ADVERTISEMENT

ಜೈಲಿಗೆ ಹೋದದ್ದೇ ದೊಡ್ಡ ಸಾಧನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:57 IST
Last Updated 13 ನವೆಂಬರ್ 2017, 9:57 IST
ಸಮಾವೇಶವನ್ನು ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ , ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಜೆ.ರಾಜಣ್ಣ, ಎಚ್.ಕೆಂಚಮಾರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಇದ್ದರು
ಸಮಾವೇಶವನ್ನು ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ , ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಜೆ.ರಾಜಣ್ಣ, ಎಚ್.ಕೆಂಚಮಾರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಇದ್ದರು   

ಮಧುಗಿರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಸೇರಿದಂತೆ ಸಾಲು ಸಾಲು ಸಚಿವರು ಜೈಲಿಗೆ ಹೋಗಿದ್ದೇ ದೊಡ್ಡ ಸಾಧನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವ್ಯಂಗ್ಯವಾಡಿದರು. ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ ಮಧುಗಿರಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿ ಮುಖಂಡರು ಪರಿವರ್ತನಾ ಯಾತ್ರೆ ಮಾಡುವ ಬದಲಿಗೆ ತಾವೇ ಪರಿವರ್ತನೆ ಆಗಬೇಕು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ದಾಖಲೆಗಳಿದ್ದರೆ ನ್ಯಾಯಾಲಯ, ಲೋಕಾಯುಕ್ತ ಹಾಗೂ ಎಸಿಬಿಗೆ ನೀಡಲಿ’ ಎಂದು ಸವಾಲು ಹಾಕಿದರು.

‘ಜೆಡಿಎಸ್ 30 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲುವುದೂ ಕಷ್ಟವಾಗಿದೆ. ಅಲ್ಪಸಂಖ್ಯಾತರು ಜೆಡಿಎಸ್ ಪರ ನಿಲ್ಲುವ ಬದಲು ಕಾಂಗ್ರೆಸ್ ಪರ ನಿಲ್ಲಬೇಕು’ ಎಂದು ಮನವಿ ಮಾಡಿದರು.
‘ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳಿಗೆ ವರದಾನವಾಗಲಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲೂ ಪಕ್ಷದ ಶಾಸಕರು ಆಯ್ಕೆಯಾಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ‘ಬಿ‌ಜೆಪಿ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಜೆಡಿಎಸ್ ಸೂಟ್ ಕೇಸ್ ಸಂಸ್ಕೃತಿ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ತಳಸಮುದಾಯಗಳಿಗೂ ಅಧಿಕಾರ ಕೊಟ್ಟು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ’ ಎಂದರು.

‘ಕಾಂಗ್ರೆಸ್ ಪಕ್ಷವನ್ನು ನನ್ನ ಉಸಿರು ಇರುವವರೆಗೂ ತೊರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ಹಾಗೂ ಮಧುಗಿರಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು’ ಎಂದರು.ಯುವ ಕಾಂಗ್ರಸ್ ಕಾರ್ಯಕರ್ತರು ಜಿ.ಪರಮೇಶ್ವರ್ ಹಾಗೂ ಮುಖಂಡರನ್ನು ಬೂಗಣ್ಯರನ್ನು ಬೈಕ್ ರ‍್ಯಾಲಿ ಮೂಲಕ ವೇದಿಕೆಗೆ ಕರೆ ತಂದರು.

ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ, ಚೌಡಪ್ಪ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಕೆಪಿಸಿಸಿ ವೀಕ್ಷಕ ಅನಿಲ್ ಕುಮಾರ್ ಪಾಟೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.