ADVERTISEMENT

ಗಡಿಭಾಗದಲ್ಲೊಂದು ಅಸಾಮಾನ್ಯ ಗ್ರಾಮೀಣ ಕಲಾ ಕುಸುಮ

ಗಂಗಾಧರ್ ವಿ ರೆಡ್ಡಿಹಳ್ಳಿ
Published 23 ಡಿಸೆಂಬರ್ 2017, 5:59 IST
Last Updated 23 ಡಿಸೆಂಬರ್ 2017, 5:59 IST
ಜನಪದ ಕ್ಷೇತ್ರದಿಂದ 2017ನೇ ಸಾಲಿನಲ್ಲಿ ಕಲಾವಿದ ಅರಳಾಪುರ ರಾಮಚಂದ್ರಪ್ಪ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ನೀಡುತ್ತಿರುವುದು
ಜನಪದ ಕ್ಷೇತ್ರದಿಂದ 2017ನೇ ಸಾಲಿನಲ್ಲಿ ಕಲಾವಿದ ಅರಳಾಪುರ ರಾಮಚಂದ್ರಪ್ಪ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ನೀಡುತ್ತಿರುವುದು   

ಗ್ರಾಮೀಣ ಭಾಗದ ದಲಿತ ಕುಟುಂಬವೊಂದರಲ್ಲಿ ಜನಿಸಿದ ರಾಮಚಂದ್ರಪ್ಪ ಅವರಿಗೆ ಸಂಗೀತವೆಂದರೆ ಪಂಚಪ್ರಾಣ ಶಾಸ್ತ್ರೀಯವಾಗಿ ಕಲಿಯಲು ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ ಸಂಗೀತವನ್ನೇ ಧ್ಯಾನಿಸುತ್ತ ಬೇರೆಯವರು ಹಾಡುವ ಹಾಡು ಮತ್ತು ನುಡಿಸುವ ಸಂಗೀತ ಅನುಕರಿಸಿದ್ದರಿಂದ ಇಂದು ಗಡಿಭಾಗದಲ್ಲಿ ಅಸಾಮಾನ್ಯ ಮಹಾ ಕಲಾವಿದ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮಧುಗಿರಿ ತಾಲ್ಲೂಕು ಪುರವರ ಹೋಬಳಿಯ ಅರಳಾಪುರ ಗ್ರಾಮದವರಾದ ಇವರು ತಾಯಿ ಸಿದ್ದಮ್ಮ ಮತ್ತು ತಂದೆ ಅಂಜಿನಪ್ಪ ಎಂಬ ದಂಪತಿಯ 12 ಜನ ಮಕ್ಕಳಲ್ಲಿ 8ನೇ ಮಗನಾಗಿ ಜನಿಸಿದರು. ಬಾಲ್ಯದಿಂದ ಸಾಮಾಜಿಕ ಮತ್ತು ಕೌಟುಂಬಿಕ ತೊಡರುಗಳನ್ನ ಎದುರಿಸುತ್ತ ಛಲ ಮತ್ತು ಕಠಿಣ ಪರಿಶ್ರಮದಿಂದ ಕಲಾವಿದನಾಗಿ ಬೆಳೆದ ಅಪ್ಪಟ ಗ್ರಾಮೀಣ ಕಲಾ ಕುಸುಮ ರಾಮಚಂದ್ರಪ್ಪ.

ಪ್ರಾಥಮಿಕ ಶಾಲೆಯ ಶಿಕ್ಷಕ ಇವರು 3ನೇ ತರಗತಿಯಲ್ಲಿ ಓದುವಾಗ ಸಂಗೀತ ಮತ್ತು ಗಾಯನದ ಬಗ್ಗೆ ಇರುವ ಕಾಳಜಿ ಗುರುತಿಸಿ ಗಾಯನ, ಸಂಗೀತ ಮತ್ತು ಅಭಿನಯಿಸಲು ಪದೇ ಪದೇ ಅವಕಾಶ ನೀಡುತ್ತಿದ್ದರು. ಮುಂದೆ ಡಾ.ಲಕ್ಷ್ಮಣ್ ದಾಸ್, ಮ.ಲ.ನ. ಮೂರ್ತಿ, ಹ.ಬ.ಮಹದೇವಪ್ಪ, ಡಾ.ರಂಗಾರೆಡ್ಡಿ ಕೋಡಿರಾಂಪುರ ಇತರ ಸಾಹಿತಿ ಮತ್ತು ಕಲಾವದರು ಸ್ಫೂರ್ತಿ ನೀಡಿದ್ದರಿಂದ ಗಾಯನ ಅವರ ಪಾಲಿಗೆ ಮೋಹವಾಗಿ ಬಿಟ್ಟು ಬಿಡದ ಹವ್ಯಾಸವಾದ ಕಾರಣ ಇಂದು ಸಾಂಸ್ಕೃತಿಕ ರಂಗದಲ್ಲಿ ಎಡರು ತೊಡರುಗಳ ಮಧ್ಯೆ ತನ್ನದೆಯಾದ ಛಾಪು ಮೂಡಿಸಿ ಹಲವಾರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ಹುಟ್ಟಿದಾಗಿನಿಂದ ಕಷ್ಟಗಳಲ್ಲೇ ಬೆಳೆದ ಇವರು ಉನ್ನತ ವಿದ್ಯಾಭ್ಯಾಸ ಪಡೆಯಬೇಕೆಂಬ ಆಸೆ ಕೈಗೂಡದೆ ಕೆಲಸಕ್ಕಾಗಿ ತಿರುಗಾಡಿ ಎಲ್ಲು ಸಿಗದ ಕಾರಣ ಕೊನೆಗೆ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಅದರ ಫಲವಾಗಿ ಇಂದು ಹಾರ್ಮೋನಿಯಂ, ಸಂಗೀತ, ಗಾಯನ, ರಂಗನಿರ್ದೇಶನ, ಬೀದಿನಾಟಕ, ಕಥೆ ಹೇಳುವುದು, ಕಲಾವಿದರ ಸಂಘಟನೆ, ಮತ್ತು ಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾವೃಂದ ಸಂಸ್ಥೆಯ ವ್ಯವಸ್ಥಾಪಕರಾಗಿ ಮುನ್ನಡೆಸುತ್ತಾ ಜನರನ್ನ ಮನರಂಜಿಸುತ್ತಿದ್ದಾರೆ.

