ADVERTISEMENT

ಕಾಡಿಗೆ ಬೆಂಕಿ: ಅರಣ್ಯ ಇಲಾಖೆಗೆ ಸವಾಲು

ಸ್ಥಳೀಯ ನಿವಾಸಿಗಳ ಹಾಗೂ ಜಾನುವಾರುಗಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹುಲ್ಲೆಲ್ಲಾ ಬೆಟ್ಟ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 10:40 IST
Last Updated 15 ಫೆಬ್ರುವರಿ 2017, 10:40 IST
ಹುಲ್ಲಾಲೆ ಬೆಟ್ಟದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಕಾಡ್ಗಿಚ್ಚು
ಹುಲ್ಲಾಲೆ ಬೆಟ್ಟದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಕಾಡ್ಗಿಚ್ಚು   

ಹುಲಿಯೂರುದುರ್ಗ: ಹೋಬಳಿ ವ್ಯಾಪ್ತಿಯಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿಯೇ ಇದೆ. ಸಾಲು ಸಾಲು ಬೆಟ್ಟಗಳು ಇಲ್ಲಿನ ಪ್ರಮುಖ ಆಕರ್ಷಣೆ ಆದರೆ ಬೇಸಿಗೆ ಹತ್ತಿರ ಬರುತ್ತಿರುವಂತೆ ಈ ಬೆಟ್ಟದಲ್ಲಿರುವ ಗಿಡ– ಮರಗಳನ್ನು ಹೇಗೆ ಕಾಪಾಡುವುದು ಎನ್ನುವ ಚಿಂತೆ ಅರಣ್ಯ ಇಲಾಖೆಯಲ್ಲಿ ಮೂಡಿದೆ.

ಹಂದಲಕುಪ್ಪೆ ಹೆಂಬೆಟ್ಟ, ಕೊರಟಿಗುಡ್ಡದ ಗೋಮಾಳ, ಕೊಡವತ್ತಿ-ಕಂಪಲಾಪುರದ ಬೆಟ್ಟದ ಸಾಲುಗಳು, ಅರಮನೆ ಹೊನ್ನಮಾಚನಹಳ್ಳಿ, ಉಜ್ಜನಿ, ರಾಜೇಂದ್ರಪುರ, ಹುಲಿಯೂರುದುರ್ಗ ಭಾಗದ ರಕ್ಷಿತಾರಣ್ಯ, ಹೇಮಗಿರಿ ಬೆಟ್ಟ, ಇಪ್ಪಾಡಿ ಅರಣ್ಯ ಪ್ರದೇಶದ ರಾಮನಗುಡ್ಡೆ, ಸಾಮನಗುಡ್ಡೆ, ಕರಡಿಕಲ್ಲುಗುಡ್ಡೆ, ದರಕ್ಕಿ ಗುಡ್ಡೆ, ಕ್ವಾಣಗುಡ್ಡೆ, ಸೀರುಗುಡ್ಡೆ, ಚಿಕ್ಕ-ದೊಡ್ಡ ಕಂಬದರಾಯನ ಬೆಟ್ಟಗಳು, ಹುಲ್ಲಾಲೆ ಬೆಟ್ಟ ಇಲ್ಲಿನ ಜನರ ಮತ್ತು ಜಾನುವಾರುಗಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಾನುವಾರುಗಳಿಗೆ ಮೇವನ್ನು ಪ್ರಮುಖವಾಗಿ ನೀಡುತ್ತವೆ.

ಆದರೆ ಬೇಸಿಗೆ ಹತ್ತಿರವಾದಂತೆ ಕೆಲವರು ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಆಹಾರ, ನೀರಿಗಾಗಿ ಕಾಡು ಪ್ರಾಣಿಗಳು ಗ್ರಾಮಗಳತ್ತ ನುಗ್ಗುತ್ತವೆ. ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ ಹಾಕುವುದನ್ನು ತಪ್ಪಿಸುವುದು ಮತ್ತು ಕಾಡು ಪ್ರಾಣಿಗಳು ನಾಡು ಪ್ರವೇಶಿಸದಂತೆ ತಡೆಯುವುದು ಅರಣ್ಯ ಇಲಾಖೆಗೆ ಪ್ರಮುಖ ಸವಾಲಾಗಿದೆ.

