ADVERTISEMENT

ಜಿಎಸ್‌ಟಿ ಪಾಲಿಸದಿದ್ದರೆ ಕಷ್ಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:48 IST
Last Updated 22 ಜೂನ್ 2017, 9:48 IST

ತುಮಕೂರು: ‘ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಎಂಬುದು ಏಕರೂಪ ತೆರಿಗೆ ಕಾಯ್ದೆಯಡಿ ವ್ಯವಹರಿಸುವ ಒಂದು ವ್ಯವಸ್ಥೆ. ಇದನ್ನು ಅರ್ಥಮಾಡಿ ಕೊಂಡು ಅನುಸರಿಸದೇ ಇದ್ದರೆ, ಉದ್ದಿಮೆದಾರರು, ವ್ಯಾಪಾರಸ್ಥರು ವ್ಯವಹಾರ ಮಾಡುವುದು ಕಷ್ಟವಾಗುತ್ತದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಡಿ.ಪಿ.ಪ್ರಕಾಶ್ ಹೇಳಿದರು.

ಜಿಲ್ಲಾ ವಾಣಿಜ್ಯ ಸಂಸ್ಥೆ(ಟಿಡಿಸಿಸಿಐ), ತೆರಿಗೆ ಸಲಹೆಗಾರರ ಸಂಘ, ಲೆಕ್ಕಪರಿಶೋಧಕರ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಜಿಎಸ್‌ಟಿ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪೂರೈಕೆ ವಲಯ(ಸಪ್ಲೈ) ಎಂಬುದು ಜಿಎಸ್‌ಟಿಯ ಹೃದಯಭಾಗ. ವಸ್ತುಗಳ ಪೂರೈಕೆ ಸ್ಥಳದಿಂದಲೇ ಜಿಎಸ್‌ಟಿ ತೆರಿಗೆ ನಿರ್ಧರಿತವಾಗುತ್ತದೆ. ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವಲ್ಲಿ ಉಪೇಕ್ಷೆ ಮಾಡುವುದು, ತೆರಿಗೆ ಕಟ್ಟುವಲ್ಲಿ ವ್ಯತ್ಯಾಸ ಮಾಡಬಾರದು. ಇದರಿಂದ ವ್ಯವಹಾರಕ್ಕೆ ಪದೇ ಪದೇ ಅಡಚಣೆಯುಂಟಾಗುತ್ತದೆ. ತೆರಿಗೆ ಕಟ್ಟುವುದರಿಂದ ಯಾವುದೇ ರೀತಿಯಲ್ಲೂ ನೀವು ಬಚಾವ್ ಆಗಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಜಿಎಸ್‌ಟಿಯಲ್ಲಿ ಮನುಷ್ಯರ ಪಾತ್ರ ಬಹಳ ಕಡಿಮೆ ಇರುತ್ತದೆ. ಏನಿದ್ದರೂ ಆನ್‌ಲೈನ್‌ನಲ್ಲಿಯೇ ಪ್ರಕ್ರಿಯೆ ನಡೆಯುತ್ತದೆ. ಆದರೆ, ಪ್ರತಿಯೊಂದಕ್ಕೂ ಕಣ್ಗಾವಲು ಇದ್ದೇ ಇರುತ್ತದೆ. ಸೀಮಾ ಸುಂಕ, ಸೇವಾ ತೆರಿಗೆ, ಮಾರಾಟ ತೆರಿಗೆ, ಸಿಎಸ್‌ಟಿ, ಎಂಟ್ರಿ ಟ್ಯಾಕ್ಸ್ ಹೀಗೆ 17 ಬಗೆಯ ತೆರಿಗೆಗಳನ್ನು ತೆಗೆದು ಹಾಕಿ, ಜಿಎಸ್‌ಟಿ ಎಂಬ ಒಂದೇ ರೀತಿ ತೆರಿಗೆ ವ್ಯವಸ್ಥೆ ಅಳವಡಿಸಲಾಗಿದೆ’ ಎಂದರು.

₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿಯಲ್ಲಿ ತೆರಿಗೆ ವಿನಾಯಿತಿ ಇದೆ. ₹ 20 ಲಕ್ಷದ ಬಳಿಕ ಸ್ವಲ್ಪ ಮೊತ್ತದ ವ್ಯವಹಾರ ನಡೆಸಿದರೂ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಅಕ್ಕಿ, ಬೇಳೆ, ರಾಗಿ ಸೇರಿ ಆಹಾರ ಪದಾರ್ಥಗಳ ವಹಿವಾಟಿಗೂ ತೆರಿಗೆ ಇಲ್ಲ. ಕೋಟಿಗಟ್ಟಲೆ ವ್ಯಾಪಾರ ಮಾಡಿದರೂ ವಿನಾಯಿತಿ ನೀಡಲಾಗಿದೆ.

ಇದರ ಹಿಂದಿನ ಉದ್ದೇಶ, ಅಕ್ಕಿ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳು ಜನರಿಗೆ ಲಭ್ಯವಾಗಬೇಕು. ತೆರಿಗೆ ಕಾರಣಕ್ಕೆ ಪೂರೈಕೆಯಲ್ಲಿ ಅಡಚಣೆಯಾಗಬಾರದೆಂದು ಕೇಂದ್ರ ಸರ್ಕಾರ ಈ ವಿನಾಯಿತಿ ಕಲ್ಪಿಸಿದೆ ಎಂದು ವಿವರಿಸಿದರು.

‘₹19.95 ಲಕ್ಷ ಮೊತ್ತದ ಅಕ್ಕಿ ವ್ಯವಹಾರ ಮಾಡಿ, ₹ 5 ಲಕ್ಷ ಮೊತ್ತದ ಟೂತ್‌ ಪೇಸ್ಟ್ ವ್ಯವಹಾರ ಮಾಡಿದರೆ, ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕೆ ತೆರಿಗೆ ಕಟ್ಟಲೇಬೇಕು’ ಎಂದು ಹೇಳಿದರು.

‘ಕೃಷಿಕರು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಕೃಷಿಕರಾಗಿ ಕೃಷಿ ಉತ್ಪನ್ನ ಬೆಳೆಯುತ್ತಿರಬೇಕು. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಮಾಡಿದರೆ, ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾರೆ. ಉದಾಹರಣೆಗೆ ಒಬ್ಬ ರೈತನದ್ದು ಹೆದ್ದಾರಿ ಪಕ್ಕದಲ್ಲಿ 20 ಎಕರೆ ಜಮೀನಿದೆ. ಅದರಲ್ಲಿ ಹೆದ್ದಾರಿ ನಿರ್ಮಾಣ ಸಂಸ್ಥೆಯವರು ಸಿಮೆಂಟ್, ಕಬ್ಬಿಣ ಸೇರಿ ಸರಕುಗಳನ್ನು ಹಾಕಲು 5 ಎಕರೆ ಭೂಮಿ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೇಳುತ್ತಾರೆ. ರೈತ ಕೊಟ್ಟರೆ ಅದಕ್ಕೆ ತೆರಿಗೆ ಪಾವತಿಸಲೇಬೇಕು’ ಎಂದು ತಿಳಿಸಿದರು.

‘₹20 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಮಾಡಿಕೊಂಡೂ ಜಿಎಸ್‌ಟಿಗೆ ನೋಂದಣಿ ಮಾಡಿಸಿಕೊಳ್ಳದೇ ಇದ್ದರೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸೂಚನೆ ನೀಡಲಾಗುತ್ತದೆ. ಬಳಿಕ ನೋಟಿಸ್ ಕೊಡಲಾಗುತ್ತದೆ. ಅದಾಗಿಯೂ ನೋಂದಣಿ ಮಾಡಿಸಿಕೊಳ್ಳದೇ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಟಿಡಿಸಿಸಿಐ ತೆರಿಗೆ ಸಮಿತಿ ಅಧ್ಯಕ್ಷ ಟಿ.ಜೆ.ಗಿರೀಶ್, ಸುಜ್ಞಾನ ಹಿರೇಮಠ, ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಸುರೇಶ್‌ರಾವ್, ಕಾರ್ಯದರ್ಶಿ ಎಸ್.ಪ್ರಕಾಶ್, ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ವಾಸುದೇವ್ ಇದ್ದರು. ತುಮಕೂರು ವಾಣಿಜ್ಯ ಸಂಘದ ಅಧ್ಯಕ್ಷ ಎ.ಆರ್.ಶ್ರೀನಾಥ್ ಸ್ವಾಗತಿಸಿದರು. ನಿರ್ದೇಶಕ ಸತ್ಯನಾರಾಯಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.