ADVERTISEMENT

ಕಾಮಗಾರಿ ಕಳಪೆಯಾದರೆ ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 10:19 IST
Last Updated 24 ಜೂನ್ 2017, 10:19 IST

ತುಮಕೂರು: ‘ವಿವಿಧ ಇಲಾಖೆಗಳ ಕಚೇರಿ ನಿರ್ವಹಣಾ ಕಾರ್ಯಕ್ಕೆ ₹ 11.3 ಕೋಟಿ ಅನುದಾನ ಮಂಜೂರಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (ಲ್ಯಾಂಡ್ ಆರ್ಮಿ), ನಿರ್ಮಿತಿ ಕೇಂದ್ರದ ಅಧಿಕಾರಿಗಳು ದುರಸ್ತಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹೇಳಿದರು. ಗುರುವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಣ ಕಡಿಮೆ ಇದೆ ಎಂದು ಕಳಪೆ ಕಾಮಗಾರಿ ನಿರ್ವಹಿಸಿದರೆ, ಅಂತಹ ನಿರ್ಮಾಣ ಕಂಪನಿಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ಶಿಕ್ಷಣ, ಯುವಜನ ಸಬಲೀಕರಣ, ವೈದ್ಯಕೀಯ, ಗ್ರಾಮೀಣ ನೀರು ಸರಬರಾಜು ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ ಸೇರಿ ವಿವಿಧ ಇಲಾಖೆಯ ಕಚೇರಿಗಳ ದುರಸ್ತಿ, ಸಣ್ಣಪುಟ್ಟ ರಿಪೇರಿ ಕೆಲಸ, ಕಚೇರಿ ನಿರ್ವಹಣಾ ಕಾರ್ಯಗಳಿಗೆ ಮಾತ್ರ ಅನುದಾನ ಬಳಸಿಕೊಳ್ಳಬೇಕು’ ಎಂದು ಸೂಚಿಸಿದರು.

ಅಗತ್ಯವಿರುವ ಕೆಲಸಕ್ಕೆ ಮಾತ್ರ ಅನುದಾನ ಬಳಸಿ: ‘ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸುವಾಗ ತೀರ ಅಗತ್ಯವಿರುವ ಕೆಲಸ ಕಾರ್ಯಗಳಿಗೆ ಮಾತ್ರ ಅದ್ಯತೆ ನೀಡಬೇಕು. ಅನುದಾನ ಬಂದಿದೆ. ಖರ್ಚು ಮಾಡಬೇಕು ಎಂದು ಅಗತ್ಯವಿಲ್ಲದ ಕಾಮಗಾರಿಗಳಿಗೆ ಅನುದಾನ ವಿನಿಯೋಗಿಸಬಾರದು’ ಎಂದು ಎಚ್ಚರಿಕೆ ನೀಡಿದರು.
‘ತೀರ ಕಡಿಮೆ ಹಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕೆಲಸ ಅರ್ಧಕ್ಕೆ ನಿಲ್ಲುವಂತೆ ಮಾಡಬಾರದು. ಸರ್ಕಾರದ ಅನುದಾನ ಸದ್ಬಳಕೆಯಾಗುವಂತೆ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

ತುಮಕೂರು ಮತ್ತು ಮಧುಗಿರಿ ಎರಡು ಶೈಕ್ಷಣಿಕ ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ ₹ 5 ಲಕ್ಷ ದಂತೆ ₹ 50 ಲಕ್ಷ ಮೊತ್ತವನ್ನು  ದುರಸ್ತಿ ಕಾಮಗಾರಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ವಹಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ₹ 22 ಲಕ್ಷ ಮೊತ್ತ ದೊರಕಿಸಲಾಗಿದೆ. ಪ್ರತಿ ತಾಲ್ಲೂಕಿಗೆ ತಲಾ ₹ 2  ಲಕ್ಷ ಮೊತ್ತವನ್ನು ಕ್ರೀಡಾ ಚಟುವಟಿಕೆ ನಡೆಸಲು ಬಳಸಿಕೊಳ್ಳಬೇಕು’ ಎಂದು ಹೇಳಿದರು.

ತುಮಕೂರು ನಗರದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ 2ನೇ ಮಹಡಿ ನಿರ್ಮಾಣಕ್ಕಾಗಿ ₹ 60 ಲಕ್ಷಕ್ಕೆ ಅನುಮೋದನೆ ನೀಡಲಾಯಿತು.
ಉಳಿದಂತೆ ಕೃಷಿ ಇಲಾಖೆಗೆ ₹19ಲಕ್ಷ , ತೋಟಗಾರಿಕೆ ಇಲಾಖೆಗೆ ₹ 12ಲಕ್ಷ , ಪಶುಸಂಗೋಪನಾ ಇಲಾಖೆಯ ₹ 60ಲಕ್ಷ, ಮೀನುಗಾರಿಕೆ ಇಲಾಖೆಗೆ ₹ 6ಲಕ್ಷ, ಸಾಮಾಜಿಕ ಅರಣ್ಯ ಇಲಾಖೆಗೆ ₹ 25ಲಕ್ಷ  ಸೇರಿ ಒಟ್ಟು ₹ 11.03ಕೋಟಿ  ಮೊತ್ತದ ಕ್ರಿಯಾ ಯೋಜನೆಗೆ ಸಭೆ ಅನುಮೋದನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.