ADVERTISEMENT

ಜ.26ರಂದು ಸರ್ಕಾರದ ವಿರುದ್ಧ ‘ನಿರ್ದಿಷ್ಟ ದಾಳಿ’

ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಮುಖಂಡರ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 4:48 IST
Last Updated 19 ಜನವರಿ 2017, 4:48 IST
ಜ.26ರಂದು ಸರ್ಕಾರದ ವಿರುದ್ಧ ‘ನಿರ್ದಿಷ್ಟ ದಾಳಿ’
ಜ.26ರಂದು ಸರ್ಕಾರದ ವಿರುದ್ಧ ‘ನಿರ್ದಿಷ್ಟ ದಾಳಿ’   

ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರಿಯಾದ ಸ್ಪಂದನೆ ದೊರಕದ ಕಾರಣದಿಂದ ಜನವರಿ 26ರಂದು ‘ನಿರ್ದಿಷ್ಟ ದಾಳಿ’ (ಸರ್ಜಿಕಲ್‌ ಸ್ಟ್ರೈಕ್‌) ಮಾದರಿಯ ಪ್ರತಿಭಟನೆ ನಡೆಸಲಾಗುವುದು ಎಂದು ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಅಧ್ಯಕ್ಷ  ವಿಜಯಕುಮಾರ್‌ ಶೆಟ್ಟಿ ತಿಳಿಸಿದರು.

ಸಮಿತಿಯ ಇತರೆ ಮುಖಂಡರ ಜೊತೆ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗುವ ತೊಂದರೆಗಳ ಕುರಿತು ಮುಖ್ಯಮಂತ್ರಿಯವರಿಂದ ಸ್ಪಂದನೆ ನಿರೀಕ್ಷಿಸಿದ್ದೆವು. ಈವರೆಗೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಆದ್ದರಿಂದ ಗಣರಾಜ್ಯೋತ್ಸವ ದಿನದಂದು ಸರ್ಕಾರದ ವಿರುದ್ಧ ಪ್ರಬಲ ಪ್ರತಿಭಟನೆಯೊಂದನ್ನು ನಡೆಸಲು ನಿರ್ಧರಿಸಿದ್ದೇವೆ’ ಎಂದರು.

ಪ್ರತಿಭಟನೆಯ ಸ್ವರೂಪದ ಕುರಿತ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ ಅವರು, ‘ಸಮಿತಿಯ ಪ್ರಮುಖ ಮುಖಂಡರು ಸಭೆ ಸೇರಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಅದಕ್ಕೂ ಮುನ್ನ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಕೆಲವೇ ಮುಖಂಡರಿಗೆ ಮಾತ್ರ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಜ.26ರ ಬೆಳಿಗ್ಗೆ ಸಮಿತಿಯ ಎಲ್ಲಾ ಸದಸ್ಯರ ಜೊತೆ ಸೇರಿ ಪ್ರತಿಭಟನೆ ಆರಂಭಿಸಲಾಗುವುದು. ಅಲ್ಲಿಯವರೆಗೂ ಗೋಪ್ಯತೆ ಕಾಯ್ದುಕೊಳ್ಳುತ್ತೇವೆ’ ಎಂದು ಹೇಳಿದರು.

ಅಧಿಕಾರಿಗಳಿಂದ ಅನ್ಯಾಯ: ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿನ ವಾಸ್ತವಿಕ ಸ್ಥಿತಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಆದೇಶಿಸಿತ್ತು. ವರದಿ ಸಲ್ಲಿಸಲು ಜ.14ರ ಗಡುವು ನೀಡಿತ್ತು. ಆದರೆ, ಸಮೀಕ್ಷೆಯನ್ನು ತಮಗೆ ಬೇಕಾದಂತೆ ನಡೆಸಿರುವ ಅಧಿಕಾರಿಗಳು, ನಿಗದಿತ ಸಮಯದಲ್ಲಿ ವರದಿಯನ್ನೂ ಸಲ್ಲಿಸಿಲ್ಲ. ದುರುದ್ದೇಶದಿಂದ ಕಾಲಾವಕಾಶ ಪಡೆದುಕೊಂಡಿದ್ದಾರೆ ಎಂದರು.

