ADVERTISEMENT

ಕೊಯಿಲಿಗೆ ಬಂದ ರಾಗಿ ಕಣ ಸೇರದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:28 IST
Last Updated 4 ಡಿಸೆಂಬರ್ 2017, 5:28 IST

ಹುಲಿಯೂರುದುರ್ಗ: ಕೊಯ್ಲಿಗೆ ಬಂದಿರುವ ರಾಗಿಯ ಫಸಲನ್ನು ಮನೆ ತುಂಬಿಸಿಕೊಳ್ಳುವ ದಾರಿ ಕಾಣದೆ ಈ ಭಾಗದ ರೈತರು ಕಂಗಾಲಾಗಿದ್ದಾರೆ. ವಾಯುಭಾರ ಕುಸಿತ ಇವರನ್ನು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದೆ.

‘ಕಟಾವಿಗೆ ಬಂದಿರೋ ರಾಗಿ ಕಾಲಾನುಸಾರ ಕೊಯಿಲು ಆಗದಿದ್ದರೆ ಹರಳು ಆಚೆಗೆ ಬಂದು ಉದುರಿ ಹೋಗುತ್ತವೆ. ಕೊಯ್ಲು ಆದ ಮೇಲೆ ಹುಲ್ಲು 8 ರಿಂದ 15 ದಿನಗಳ ಕಾಲ ಒಣಗಬೇಕು. ಒಣಗದ ಹುಲ್ಲು ಬೂಷ್ಟು ಹಿಡಿದು ಹಾಳಾಗುವುದಲ್ಲದೆ ರಾಗಿಯ ಕಾಳು ಬೆಳ್ಳಗಿನ ಸುಣ್ಣಕಟ್ಟು ಬಂದು ಬೆಂದು ಹೋಗುತ್ತವೆ. ಇನ್ನು ಹರವಿದ ಹುಲ್ಲನ್ನು ಕಣಕ್ಕೆ ಸಾಗಣೆ ಮಾಡದೇ ಹೋದರೆ ಇದ್ದಲ್ಲೇ ಪೈರುಗಳು ಹೊಮ್ಮುತ್ತವೆ. ರೈತರದು ಎತ್ತಲೂ ಅತಂತ್ರ ಪರಿಸ್ಥಿತಿ' ಎಂದು ನಿಡಸಾಲೆ ಗ್ರಾಮದ ರೈತ ಕೃಪೇಶ್ ವಿವರಿಸಿದರು.

ರಾಗಿಯ ಕೊಯಿಲಿನಿಂದ ಹಿಡಿದು ಒಣಗಿಸಿ, ಬಣವೆ ಪೇರಿಸಿ, ಬಡಿದು ತೂರಿ, ಕಣಜ ತುಂಬಿಸಿಕೊಳ್ಳುವವರೆಗಿನ ಯಾವ ಕೆಲಸವನ್ನೂ ಕ್ಷಿಪ್ರವಾಗಿ ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ರೈತರು ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಲೇ ಬೇಕಾಗಿದೆ.

ADVERTISEMENT

‘ಮೊದಲೆಲ್ಲ ಅತೀ ಹೆಚ್ಚಿನ ಮಳೆಯಿಂದಾಗಿ ಬಿತ್ತನೆಯಾದ ಪೈರು ಸಮರ್ಪಕವಾಗಿ ತೆಂಡೆ ಒಡೆಯಲಿಲ್ಲ. ಈಗಿನ ಅಕಾಲಿಕ ಮಳೆ ಇದ್ದಬದ್ದ ಫಸಲೂ ಕೈ ಸೇರದಂತೆ ಮಾಡಿದೆ. ಅರಗೆಡಿಸಿ ಕಣಗೆಡಿಸಿ ಅಂತಲೇ ಈ ಮಳೆಗಳ ಹೆಸರು. ಪ್ರತೀ ವರ್ಷವೂ ಹೀಗೆಯೇ ಆಗುತ್ತಿದೆ' ಎಂದು ರೈತರು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.