ADVERTISEMENT

ಗಿರಿಜನ ಉಪಯೋಜನೆ: ಜಿಲ್ಲೆಗೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:01 IST
Last Updated 25 ಮೇ 2017, 5:01 IST

ತುಮಕೂರು: ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದೇವರಾಜ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು.

‘ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ ಅನುದಾನದ ಪೈಕಿ ಮಾರ್ಚ್‌ ಅಂತ್ಯಕ್ಕೆ ಶೇ 98ರಷ್ಟು  ಬಳಕೆ ಮಾಡಲಾಗಿದೆ. ಗಿರಿಜನ ಉಪಯೋಜನೆಯಡಿ ಶೇ  127ರಷ್ಟು ಹೆಚ್ಚುವರಿ ಅನುದಾನ ಬಳಕೆಯಾಗಿದೆ’ ಎಂದರು.

‘ತೋಟಗಾರಿಕೆ, ಪಶುಸಂಗೋಪನೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಂದಾಯ ಮತ್ತಿತರ ಇಲಾಖೆಗಳು ಅನುದಾನ ಬಳಕೆಯಲ್ಲಿ ಶೇ. 100ರಷ್ಟು ಪ್ರಗತಿಯನ್ನು ಸಾಧಿಸಿವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಅನುದಾನ ಬಳಕೆಯಲ್ಲಿ ಹಿಂದೆ ಉಳಿದಿರುವ ಇಲಾಖೆ ಅಧಿಕಾರಿಗಳಿಗೆ  ಶೀಘ್ರವೇ  ಉಳಿಕೆ ಅನುದಾನ ಬಳಕೆ ಮಾಡಿಕೊಳ್ಳಬೇಕೆಂದು’ ಸೂಚಿಸಿದರು.
‘ಪಾವಗಡ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯ ಅನುದಾನ ಬಳಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಂಗಸ್ವಾಮಿ ಹೇಳಿದರು.

ಎತ್ತಿನಹೊಳೆ, ಹೇಮಾವತಿ ನಿಗಮದಿಂದ ಗಿರಿಜನ ಉಪಯೋಜನೆಯಡಿ ಸಿಮೆಂಟ್‌ ರಸ್ತೆಗಳ ನಿರ್ಮಾಣ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆಗಳಲ್ಲಿ ಮಾಡಿರುವ ಕಾಮಗಾರಿಗಳನ್ನೇ ಮತ್ತೆ ತೋರಿಸುವ ಸಂಭವವಿದೆ. ಕಾಮಗಾರಿ ಕೈಗೊಳ್ಳುವ ಮುನ್ನ ಜಂಟಿ ಸಮೀಕ್ಷೆ ನಡೆಸಿ ಎಚ್ಚರಿಕೆ ವಹಿಸಬೇಕು ಎಂದು ಮೋಹನ್‌ರಾಜ್ ಅಧಿಕಾರಿಗಳಿಗೆ ತಿಳಿಸಿದರು.

ಮೀಸಲಾತಿ ಪಾಲಿಸಿ
ಕಡ್ಡಾಯ ಶಿಕ್ಷಣ ಕಾಯ್ದೆಯಡಿ (ಆರ್‌ಟಿಇ) ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ  ಮೀಸಲಾತಿ ಪಾಲನೆಯಾಗಿರುವ ಬಗ್ಗೆ ಪರಿಶೀಲಿಸಬೇಕು
ಎಂದು ಮೋಹನ್‌ರಾಜ್‌ ಹೇಳಿದರು.

ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದಲಿತ ಸಂಘಟನೆಗಳು ದೂರಿವೆ. ಈ ಬಗ್ಗೆ ನಿಗಾ ವಹಿಸಬೇಕು. ಖಾಸಗಿ ಶಾಲೆಗಳು ವಂತಿಗೆ ಪಡೆಯುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ವಂತಿಗೆ ಪಡೆಯುವ ಶಾಲೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT