ADVERTISEMENT

ಕ್ರಿಯಾ ಯೋಜನೆ ಸಲ್ಲಿಕೆಗೆ 20ರ ಗಡುವು

ಅನುದಾನ ಬಳಕೆ ನಿರ್ಲಕ್ಷ್ಯ ಬೇಡ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 10:02 IST
Last Updated 13 ಜನವರಿ 2017, 10:02 IST

* ಫೆ. 25ರ ಹೊತ್ತಿಗೆ ಅಂತಿಮ ವರದಿ
* ಹೊರೆಯಾಗುವ ಸೌಲಭ್ಯ ಬೇಡ
* ದುರ್ಬಳಕೆ ಆಗದಂತೆ ಎಚ್ಚರ ವಹಿಸಿ
* ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲು ಇದೆ

**
ತುಮಕೂರು: ‘ಅಂಗವಿಕಲರಿಗೆ ಶೇ 3 ಹಾಗೂ ಮಹಿಳೆಯರಿಗೆ ಶೇ 33ರಷ್ಟು ಅನುದಾನ ಬಳಕೆ ಕುರಿತ ಕ್ರಿಯಾ ಯೋಜನೆಯನ್ನು ಜನವರಿ 20ರೊಳಗೆ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.
 
ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಏರ್ಪಡಿಸಿದ್ದ ‘ಅಂಗವಿಕಲರಿಗೆ ಶೇ 3 ಹಾಗೂ ಮಹಿಳೆಯರಿಗೆ ಶೇ 33ರ ಅನುದಾನ ಬಳಕೆ’ ಕುರಿತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
 
‘ಜಿಲ್ಲೆಯಲ್ಲಿ 41 ಸಾವಿರ ಅಂಗವಿಕಲರು ಇದ್ದಾರೆ ಎಂದು ಇಲಾಖೆಯು ಅಂಕಿ ಅಂಶ ನೀಡಿದೆ. ಈ ಸಮುದಾಯದ ಅಭಿವೃದ್ಧಿಗೆ ಶೇ 3ರ ಅನುದಾನವನ್ನು ವಿವಿಧ ಇಲಾಖೆಗಳಲ್ಲಿ ಕಾಯ್ದಿರಿಸಬೇಕು. ಮಹಿಳೆಯರ ಏಳ್ಗೆಗೆ ಶೇ 33ರಷ್ಟು ಅನುದಾನ ಕಲ್ಪಿಸಬೇಕು. ಇವರಿಗೆ ನೆರವಾಗುವಂತಹ ಯಾವ್ಯಾವ ಕಾರ್ಯಕ್ರಮ ರೂಪಿಸಲಾಗುತ್ತದೆ. ಎಷ್ಟು ಅನುದಾನ ಬೇಕಾಗಬಹುದು ಎಂಬುದರ ಕುರಿತ ಕ್ರಿಯಾ ಯೋಜನೆ ಸಲ್ಲಿಸಬೇಕು. ಫೆಬ್ರುವರಿ 25ರಷ್ಟೊತ್ತಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಸರ್ಕಾರಕ್ಕೆ  ಅಂತಿಮ ವರದಿ ಸಲ್ಲಿಸಲಾಗುತ್ತದೆ’ ಎಂದು ವಿವರಿಸಿದರು.
 
‘ಅಂಗವಿಕಲರಿಗೆ ಶೇ 3ರ ಅನುದಾನ ಬಳಕೆ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಉಪನಿರ್ದೇಶಕ ಚನ್ನಯ್ಯ, ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಇದ್ದರೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ’ ಎಂದರು.
 
‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ನಿರ್ದಿಷ್ಟ ಶೇ 3ರ ಅನುದಾನದಲ್ಲಿ ಅಂಗವಿಕಲರಿಗೆ ಉಪಯುಕ್ತ ಸೌಕರ್ಯ ಕಲ್ಪಿಸಬೇಕು. ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳು ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಗೆ ಕೊಡಬೇಕು’ ಎಂದರು.
 
