೆ ಜಂಗಮ ದಿ. ಗೌಡನಕಟ್ಟೆ ತಿಮ್ಮಯ್ಯ ಅವರ ಹೆಸರಿಡಲಾಗಿದೆ.

ಸುಮಾರು 2500 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನ ಶಿಕ್ಷಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಸ್ಪದವಾಗುವಂತೆ ಒಒಡಿ ಸೌಲಭ್ಯ ನೀಡಲಾಗಿದೆ. ಗುರುವಾರ ಸಂಜೆ ಕಸಾಪ ಅಧ್ಯಕ್ಷ ಬಾಲಕೃಷ್ಣ ವಿವಿಧ ಸಮಿತಿಗಳ ಸಭೆ ನಡೆಸಿ ಸಿದ್ಧತೆ ಪರಿಶೀಲಿಸಿಕೊಂಡು ಸಲಹೆ, ಸೂಚನೆ ನೀಡಿದ್ದಾರೆ.

ADVERTISEMENT

ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 8.30ಕ್ಕೆ ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದಿಂದ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳನದ ವೇದಿಕೆವರೆಗೂ ಮೆರವಣಿಗೆ ಸಾಗಿ ಬರಲಿದೆ. 10.30ಕ್ಕೆ ಗುರುಕುಲ ಮಠದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಹಾಗೂ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸುವರು. ತಾಲ್ಲೂಕು ಅಧ್ಯಕ್ಷ ಕೆ.ಬಾಲಕೃಷ್ಣ, ಮುಖಂಡ  ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡರಾದ ಬಿ.ನಂಜಾಮರಿ, ಲೋಕೇಶ್ವರ ಹಾಗೂ ಕೆ.ಟಿ.ಶಾಂತಕುಮಾರ್ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12ರಿಂದ ಮೊದಲನೇ ವಿಚಾರಗೋಷ್ಠಿ ನಡೆಯಲಿದ್ದು, ಸಾಹಿತಿ ಡಾ. ಅಬ್ದುಲ್ ಹಮೀದ್ ತಿಪಟೂರು ತಾಲ್ಲೂಕಿನ ಸಾಹಿತ್ಯ ಹಾಗೂ ಆಲೂರು ದೊಡ್ಡನಿಂಗಪ್ಪ ತಾಲ್ಲೂಕಿನ ಸಾಂಸ್ಕೃತಿಕ ವೈಶಿಷ್ಟ್ಯದ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.

ಎರಡನೇ ವಿಚಾರಗೋಷ್ಠಿ ಮಧ್ಯಾಹ್ನ 2.30ಕ್ಕೆ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪತ್ರಕರ್ತ ರಾಜಣ್ಣ, ತಾಲ್ಲೂಕು ಅಭಿವೃದ್ಧಿಯಲ್ಲಿ ಕೃಷಿ ಕೈಗಾರಿಕೆ ಹಾಗೂ ಈಚನೂರು ಇಸ್ಮಾಯಿಲ್ ಕನ್ನಡ ಭಾಷೆ ಸವಾಲುಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.

ಕವಿಯತ್ರಿ ಶಾಂತ ಕಂಪಾರಹಳ್ಳಿ ಅಧ್ಯಕ್ಷತೆಯಲ್ಲಿ ಸಂಜೆ 4ಕ್ಕೆ ಕವಿಗೋಷ್ಠಿ ನಡೆಯಲಿದೆ. ಕೆ.ಬಿ.ಸರಸ್ವತಿ ಆಶಯ ಭಾಷಣ ಮಾಡುವರು. ಹಲವು ಕವಿಗಳು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರನ್ನು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.

ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ತಾಲ್ಲೂಕಿನ ಹಲವಾರು ಗಣ್ಯರನ್ನು ಸನ್ಮಾನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.