ADVERTISEMENT

ಕಾಯಕಲ್ಪಕ್ಕೆ ಕಾದಿದೆ ಗೂಳೂರು ಕೆರೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 7:12 IST
Last Updated 19 ಸೆಪ್ಟೆಂಬರ್ 2017, 7:12 IST
ಕೆರೆ ಅಂಗಳದಲ್ಲಿ ಬೆಳದಿರುವ ಗಿಡಗಂಟಿಗಳು
ಕೆರೆ ಅಂಗಳದಲ್ಲಿ ಬೆಳದಿರುವ ಗಿಡಗಂಟಿಗಳು   

ತುಮಕೂರು: ಐತಿಹಾಸಿಕ ಗೂಳೂರು ಕೆರೆಯ ಕಾಯಕಲ್ಪಕ್ಕೆ ಗ್ರಾಮ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಒಂದು ಸಮೃದ್ಧ ಜಲಮೂಲವನ್ನು ಕಳೆದುಕೊಳ್ಳುವ ಭೀತಿ ಜನರನ್ನು ಕಾಡುತ್ತಿದೆ.

ಈ ಕೆರೆ 112 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 272.80 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು ಕೃಷಿಕರಿಗೆ ವರದಾನವಾಗಿದೆ. 100 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಇದೆ. ಒಂದು ಎಂಸಿಎಫ್‌ಟಿ ಅಂದರೆ ಹತ್ತು ಲಕ್ಷ ಘನ ಅಡಿ. ಕೆರೆ ಏರಿಯ ಉದ್ದವೇ ಎರಡು ಕಿಲೋಮೀಟರ್ ಇದೆ. ಇಂತಹ ವಿಶಾಲವಾದ ಕೆರೆ ಒತ್ತುವರಿಗೆ ತುತ್ತಾಗಿದೆ. ನಗರದ ಕಾರ್ಖಾನೆಗಳು ಹಾಗೂ ಆಸ್ಪತ್ರೆಗಳ ತ್ಯಾಜ್ಯವನ್ನು ಒಡಲು ಸೇರಿ ನಲುಗುತ್ತಿದೆ.

ನಿಜಲಿಂಗ ಬೆಟ್ಟದಿಂದ ಹರಿದು ಬರುವ ನೀರು, ದೇವರಸಹಳ್ಳಿ ಕೆರೆ ಹಾಗೂ ಮೈದಾಳ ಕೆರೆ ತುಂಬಿ ಹರಿದರೆ ಗೂಳೂರು ಕೆರೆ ತುಂಬುತ್ತದೆ. ಎರಡು ತೂಬುಗಳು ಮತ್ತು ಎರಡು ಕೋಡಿಗಳಿವೆ. ಗೂಳೂರು ಕೆರೆ ತುಂಬಿದರೆ ಒಂದು ಕೋಡಿಯಿಂದ ಮರಳೂರು ಕೆರೆಗೆ ನೀರು ಹರಿಯುತ್ತದೆ. ಮತ್ತೊಂದು ಕೋಡಿಯಿಂದ ಹೆಗ್ಗೆರೆ ಮತ್ತು ಕುಂಕುಮನಹಳ್ಳಿ ಕೆರೆಗಳಿಗೆ ನೀರು ಹರಿದು ಗುಬ್ಬಿ ಕೆರೆ ತಲುಪುತ್ತದೆ.

ADVERTISEMENT

ಮಳೆ ಇಲ್ಲದ ಕಾರಣಕ್ಕೆ ಕೆರೆ ತುಂಬಿಲ್ಲ. ಆದರೆ ಈಗ ಕೆರೆಯ ಅಂಗಳದಲ್ಲಿ ಎಸೆಯುತ್ತಿರುವ ತ್ಯಾಜ್ಯದಿಂದ ಕೆರೆಗೆ ಆಪತ್ತು ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ.
‘19 ವರ್ಷಗಳಿಂದ ಕೆರೆ ತುಂಬಿಲ್ಲ.

ಸಂಕಾಪುರ ಪಾಳ್ಯ, ಗೂಳೂರು ಹಾಗೂ ಪಾಲಸಂದ್ರಪಾಳ್ಯದ ಚರಂಡಿ ನೀರು ಕೆರೆಗೆ ಹರಿದು ಬರುತ್ತಿದೆ. ಅಡಿಕೆ ಸಿಪ್ಪೆ ಹಾಗೂ ಘನತ್ಯಾಜ್ಯಗಳನ್ನು ನೀರು ಹರಿದು ಬರುವ ಹಾಗೂ ಹೊರಗೆ ಹೋಗುವ ‌ತೊರೆಗಳಲ್ಲಿ ಬಿಸಾಕಲಾಗುತ್ತಿದೆ. ಈ ಗ್ರಾಮಗಳ ಜನರು ಎಕರೆಗಟ್ಟಲೆ ಕೆರೆಯ ಜಮೀನನ್ನು ಒತ್ತುವರಿ ಮಾಡಿದ್ದಾರೆ. ಕೆರೆಯ ಇನ್ನೊಂದು ಬದಿಯಲ್ಲಿಯರುವ ಗೋಮಾಳವನ್ನೂ ಅತಿಕ್ರಮಿಸಿದ್ದಾರೆ’ ಎಂದು ಮರಳೂರು–ಗೂಳೂರು ಕೆರೆ ಸಂರಕ್ಷಣಾ ಸಮಿತಿ ಹಾಗೂ ನಮ್ಮೂರ ಕೆರೆ ತಂಡದ ಸದಸ್ಯರಾದ ಸತೀಶ್ ಹಾಗೂ ವಿನಯ್ ದೂರಿದರು.

‘ಒತ್ತುವರಿದಾರರ ‌‌ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪಾಳಸಂದ್ರ ಪಾಳ್ಯ ಸುತ್ತ ಗೂಳೂರು ಕೆರೆಗೆ ಏರಿ ನಿರ್ಮಿಸಬೇಕು. ದೇವರಸನಹಳ್ಳಿ ಮತ್ತು ಮೈದಾಳ ಕೆರೆಗಳಿಂದ ಗೂಳೂರು ‌ಕೆರೆಗೆ ನೀರು ಹರಿದು ಬರುವ ತೊರೆ ಕಾಲುವೆಗಳನ್ನು ದುರಸ್ತಿಗೊಳಿಸಬೇಕು. ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ತೊರೆ, ಕಾಲುವೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಗಣಪನ ವಿಸರ್ಜನೆಗೂ ನೀರಿಲ್ಲ: ‘ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಗಣಪತಿ ವೈಭವ ಹಾಗೂ ವಿಜೃಂಭಣೆಯ ಕಾರಣಕ್ಕೆ ಸುತ್ತ ಮುತ್ತ ಪ್ರಸಿದ್ಧವಾಗಿದೆ. ಗಣಪತಿಯನ್ನು ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಆದರೆ ಈ ವರ್ಷ ಗೂಳೂರು ಕೆರೆಯಲ್ಲಿ ನೀರು ಇಲ್ಲ. ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಗ್ರಾಮದ ಜಯಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.