ADVERTISEMENT

ಕೋಳಾಲದಲ್ಲಿ ಪ್ರತಿಭಟನೆ ನಾಳೆ

ಭೈರಗೊಂಡ್ಲು ಗ್ರಾಮದ ಬಳಿ ಜಲಾಶಯ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:24 IST
Last Updated 9 ಮಾರ್ಚ್ 2017, 7:24 IST
ತುಮಕೂರು: ‘ಎತ್ತಿನ ಹೊಳೆ ಯೋಜನೆಯಿಂದ ಕೊರಟಗೆರೆ ತಾಲ್ಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮದ ಜನರು ನಿರಾಶ್ರಿತರಾಗಲಿದ್ದಾರೆ. ಯೋಜನೆ ವಿರೋಧಿಸಿ ಶುಕ್ರವಾರ ಕೋಳಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಎತ್ತಿನಹೊಳೆ ಯೋಜನೆಯ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಆರ್.ಶಿವರಾಮಯ್ಯ ಹೇಳಿದರು.
 
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎತ್ತಿನ ಹೊಳೆ ಯೋಜನೆಯು ಕುಡಿಯುವ ನೀರಿನ ಉದ್ದೇಶ ಹೊಂದಿರುವ ಮಹತ್ವದ ಯೋಜನೆಯಾಗಿದೆ. ಆದರೆ, ಇದು ಅವೈಜ್ಞಾನಿಕವಾಗಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ರೈತರು, ಗ್ರಾಮಸ್ಥರ ಹಿತ ಕಡೆಗಣಿಸಿ ಜಾರಿಗೊಳಿಸುತ್ತಿರುವುದು ಖಂಡನೀಯ’ ಎಂದು ಹೇಳಿದರು.
 
‘ಯೋಜನೆಯಡಿ ಸರ್ಕಾರವು ಈ ಹಿಂದೆ ದೇವರಾಯನದುರ್ಗ ಕಣಿವೆಯ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಯೋಜಿಸಿತ್ತು. ಆದರೆ, ಅದನ್ನು ಬದಲಿಸಿ ಭೈರಗೊಂಡ್ಲು ಗ್ರಾಮದ ಬಳಿ ಜಲಾಶಯ ನಿರ್ಮಿಸಲು ಮುಂದಾಗಿದೆ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಅಣೆಕಟ್ಟೆ ಕಟ್ಟುವುದರಿಂದ 5000 ಮಂದಿ ಬೀದಿಪಾಲಾಗುತ್ತಾರೆ’ ಎಂದು ಹೇಳಿದರು.
 
‘ಜಲಾಶಯ ನಿರ್ಮಾಣದ ಹಿನ್ನೆಲೆಯಲ್ಲಿ ವ್ಯಾಪ್ತಿ ಪ್ರದೇಶದ ರೈತರು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳ ಮಟ್ಟದಲ್ಲೇ ತೀರ್ಮಾನಿಸಿ ಭೂ ಸ್ವಾಧೀನದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.
 
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಿಕ್ಕತಿಮ್ಮಯ್ಯ ಮಾತನಾಡಿ,‘ಯೋಜನೆಯಿಂದ ಸಾಮಾಜಿಕ ಪರಿಣಾಮ, ಆರ್ಥಿಕ ಸಂಕಷ್ಟಗಳಿಗೆ ಜನರು ತೊಂದರೆ ಪಡಬೇಕಾದ ಸ್ಥಿತಿಗತಿಗಳ ಬಗ್ಗೆ ಗಮನಹರಿಸಿಲ್ಲ. 15ರಿಂದ 20 ಹಳ್ಳಿಗಳು ಮುಳುಗಡೆಯಾಗಿ ಸಂತ್ರಸ್ತರಾಗುವ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಗಮನಹರಿಸಿಲ್ಲ’ಎಂದು ದೂರಿದರು.
 
‘ವಿಶೇಷವಾಗಿ ರೈತರನ್ನು ಕತ್ತಲಲ್ಲಿಟ್ಟು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಈ ರೀತಿಯ ಅವೈಜ್ಞಾನಿಕ ಯೋಜನೆಯನ್ನು ಖಂಡಿಸುತ್ತೇವೆ. ಬದುಕುವ ಹಕ್ಕಿಗಾಗಿ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.‘ಭೈರಗೊಂಡ್ಲ ಗ್ರಾಮದಲ್ಲಿ ಜಲಾಶಯ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ’ಎಂದು ಹೇಳಿದರು.
 
ನಿರ್ಲಕ್ಷ್ಯ: ‘ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಯೋಜನೆಯಡಿ ಕಾಮಗಾರಿ ಅನುಮೋದನೆಗೊಂಡಿದ್ದರೂ ಈವರೆಗೂ ಕೊರಟಗೆರೆ ತಾಲ್ಲೂಕು ಕೊಳಾಲ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿಲ್ಲ ’ಎಂದು ಅವರು ತಿಳಿಸಿದರು. ಉಪಾಧ್ಯಕ್ಷ ವೆಂಕಟೇಶಮೂರ್ತಿ, ಕಾನೂನು ಸಲಹೆಗಾರ ಚಿಕ್ಕಲಿಂಗಯ್ಯ ಗೋಷ್ಠಿಯಲ್ಲಿದ್ದರು.

ಹತ್ತಕ್ಕೂ ಹೆಚ್ಚು ಗ್ರಾಮದ ಜನ ನಿರಾಶ್ರಿತರಾಗುವರು
‘ಬೆಲ್ಲದಹಳ್ಳಿ, ಸುಂಕದಹಳ್ಳಿ, ಗದರೇನಹಳ್ಳಿ, ಲಕ್ಕೇನಹಳ್ಳಿ, ಭೂತನಹಳ್ಳಿ, ಮಾಚೇನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗೇನಹಳ್ಳಿ, ಗರುಡಗಲ್ಲು ಗ್ರಾಮದ ಜನರು ಸಂತ್ರಸ್ತರಾಗಲಿದ್ದಾರೆ. ಇಷ್ಟೆಲ್ಲ ಗ್ರಾಮದ ಜನರಿಗೆ ತೊಂದರೆಯಾಗುವಂತಿದ್ದರೂ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡಿಲ್ಲ ಎಂದು ವೇದಿಕೆಯ ಕಾರ್ಯದರ್ಶಿ ಚಿಕ್ಕತಿಮ್ಮಯ್ಯ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.