ಗ್ರಾಮೀಣ, ತಾಲ್ಲೂಕು, ಜಿಲ್ಲಾ, ರಾಜ್ಯ, ಮತ್ತು ಹೊರ ರಾಜ್ಯಗಳಲ್ಲೂ ಜಾನಪದ ಹಬ್ಬ, ವಿಚಾರ ಸಂಕೀರ್ಣ, ಶಿಬಿರ, ಕಲಾಮೇಳಾ, ಉತ್ಸವ ಮತ್ತು ಗಡಿನಾಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಿ ಮರೆಯಾಗುತ್ತಿರುವ ಜನಪದ ಸೊಗಡನ್ನು ಎತ್ತಿ ಹಿಡಿದಿದ್ದಾರೆ. ಆದ್ದರಿಂದಲೇ ಜನಪದ ಕ್ಷೇತ್ರದಿಂದ ಸಂಘಟನ ಚತುರ, ರಂಗಭೂಷಣ, ಸುವರ್ಣ ಕರ್ನಾಟಕ, ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣ, ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಪರೋಕ್ಷವಾಗಿ ಶಕ್ತಿ ಮತ್ತು ಸ್ಫೂರ್ತಿ ತುಂಬಿದ ಕನ್ನಡ ಸಂಸ್ಕೃತಿ ಇಲಾಖೆಗೆ ಇದೇ ಸಂದರ್ಭದಲ್ಲಿ ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಅರಳಾಪುರ ರಾಮಚಂದ್ರಪ್ಪ ಅವರ ಮೊಬೈಲ್ ಸಂಖ್ಯೆ 9880754558.

ದೇಸಿ ಕಲೆಗಳು ಅರಳುವುದು ಬೆವರು ಸುರಿಸುವವರ ನಡುವೆ. ಅವು ಮೌನ ಸಂದೇಶವನ್ನು ನೀಡುವ ಮೂಲಕ ಸಾಮಾಜಿಕ ಬದಲಾವಣೆಗಾಗಿ ಒಳವಾಹಿನಿಯಾಗಿ ಕೆಲಸ ಮಾಡುತ್ತವೆ. ಅನಕ್ಷರಸ್ತರು ಅಪ್ಪಿಕೊಳ್ಳುವ ಕಲೆಯಲ್ಲಿ ಅಂತ್ಕರ್ಣದ ಆರ್ಧ್ರತೆ ಇರುತ್ತದೆ. ನೋಡುತ್ತಾ ಕಲಿಯುವುದು ಮಾಡುತ್ತಾ ನಲಿಯುವುದು ಅದರ ಲಕ್ಷಣ. ಇದು ಉಳ್ಳವರ ಪ್ರದರ್ಶನವಲ್ಲ. ಹರಿದ ಬಟ್ಟೆಯ ಹಸಿದ ಹೊಟ್ಟೆಯ ಹನಿವ ಕಂಗಳರ ಕಲಾ ಪ್ರದರ್ಶನ. ಇಂತಹ ಕಲಾವಿದನಿಗೆ ಮತ್ತಷ್ಟು ಯಶಸ್ಸು ಲಭಿಸಲಿ ಎಂದು ಹಿರಿಯ ಸಾಹಿತಿ ಪ್ರೊ. ಮ.ಲ.ನ. ಮೂರ್ತಿ ಹಾರೈಸಿದರು.

* * 

ಅರಳಾಪುರ ರಾಮಚಂದ್ರಪ್ಪ ಅವರನ್ನು ಹಲವು ವರ್ಷಗಳಿಂದ ಹತ್ತಿರದಿಂದ ಬಲ್ಲವನಾಗಿದ್ದು, ಜಾನಪದ ಕ್ಷೇತ್ರದ ಅಪರೂಪದ ಮುತ್ತು. ಎಲೆಮರಿಯ ಕಾಯಂತೆ ಇರುವ ಇವರಲ್ಲಿರುವ ಪ್ರತಿಭೆ ಜ್ಞಾನ, ಕಾಳಜಿ, ಮತ್ತು ದೇಸಿ ಕಲೆಯನ್ನು ಉಳಿಸುವ ಪ್ರಯತ್ನ ಮತ್ತು ಹೋರಾಟ, ನಿಜಕ್ಕೂ ಶ್ಲಾಘನೀಯ.
ಮೈಲಾರಪ್ಪ ರಂಗಭೂಮಿ ಕಲಾವಿದ, ಕರ್ನಾಟಕ ನಾಟಕ ಅಕ್ಯಾಡೆಮಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.