ಅರಣ್ಯ ರಕ್ಷಣೆಗಾಗಿ ಒಂಬತ್ತು ಕಡೆ ಗಸ್ತು ಪಡೆಗಳನ್ನು ಅರಣ್ಯ ಇಲಾಖೆ ನಿಯೋಜಿಸಿದೆ. ಆದರೆ ಇಪ್ಪಾಡಿ, ಹುಲ್ಲಾಲೆ, ರಂಗಸ್ವಾಮಿಗುಡ್ಡೆ, ಹುತ್ರಿದುರ್ಗ,  ಸಂತೆಮಾವತ್ತೂರು, ಕಂಪಲಾಪುರ, ಹಂದಲಕುಪ್ಪೆ, ಉಜ್ಜನಿ, ತಾವರೆಕೆರೆ ಬೀಟ್ ಪಡೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅರಣ್ಯ ಪಾಲಕ, ರಕ್ಷಕ, ವೀಕ್ಷಕರ ಕೊರತೆ ಇದೆ. ಇದರಿಂದ ಕಿಡಿಗೇಡಿಗಳು ಕಾಡಿಗೆ ಹಾನಿ ಉಂಟು ಮಾಡುವುದನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.

‘ಇಲ್ಲಿನ ಕಾಡುಗಳಲ್ಲಿ ಕಾಳ್ಗಿಚ್ಚು ಉಂಟಾಗುವ ಸಾಧ್ಯತೆ ಇಲ್ಲ. ಪರಿಸರದ ಮಹತ್ವ ತಿಳಿಯದ ಕೆಲವರು ಕಾಡಿಗೆ ಬೆಂಕಿ ಹಚ್ಚಿ ವಿಲಕ್ಷಣ ಆನಂದ ಅನುಭವಿಸುತ್ತಿದ್ದಾರೆ’ ಎಂದು ಪರಿಸರ ಪ್ರೇಮಿಗಳು ಆಪಾದಿಸುವರು. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಇಟ್ಟರೆ ಮಳೆಗಾಲದಲ್ಲಿ ಉತ್ತಮವಾಗಿ ಹುಲ್ಲು ಚಿಗುರೊಡೆಯುತ್ತದೆ. ಜಾನುವಾರುಗಳ ಮೇವಿಗೆ ಅವಶ್ಯಕ ಎನ್ನುವುದು ಗ್ರಾಮಸ್ಥರ ವಾದ. ಇನ್ನೊಂದು ಕಡೆ ‘ಬೇಗೆ’ ವಂಶದವರು ಎಂದು ಕರೆಯಲಾಗುವ ಜನರು ಸಂತಾನ ಪ್ರಾಪ್ತಿಗಾಗಿ ಕಾಡಿಗೆ ಬೆಂಕಿ ಹಚ್ಚುತ್ತಾರೆ ಎನ್ನುವ ಮಾತು ಸಹ ಇದೆ.

ಪರಿಹಾರ ವಿತರಣೆ:  ‘2015-16ನೇ ಸಾಲಿನಲ್ಲಿ ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಟ್ಟು ಬೆಳೆನಾಶಪಡಿಸಿದ 80 ಪ್ರಕರಣಗಳು ಇಲಾಖೆಯಲ್ಲಿ ದಾಖಲಾಗಿದ್ದವು.  ಸಂತ್ರಸ್ತ ರೈತರಿಗೆ ನಿಗದಿತ ಪರಿಹಾರ ಸಹ ವಿತರಿಸಲಾಗಿದೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಸಿ. ರವಿ.
-ಸಣಬಘಟ್ಟ ಸೋಮಶೇಖರ್

* ಅರಣ್ಯ ರಕ್ಷಣೆಗೆ ಜನರ ಸಹಕಾರ ಮುಖ್ಯ. ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಅರಣ್ಯ ಸಮಿತಿಗಳನ್ನು ರಚಿಸಲಾಗಿದೆ. ಕೆಲ ಕಿಡಿಗೇಡಿಗಳ ಉಪಟಳ ಇಲಾಖೆಗೆ ಸವಾಲಾಗಿದೆ.
ಸಿ.ರವಿ, ವಲಯ ಅರಣ್ಯಾಧಿಕಾರಿ

ಅಂಕಿ ಅಂಶ

ADVERTISEMENT

9600 ಚ.ಕಿ.ಮೀ - ಕುಣಿಗಲ್‌ ತಾಲ್ಲೂಕಿನ ಒಟ್ಟು ಅರಣ್ಯ ವಿಸ್ತೀರ್ಣ

4800  ಚ.ಕಿ.ಮೀ - ಹುಲಿಯೂರುದುರ್ಗ ಹೋಬಳಿ ವ್ಯಾಪ್ತಿ ಅರಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.