ADVERTISEMENT

ಕಲ್ಯಾಣೋತ್ಸವಕ್ಕೆ ಹಣ ವಸೂಲಿ ಮಾಡಿಲ್ಲ

ಮಾಜಿ ಶಾಸಕ ಮಾಧುಸ್ವಾಮಿ ಆರೋಪಕ್ಕೆ ಶಾಸಕ -ಸಿ.ಬಿ.ಸುರೇಶ್‌ಬಾಬು ತಿರುಗೇಟು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 4:46 IST
Last Updated 15 ಏಪ್ರಿಲ್ 2017, 4:46 IST

ಚಿಕ್ಕನಾಯಕನಹಳ್ಳಿ: ‘ಪಟ್ಟಣದಲ್ಲಿ ನಡೆಸಿದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದೇನೆ ಎಂಬ ಆರೋಪವನ್ನು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಾರ್ವಜನಿಕವಾಗಿ ಮುಖಾಮುಖಿಯಾಗಲು ಸಿದ್ಧ. ಅಖಾಡಕ್ಕೆ ಬನ್ನಿ. ನಿಮ್ಮ ಉಳುಕನ್ನು ನಾನು ತೆಗೆಯುತ್ತೇನೆ’  ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಸವಾಲು ಹಾಕಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಣ ವಸೂಲಿ ಆರೋಪದಲ್ಲಿ  ಯಾವುದೇ ಹುರುಳಿಲ್ಲ. ನನ್ನಂತೆ ಅವರು ಸಹ  3 ಬಾರಿ  ಶಾಸಕರಾಗಿದ್ದವರು. ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ಬಹಿರಂಗವಾಗಲಿ’ ಎಂದರು.

‘ಸದನದಲ್ಲಿ ನೈಸ್ ರಸ್ತೆ ಬಗ್ಗೆ ಮಾತನಾಡಿ ನೀವು ಅಭಿವೃದ್ಧಿಯಾದಿರಿ ಹೊರತು ನಮ್ಮ ತಾಲ್ಲೂಕು ಅಭಿವೃದ್ಧಿ ಆಗಲಿಲ್ಲ. ನಿಮ್ಮ ಸದನ ಶೂರತ್ವ  ನಿಮ್ಮನ್ನು ಅಭಿವೃದ್ಧಿಗೊಳಿಸಿತೇ ಹೊರತು ತಾಲ್ಲೂಕನ್ನು ಅಲ್ಲ’ ಎಂದು ಗೇಲಿ ಮಾಡಿದರು.

‘ತಾಲ್ಲೂಕಿಗೆ ಹೇಮಾವತಿ ನೀರು ಹರಿಯುತ್ತದೆ ಎಂದಾಗ ಹೇಮಾವತಿ ನೀರನ್ನು ತಂಬಿಗೆಯಲಿ ತರಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದರು.  ನೀರು ತರಲು ಮಾಜಿ ಶಾಸಕ ಕಿರಣ್‌ಕುಮಾರ್‌, ಮಾಜಿ ಸಂಸದ ಜಿ.ಎಸ್.ಬಸವರಾಜು ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಿದರು’ ಎಂದು ಹೇಳಿದರು.

‘ಹೇಮಾವತಿ ನಾಲೆಗೆ ಭೂಮಿ ಕೊಟ್ಟವರಿಗೆ ಅದಾಲತ್ ನಲ್ಲಿ ಹಣ ಕೊಡಿಸಲು ಹೋದಾಗ ಅವರ ಹಿಂಬಾಲಕರನ್ನು ಬಿಟ್ಟು ತಡೆ ಹಾಕಿಸಿದರು. ಚುನಾವಣಾ ನೀತಿ ಸಂಹಿತೆ ಎಂದು ಹೇಳಿ ಪರಿಹಾರದ ಹಣ ವಿತರಿಸದಂತೆ  ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿದರು. ಈಗ ಪರಿಹಾರದ ಹಣದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಚುನಾವಣೆ ಹತ್ತಿರ ಬರುತ್ತಿರುವುದರಿಂದ ಆರೋಗ್ಯ ಶಿಬಿರ ನಡೆಸುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಷ್ಟು ದಿನ ಅವರಿಗೆ ಪಟ್ಟಣದ ಸಮೀಪವಿರುವ ನಿರ್ವಾಣಸ್ವಾಮಿ ದೇವಸ್ಥಾನ ಎಲ್ಲಿದೆ ಎನ್ನುವುದೇ ತಿಳಿದಿರಲಿಲ್ಲ’ ಎಂದು ಛೇಡಿಸಿದರು.

‘ದೇವಸ್ಥಾನಕ್ಕೆ ದೇವಾಲಯ ಕಟ್ಟಿಸಬೇಕು ಎಂದು ಭಕ್ತರು ಕೇಳಿದರೆ ದೇವರಿಗೇನು ಸೊಳ್ಳೆ ಕಚ್ಚುತ್ತದೆಯೇ ಎಂದು ಮಾಧುಸ್ವಾಮಿ ಪ್ರಶ್ನಿಸುತ್ತಿದ್ದರು.  ದೇವಸ್ಥಾನಕ್ಕೆ ಒಂದು ಬೋರ್‌ವೆಲ್ ಬೇಕು ಎಂದರೆ ದೇವರೇನು ನೀರು ಕುಡಿಯುತ್ತಾನೆಯೇ? ಎಂದು ಪ್ರಶ್ನಿಸುತ್ತಿದ್ದರು. ಇಂಥವರು ಅವರೂರಿನಲ್ಲಿ ಏಕೆ ದೇವಸ್ಥಾನ ಕಟ್ಟಿಸಿದ್ದಾರೆ’ ಎಂದು ಪ್ರಶ್ನಿಸಿದರು.

‘ಕಾರ್ಯಕರ್ತರ ದುಡ್ಡಿನಲ್ಲಿ ರಾಜಕೀಯ ಮಾಡುವವನು ನಾನಲ್ಲ. ನಿಮ್ಮಿಂದಾಗಿ ನಿಮ್ಮ ಎಷ್ಟು ಕಾರ್ಯಕರ್ತರು ಬೀದಿಗೆ ಬಿದ್ದಿದ್ದಾರೆ ಎಂಬನುದು ಜನರಿಗೆ ಗೊತ್ತಿದೆ. ನಿಮ್ಮ ದ್ವೇಷ, ಕುತಂತ್ರ ಹಾಗೂ ವಾಮಮಾರ್ಗದ ರಾಜಕಾರಣ ನನ್ನದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.