‘ಬೈಸಿಕಲ್, ತ್ರಿಚಕ್ರ ವಾಹನಗಳನ್ನೇ ಹೆಚ್ಚು ಕೊಡುವುದಕ್ಕೆ ಈ ಅನುದಾನ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಬದಲಾಗಿ, ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಉದ್ಯೋಗ ಕೈಗೊಳ್ಳಲು ನೆರವು ನೀಡಬೇಕು. ಎಸ್‌ಎಸ್ಎಲ್‌ಸಿಯವರೆಗೆ ಅಂಧ ಮಕ್ಕಳಿಗೆ ಬ್ರೈಲ್ ಲಿಪಿಯ ಪಠ್ಯಪುಸ್ತಕ ವಿತರಣೆಗೆ ಅನುದಾನ ಬಳಸಬಹುದು’ ಎಂದು ಸಲಹೆ ನೀಡಿದರು.
 
‘ಹಳೆಯ ಮಾದರಿ ಮತ್ತು ಹೆಚ್ಚು ಭಾರ ಇರುವ ಬೈಸಿಕಲ್, ತ್ರಿಚಕ್ರ ವಾಹನ, ಭಾರವಾದ ಕೃತಕ ಅಂಗ ಕೊಡಬಾರದು. ಇದರಿಂದ ಅಂಗವಿಕಲರಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಸಹಾಯ ಆಗುವ ಬದಲು ಮತ್ತಷ್ಟು ಹೊರೆ ಮತ್ತು ಕಿರಿಕಿರಿಯಾಗುತ್ತದೆ’ ಎಂದು ತಿಳಿಸಿದರು.
 
‘ಶೇ 3ರ ಅನುದಾನ ಬಳಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ, ದುರ್ಬಳಕೆಯಾದರೆ ಸಂಬಂಧಪಟ್ಟ ಅಧಿಕಾರಿಗಳು ತೊಂದರೆ ಎದುರಿಸಬೇಕಾಗುತ್ತದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ. ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದರೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.
 
ಮಹಿಳೆಯರಿಗೆ ಶೇ 33 ಅನುದಾನ ಬಳಕೆ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್.ಆರ್.ವಿಜಯ್, ‘ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲುದಾರಿಕೆಯೂ ಇದೆ. ಅವರ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಪೂರಕವಾಗುವ ರೀತಿ ಅನುದಾನ ಬಳಸಬೇಕು’ ಎಂದು ತಿಳಿಸಿದರು.
 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಂಜೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಕರಿಯಣ್ಣ, ಪ್ರಕಾಶ್, ಯೋಜನಾಧಿಕಾರಿ ಗಾಯತ್ರಿ, ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಅಂಬಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ವಾಸಂತಿ ಉಪ್ಪಾರ್ ಮತ್ತಿತರರಿದ್ದರು.
 
**
ಮಹಿಳಾ ಗ್ರಾಮ ಸಭೆ ನಡೆಸಿ
‘ಮಹಿಳಾ ಗ್ರಾಮ ಸಭೆ ನಡೆಸಿ ಮಹಿಳೆಯರಿಗೆ ಸರ್ಕಾರ ರೂಪಿಸಿದ ಯೋಜನೆ, ಶೇ 33ರ ಅನುದಾನ ಬಳಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ವರ್ಷಕ್ಕೆ ಕನಿಷ್ಠ 2 ಬಾರಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕು. ಇದರಿಂದ ಮಹಿಳೆಯರು ಮುಕ್ತವಾಗಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಉಪನಿರ್ದೇಶಕ ಎನ್.ಆರ್.ವಿಜಯ್‌ ಹೇಳಿದರು.
 
**
ಅಂಗವಿಕಲರಿಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ವೈದ್ಯಕೀಯ ಪುನರ್ವಸತಿಗೆ ಶೇ 3ರ ಅನುದಾನದಲ್ಲಿ ಅನುಕೂಲತೆಗಳನ್ನು ಮಾಡಿಕೊಡಲೇಬೇಕು. ಆಗ ಸರ್ಕಾರ ನೀಡಿದ ಅನುದಾನ ಸದ್ಬಳಕೆ ಆದಂತಾಗುತ್ತದೆ.
-ಚನ್ನಯ್ಯ, ನಿವೃತ್ತ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.