ಅಧಿಕಾರಿಗಳು ಮತ್ತು ಎಲ್ಲಾ ಪಕ್ಷಗಳ ರಾಜಕಾರಣಿಗಳು ಸೇರಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹಣ ಲೂಟಿ ಮಾಡುವುದಕ್ಕಾಗಿ ಯೋಜನೆಯನ್ನು ಮುಂದುವರಿಸಿಕೊಂಡುವ ಹೋಗುವ ಸಂಚು ರೂಪಿಸಿದ್ದಾರೆ ಎಂದು ದೂರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಯೋಜನೆಯನ್ನು ಬೆಂಬಲಿಸಿರುವ ಕುರಿತು ಪ್ರಶ್ನಿಸಿದಾಗ, ‘ಸಂಸದ ನಳಿನ್‌ಕುಮಾರ್ ಕಟೀಲ್‌ ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅವರ ಜೊತೆ ಈ ವಿಚಾರ ಚರ್ಚಿಸಿದ್ದೇವೆ. ಯಡಿಯೂರಪ್ಪ ಅವರನ್ನು ಮನವೊಲಿಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯ ಸಂಸದರು ನಮ್ಮ ಜೊತೆ ಇದ್ದಾರೆ’ ಎಂದರು.

ಸಮಿತಿಯಲ್ಲಿರುವ ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ ಮತ್ತು ಸತ್ಯಜಿತ್ ಸುರತ್ಕಲ್‌ ಮಾತನಾಡಿ, ‘ಬಿಜೆಪಿ ರಾಜ್ಯ ಘಟಕದ ನಿಲುವು ಮತ್ತು ಜಿಲ್ಲಾ ಘಟಕದ ನಿಲುವು ಒಂದೇ ಆಗಿಲ್ಲ. ಖಡಾಖಂಡಿತವಾಗಿ ನಾವು ಯೋಜನೆಯನ್ನು ವಿರೋಧಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರುದ್ಧ ನಿಲುವು ತಾಳದಂತೆ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇವೆ. ಜ.21 ಮತ್ತು 22ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ಆ ದಿನ ಅವರ ಮನವೊಲಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ಹಲ್ಲೆಯೊಂದೇ ಬಾಕಿ!
‘ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಎತ್ತಿನಹೊಳೆ ಯೋಜನೆ ನಿಲ್ಲಿಸಬಹುದು. ಆದರೆ, ಅಧಿಕಾರದ ಆಸೆಗೆ ಜೋತುಬಿದ್ದಿರುವ ಅವರು ಜಿಲ್ಲೆಯ ಜನರ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ’ ಎಂದು ವಿಜಯಕುಮಾರ್‌ ಶೆಟ್ಟಿ ಆಪಾದಿಸಿದರು.

‘ಎಲ್ಲಾ ರೀತಿಯಿಂದಲೂ ಸಚಿವರಿಗೆ ಮನವಿ ಮಾಡಿದ್ದೇವೆ. ಯಾವುದಕ್ಕೂ ಅವರು ಸ್ಪಂದಿಸುತ್ತಿಲ್ಲ. ಜಿಲ್ಲೆಯ ಜನರ ಪರವಾಗಿ ಧ್ವನಿ ಎತ್ತಲು ಸಚಿವ ಬಿ.ರಮಾನಾಥ ರೈ ತಯಾರಿಲ್ಲ. ಜನರ ಪರವಾಗಿನಿಲ್ಲಿ ಎಂದು ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವುದೊಂದೇ ಬಾಕಿ ಇದೆ’ ಎಂದು ಅವರು ಹೇಳಿದರು.

ADVERTISEMENT

*
ಇಷ್ಟು ದಿನ ಜಿಲ್ಲೆಯ ಜನರನ್ನು ಕಡೆಗಣಿಸಿರುವುದಕ್ಕೆ ಸರಿಯಾದ ಉತ್ತರ ಕೊಡುವ ಕಾಲ ಈಗ ಬಂದಿದೆ. ಜ.26ರಂದು ನಾವು ಕೈಗೆತ್ತಿಕೊಳ್ಳುವ ಹೋರಾಟ ರಾಜ್ಯ ಸರ್ಕಾರದ ಪಾಲಿಗೆ ದೊಡ್ಡ ಸವಾಲಾಗಲಿದೆ.
-ವಿಜಯಕುಮಾರ್ ಶೆಟ್ಟಿ, ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.