ADVERTISEMENT

ಕೆಂಪಮ್ಮದೇವಿ ರಥೋತ್ಸವ; ಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:19 IST
Last Updated 24 ಏಪ್ರಿಲ್ 2017, 5:19 IST
ತಿಪಟೂರು ತಾಲ್ಲೂಕು ನಾರಸೀಕಟ್ಟೆ ಪೂಜಾರಿಪಾಳ್ಯ ಗ್ರಾಮದ ಹುಚ್ಚಮ್ಮದೇವಿ, ದ್ಯಾವಮ್ಮದೇವಿ ಜಾತ್ರಾ ಮಹೊತ್ಸವದ ಅಂಗವಾಗಿ ಭಾನುವಾರ ಅಗ್ನಿ ಕೊಂಡೋತ್ಸವ ನಡೆಯಿತು
ತಿಪಟೂರು ತಾಲ್ಲೂಕು ನಾರಸೀಕಟ್ಟೆ ಪೂಜಾರಿಪಾಳ್ಯ ಗ್ರಾಮದ ಹುಚ್ಚಮ್ಮದೇವಿ, ದ್ಯಾವಮ್ಮದೇವಿ ಜಾತ್ರಾ ಮಹೊತ್ಸವದ ಅಂಗವಾಗಿ ಭಾನುವಾರ ಅಗ್ನಿ ಕೊಂಡೋತ್ಸವ ನಡೆಯಿತು   

ತಿಪಟೂರು: ಗ್ರಾಮದೇವತೆ ತಿಪಟೂರು ಕೆಂಪಮ್ಮದೇವಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ವೈಭವದಿಂದ ನೆರವೇರಿತು.

ದೇವಿಯರಿಗೆ ಅಭಿಷೇಕ, ಸಹಸ್ರನಾಮ ಅರ್ಚನೆ, ಮಹಾಮಂಗಳಾರತಿ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಭಕ್ತರು ವಿಶೇಷ ನೈವೇಧ್ಯಗಳು ಸೇರಿದಂತೆ ತಂಬಿಟ್ಟಿನ ಆರತಿ ಹಾಗೂ ಹೂವು ಹಣ್ಣು-ಕಾಯಿ, ಕರ್ಪೂರ ಸಮರ್ಪಿಸಿದರು.

ಹೂವಿನ ಹಾರ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಶೃಂಗರಿಸಲಾಗಿತ್ತು. ವಿಶೇಷ ಪೂಜಾ ವಿಧಾನಗಳೊಂದಿಗೆ ನೆರೆದಿದ್ದ ಭಕ್ತರು ರಥ ಎಳೆದರು. ರಥೋತ್ಸವದ ಮೇಲೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ಹರಕೆ ತೀರಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಕಾರ್ಯಕರ್ತರು ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅಲ್ಲಲ್ಲಿ ಪಾನಕ ಮತ್ತು ಮಜ್ಜಿಗೆ ವಿತರಿಸಿ ದಾಹ ತಣಿಸಿದರು.

ADVERTISEMENT

ದ್ಯಾವಮ್ಮದೇವಿ ಜಾತ್ರೆ: ತಾಲ್ಲೂಕಿನ ನಾರಸೀಕಟ್ಟೆ ಪೂಜಾರಿಪಾಳ್ಯ ಗ್ರಾಮದ ಹುಚ್ಚಮ್ಮದೇವಿ, ದ್ಯಾವಮ್ಮದೇವಿ ಜಾತ್ರಾ ಮಹೊತ್ಸವದ ಅಂಗವಾಗಿ ಭಾನುವಾರ ಅಗ್ನಿ ಕೊಂಡೋತ್ಸವ ನಡೆಯಿತು.

ಹುಚ್ಚಮ್ಮದೇವಿ, ದ್ಯಾವಮ್ಮದೇವಿ ಮಹಾಮಂಗಳಾರತಿ, ಮಧುವಣಗಿತ್ತಿ ಶಾಸ್ತ್ರ, ಧ್ವಜಸ್ಥಾಪನೆ ಜಾತ್ರೆಯ ಭಾಗವಾಗಿ ನೆರವೇರಿದವು. ನಾರಸೀಕಟ್ಟೆ ಪೂಜಾರಿಪಾಳ್ಯ ಕಲ್ಲಯ್ಯನಪಾಳ್ಯ, ರಾಮಡಿಹಳ್ಳಿ, ಜೈಪುರ, ಮಲ್ಲೇನಹಳ್ಳಿ, ಬಳ್ಳೆಕಟ್ಟೆ, ಹೊಗವನಘಟ್ಟ, ಮಲ್ಲೇದೇವರಹಳ್ಳಿ, ಹೊಸೂರು, ರಾಮನಗರ, ರಾಮಡಿಹಳ್ಳಿ ಕಾಲೊನಿ ಸೇರಿದಂತೆ  ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೇರಿ ದೇವಿಗೆ ಆರತಿ ಬಾನ  ಸೇವೆ ಮಾಡಿದರು. ಮಡೆ, ಬಾಯಿಬೀಗ ಸೇರಿದಂತೆ ಅಮ್ಮನ ಉತ್ಸವಗಳು ಅದ್ಧೂರಿಯಾಗಿ ನಡೆದವು.

ನಾರಸೀಕಟ್ಟೆ ಗ್ರಾಮದಲ್ಲಿ ಗಂಗಸ್ನಾನ ನೆರವೇರಿಸಿದ ನಂತರ ಕಂಬದ ನರಸಿಂಹಸ್ವಾಮಿಗೆ ಪಾನಕ, ಫಲಹಾರ ಸೇವೆ ಮಾಡಲಾಯಿತು. ನಂತರ ಹುಚ್ಚಮ್ಮದೇವಿ, ದ್ಯಾವಮ್ಮದೇವಿ ಮತ್ತು ಕೆರಗೊಡಿ ದ್ಯಾವಮ್ಮದೇವಿ ಉತ್ಸವ ಮೂರ್ತಿ ಹೊತ್ತು  ಅಗ್ನಿ ಕೊಂಡ ಹಾಯಲಾಯಿತು. ಭಕ್ತರು ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು. ನಂತರ ರಥೋತ್ಸವ ಹಾಗೂ ಕುಂಕುಮ ಸೇವೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.